೧.
ಬೆಳಕುಯಿಂದು ಸುತ್ತಲೂ ಹರಿಯಲಿಲ್ಲ ಬದುಕ ತರಿದೆಯಾ ಗೆಳತಿ
ಜ್ಯೋತಿಯಿಂದು ಸುಮ್ಮನೆ ಉರಿಯಲಿಲ್ಲ ಈಗಲಾದರೂ ಅರಿತೆಯಾ ಗೆಳತಿ
ಜೀವನವು ಸಾಗದಿರೆ ಕಲ್ಲುಗಳ ನಡುವೆ ಮುಳ್ಳುಗಳಿದ್ದಂತೆ ತಿಳಿಯು
ಕೂತುಂಡರೆ ಕುಡಿಕೆ ಹೊನ್ನು ಕರಗುವುದೆಂದು ಹಳಿದೆಯಾ ಗೆಳತಿ
ಚಿಂತೆಗಳ ನಡುವೆಯೇ ಸವಿಯು ನವಿರಾಗಿ ಹುಟ್ಟುವುದೆ ಹೇಳು
ಜೀತಗಳ ಜೊತೆಯಲ್ಲೆ ಕೈಹಿಡಿದು ಸಾಗುವುದ ಕಲಿತೆಯಾ ಗೆಳತಿ
ಜರೆದರೆ ಮತ್ತಷ್ಟೂ ಕೆಡುಕದವು ಹೃದಯದಲಿ ಹೆಚ್ಚುವುದು ಕಾಣೆಯ
ನಟನೆಗಳು ಕೊನೆಯ ಕ್ಷಣದ ಕಾಲಕ್ಕೆಂದು ಕರೆದೆಯಾ ಗೆಳತಿ
ಉತ್ತಮರ ಸೌಜನ್ಯ ತಿಳುವಳಿಕೆ ಬೇಡವಾಗಿದೆ ಯುವ ಜನರಿಗಿಂದು
ಈಶನ ನೀತಿಕತೆಗಳಿಗೆ ಜೀವವು ಬರಬಹುದೆಂದು ಹೊರಟೆಯಾ ಗೆಳತಿ
***
೨.
ನಾನೆ ಎನುವ ಭಾವವೇಕೆ ಪ್ರೀತಿ ನನ್ನ ಒಲವೆ
ಬಾನ ನಡುವೆ ತೇಲಿಯಿರುವ ಚಂದ್ರ ನಿನ್ನ ಒಲವೆ
ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆಯಿಂದು
ತನುವು ಮುರುಟಿ ಬಾಡದಿರಲು ಬದುಕೆ ಬಣ್ಣ ಒಲವೆ
ಬೆಟ್ಟ ಗುಡ್ಡದೊಳಗೆ ಸದ್ದು ಎನಿತು ಕೇಳಿ ಆಯಿತು
ಚಿತ್ತ ಕದಡಿ ಹೋಗದಿರಲು ಹೃದಯ ಹೊನ್ನ ಒಲವೆ
ಸೌಮ್ಯ ಇರದ ತಾಣದಲ್ಲಿ ಸುಖವು ಇರುವುದೇಕೆ
ಸುಮವು ಬಿರಿದು ನಲಿಯುವಾಗ ರಶ್ಮಿ ಕಣ್ಣ ಒಲವೆ
ಪುರುಷ ತತ್ವ ಎದ್ದು ಬರುತ ಸವಿಯ ನುಡಿದ ಈಶ
ಕರುಣೆ ಇರುವ ಬುವಿಯ ಒಳಗೆ ಮೋಹ ರನ್ನ ಒಲವೆ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!