ಯಾರಿಗು ತಿಳಿಸದ
ಭಾವನೆ ಹೊಮ್ಮಿದೆ
ಕನಸಿನ ಲೋಕದ ಸವಿಯೊಳಗೆ
ಕಾರಣ ತಿಳಿಯದೆ
ಗೆಲ್ಲುತ ಸಾಗಲು
ಹಸಿರಿನ ತೋಟದ ನನಸೆಡೆಗೆ
ಹಸಿವಿನ ಹಂದರ
ಸುಂದರ ಮನದಲಿ
ಕತೆಯನು ಕಟ್ಟಿದೆ ಅರೆಗಳಿಗೆ
ಅಳುವದು ಬಂದರು
ಸೋತರು ತಬ್ಬದೆ
ಬೇವಿನ ಮರದಡಿ ತಂಪೆನಗೆ
ಈಚಲ ಮರದಡಿ
ಹಣ್ಣನು ಕಾಣುತ
ಮೇಲಕೆ ಏರುಲು ಬರದೆನಗೆ
ಎಷ್ಟಿದೆ ಅಷ್ಟಲಿ
ಬದುಕುವ ಛಲವನು
ಬಾಳದು ಕೊಟ್ಟಿದೆ ಸಾಕೆನಗೆ
***
ಗಝಲ್
ನನ್ನೊಳಗೆ ನಿನ್ನೊಲವಿನ ವಿರಹವು ಲಾವಾರಸವಾಗಿ ಹರಿಯುತಿದೆ ಮೋಹಿನಿ
ಬೆಳಗು ಆಗುವುದಿಲ್ಲವೇನೋ ಎನ್ನುವ ಭ್ರಮೆಯು ಆವರಿಸುತಿದೆ ಮೋಹಿನಿ
ಕಣ್ಣುಗಳೆಲ್ಲ ಏನನ್ನೋ ಹುಡುಕುತ್ತಿವೆ ನಿನ್ನಧರಗಳು ಬಳಿ ಬಂದು ನಿಲ್ಲಲಾರದೆ
ಈಗೀಗ ಹೆಚ್ಚಾಗಿ ಕನಸಿನಾಳಗಳೇ ಮನದ ತುಂಬ ತುಳುಕಾಡುತಿದೆ ಮೋಹಿನಿ
ಚಡಪಡಿಕೆಯ ನೋವಿರುವ ಬೇರುಗಳ ಅರ್ಥವಾದರೂ ಗೊತ್ತಿದೆಯೇ ನಿನಗಿಂದು
ಬೇಡವೆಂದರೂ ತಬ್ಬಿಮುತ್ತಿಟ್ಟ ಗಳಿಗೆಯೊಳಗಿನ ವಿಷಯ ನೆನಪಾಗುತಿದೆ ಮೋಹಿನಿ
ನಿನ್ನಯ ಸೌಂದರ್ಯವೇ ಮಯೂರದಂತೆ ನಾನಂದು ಹೇಳಿದ್ದು ನೆನಪಿದೆಯಾ ಹೇಗೆ
ಒಡಲಿನ ವಯ್ಯಾರಗಳ ವರ್ಣನೆಗಳ ನಡುವೆ ಎಲ್ಲವೂ ಮರೆಯಾಗುತಿದೆ ಮೋಹಿನಿ
ಈಶನ ನನಸುಗಳು ಸುಟ್ಟು ಕರಕಲಾಗಿರುವುದ ಇನ್ನಾದರೂ ನೀನು ತಿಳಿಯಲಾರೆಯ
ಮೊದವಿರುವ ಬಾಳುವೆಯ ಜೊತೆ ಪ್ರೀತಿಪ್ರೇಮವದು ಬೆರಕೆಯಾಗುತಿದೆ ಮೋಹಿನಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!