ಅನುವಾದಿಸು ನಿನ್ನ ಹೃದಯ ಭಾವಗಳ

ಅರಿಯದು ನನ್ನ ಪುಟ್ಟ ಹೃದಯ

ನಿನ್ನ ನಗುವ ಕೌತುಕ ಬೆಡಗುಗಳ

ಗೀಚಿಹೆ ಚಿತ್ರಗಳ ಸಾಗುತಿರಲಿ ಸಮಯ.

 

ಅನುವಾದಿಸು ಆ ಪಿಸುಮಾತಿನ ಪದವ 

ಕರ್ಣಗಳ ಕ್ಷಮಿಸು ನೀ ಬಾರಿಬಾರಿ

ತಟ್ಟಿಹೆ ನನ್ನೆದೆಯ ಒಲವ ಕದವ 

ಅಲ್ಲಿ ಸಾಗಲಿ ನಿನ್ನದೇ ಸವಾರಿ.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು

***

ಗಝಲ್

ಮತ್ತದುವೆ ಜೀವನದಿ ಸಾಗುತಿರಲೂ ಯಾನ ಹುಣ್ಣಿಮೆಯ *ಲೋಕದೊಳು* ಎಲೆ ಮಾನವ

ಗತ್ತಿರದೆ ಬಾಳುವೆಲಿ ಸುಖವಿರುವ ಜ್ಯೋತಿಯೊಳು ಚೆಲುವಾಗಿ *ಒಲವಾಗು* ಎಲೆ ಮಾನವ

 

ಮನದೊಳಗೆ ಸವಿಯಿರಲದು ಚಿಂತೆ ಏತಕೆಯಿಂದು ಹೇಳಲಾರೆಯ ನೀನು ನಗುಮೊಗದಲಿ

ತನುವೊಳಗೆ ಕಹಿಯಿರದೆ ಬರಲು ಜೇನಿನಹೊಳೆ ಕುಲದೊಳಗೆ *ಛಲವಿರಲು* ಎಲೆ ಮಾನವ

 

ಮೋಹದಾಚೆಗೆ ಸರಿದಿಹ ವನವಾಸ ಉಪವಾಸ ಸನಿಹದೊಳು ಬೇಕಿದೆಯೇ ನಿನ್ನೊಲವಲಿ

ಚಿತ್ತಾರದಲಿ ನೋಟವನು ಹರಿಸುತಲಿ ಸಾಗುತಿರೆ ಪ್ರತಿಬಿಂಬ *ಕಾಣುವುದು* ಎಲೆ ಮಾನವ

 

ಮಸಣದೀಚೆಗೆ ಇರುವ ಪ್ರೀತಿಯನು ಹುಡುಕುತಿರು ಪ್ರೇಮವದುಯೆಂದೂ ಚಿತ್ತೈಸಲಿ

ಮತ್ತದುವೆ ನೋವುಗಳು ಮರೆಯಾಗುತ ಹೊಸದೊಂದು *ಸಂಕುಲವು* ಎಲೆ ಮಾನವ

 

ಸಾಗರಕೆ ಕೊನೆ ಇಹುದೆ ನೋಡಿರುವಿಯಾ ಕನಸುಗಳ ಬೀಜಗಳೇ ದಡವ ಸೇರಿದೆ ಈಶಾ

ತಡೆಗೋಡೆ ಕುಸಿಯದಿರೆ ಒಲುಮೆಯ ಉಸಿರಲಿ ಹಸಿರಾಗೆ *ಬೆರೆಯುತಿರು* ಎಲೆ ಮಾನವ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ