ಬಾಲಕೃಷ್ಣ ಯೆಯ್ಯಾಡಿ ಇವರ ಸಂಪಾದಕತ್ವದಲ್ಲಿ ಕಳೆದ ೧೬ ವರ್ಷಗಳಿಂದ ಹೊರ ಬರುತ್ತಿರುವ ಸ್ಥಳೀಯ ಸುದ್ದಿ ಪಾಕ್ಷಿಕ “ಪ್ರಿಯ ಅತಿಥಿ". ಪತ್ರಿಕೆಯನ್ನು ಹದಿನಾರು ವರ್ಷಗಳ ಮೊದಲು ಆರಂಭಿಸಿದಾಗ ಅದು ಕೇವಲ ‘ಅತಿಥಿ' ಎಂಬ ಶಿರೋನಾಮೆಯನ್ನು ಹೊಂದಿದ್ದು, ಟ್ಯಾಬಲಾಯ್ಡ್ ಆಕಾರದಲ್ಲಿ ಹೊರಬರುತ್ತಿತ್ತು. ಖಾಸಗಿ ಪ್ರಸಾರಕ್ಕೆ ಮಾತ್ರ ಸೀಮಿತವಾಗಿದ್ದ ಪತ್ರಿಕೆಯು ದೆಹಲಿಯ ಆರ್ ಎನ್ ಐ ನಲ್ಲಿ ನೋಂದಾವಣೆಯಾದ ಬಳಿಕ ‘ಪ್ರಿಯ ಅತಿಥಿ' ಎಂಬ ಶಿರೋನಾಮೆಯನ್ನು ಪಡೆದುಕೊಂಡಿತು. 

ಈಗ ಪತ್ರಿಕೆಯ ಆಕಾರ ವಾರ್ತಾ ಪತ್ರಿಕೆಯದ್ದಾಗಿದ್ದು, ನಾಲ್ಕು ಪುಟಗಳನ್ನು ಹೊಂದಿದೆ. ವಿಶೇಷ ಸಂದರ್ಭಗಳಲ್ಲಿ ಪುಟಗಳ ಸಂಖ್ಯೆ ಹೆಚ್ಚಾಗುವುದೂ ಇದೆ. ಎರಡು ಪುಟಗಳು ವರ್ಣ ರಂಜಿತವಾಗಿದ್ದು ಉಳಿದೆರಡು ಕಪ್ಪು ಬಿಳುಪು ಮುದ್ರಣವನ್ನು ಹೊಂದಿದೆ. ಮಂಗಳೂರಿನ ಯೆಯ್ಯಾಡಿ, ಪದವಿನಂಗಡಿ, ಬೊಂದೇಲ್, ಪಚ್ಚನಾಡಿ, ವಾಮಂಜೂರು, ಕಾವೂರು ಮುಂತಾದ ಊರುಗಳ ಸ್ಥಳೀಯ ಸುದ್ದಿಗಳಿಗೇ ಅಧಿಕ ಪ್ರಾಶಸ್ತ್ಯವನ್ನು ಈ ಪತ್ರಿಕೆಯಲ್ಲಿ ನೀಡಲಾಗುತ್ತದೆ. ಈ ಸ್ಥಳಗಳಲ್ಲಿ ಜರುಗಿದ ಕಾರ್ಯಕ್ರಮಗಳು, ಜಾತ್ರೆಗಳು, ಹಬ್ಬಹರಿದಿನಗಳ ಆಚರಣೆಗಳು, ದೇವಾಲಯಗಳಲ್ಲಿ ನಡೆದ ಕಾರ್ಯಕ್ರಮಗಳು ಇವುಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಫೆಬ್ರವರಿ ೨೦೨೩ರ ಸಂಚಿಕೆಯಾಗಿದ್ದು ಇದರಲ್ಲಿ ಸ್ಥಳೀಯವಾಗಿ ಜರುಗಿದ ಕಾರ್ಯಕ್ರಮಗಳು ಮತ್ತು ಇನ್ನು ಮುಂದೆ ಜರುಗಲಿರುವ ಕಾರ್ಯಕ್ರಮಗಳ ವಿವರಗಳನ್ನು ನೀಡಲಾಗಿದೆ. ಜಾಹಿರಾತಿಗೆ ಮಣೆ ಹಾಕಲಾಗಿದ್ದು, ಸಣ್ಣ ಪತ್ರಿಕೆಯ ಉಸಿರಾಟಕ್ಕೆ ಅದು ತೀರಾ ಅಗತ್ಯವೆನಿಸಿದೆ. ಪತ್ರಿಕೆಯು ಬೋಂದೇಲ್ ನ ಕೆ ಎಸ್ ಎಸ್ ಎಂ ಕಾಂಪ್ಲೆಕ್ಸ್ ನಲ್ಲಿ ಕಚೇರಿಯನ್ನು ಹೊಂದಿದ್ದು, ಕುಲಶೇಖರದ ಪ್ರಸಾದ್ ಪ್ರಿಂಟರ್ಸ್ ನಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯಲ್ಲಿ ಸಂಪಾದಕೀಯ ಅಥವಾ ಇತರೆ ಕಥೆ, ಲೇಖನಗಳು ಕಂಡು ಬರುತ್ತಿಲ್ಲ. ಈ ಹಿಂದೆ ಹೊರಬರುತ್ತಿದ್ದ ಸಂಚಿಕೆಗಳಲ್ಲಿ ಕಥೆ ಹಾಗೂ ಲೇಖನಗಳಿಗೆ ಪ್ರಾಶಸ್ತ್ಯವನ್ನು ನೀಡಲಾಗುತ್ತಿತ್ತು. 

ಪತ್ರಿಕೆಯಲ್ಲಿ ಬಿಡಿ ಪ್ರತಿಯ ಬೆಲೆ ಹಾಗೂ ಚಂದಾ ವಿವರಗಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಲಭ್ಯ ಮಾಹಿತಿ ಪ್ರಕಾರ ನಿರ್ದಿಷ್ಟ ಮೊತ್ತವನ್ನು ಚಂದಾ ಹಣವಾಗಿ ಪಡೆದುಕೊಂಡು ಪ್ರತೀ ಹದಿನೈದು ದಿನಗಳಿಗೊಮ್ಮೆ ಮನೆ ಮನೆಗೆ ಪತ್ರಿಕೆಯನ್ನು ತಲುಪಿಸಲಾಗುತ್ತಿದೆಯಂತೆ. ‘ಪ್ರಿಯ ಅತಿಥಿ’ ಪತ್ರಿಕೆಯು ಈಗಲೂ ಕ್ಲಪ್ತ ಸಮಯಕ್ಕೆ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ ಎನ್ನುವ ಮಾಹಿತಿ ದೊರೆತಿದೆ.