ಬೆಳಗ್ಗೆ ಎದ್ದಾಗಿನಿಂದ ದಿನವೂ ಅಷ್ಟು ಕೆಲಸವನ್ನು ಮಾಡಬೇಕು. ಅದರಲ್ಲಿ ತುಂಬಾ ಮುಖ್ಯವಾದದ್ದು ಮಕ್ಕಳನ್ನು ಶಾಲೆಗೆ ಕಳುಹಿಸುವುದು. ಇದು ಸುಲಭದ ಕೆಲಸವಲ್ಲ, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಇಷ್ಟವಾದದ್ದನ್ನು ನೀಡಿ ಅವರಿಗೆ ಶಾಲೆಯ ಮಹತ್ವವನ್ನು ತಿಳಿಸಿ ದಿನವೂ ತಯಾರಿ ಮಾಡಿ ಕಳಿಸೋದು ಅವನ ಕೆಲಸ. ಇಷ್ಟಾಗುವಾಗ ಒಂದು ಸಲ ಜೋರಾಗಿ ಉಸಿರು ಬಿಟ್ಟು ಆತನ ಕೆಲಸದ ಕಡೆಗೆ ಹೊರಡುತ್ತಾನೆ. ತನ್ನ ಬೈಕ್ ಏರಿಕೊಂಡು ತಾನು ಪಾಠ ಮಾಡುವ ಶಾಲೆಗೆ ಬಂದು ತಲುಪಿಬಿಡುತ್ತಾನೆ. ಅಲ್ಲಿ ಎಲ್ಲ ಮಕ್ಕಳ ಭವಿಷ್ಯವನ್ನು ನಿರ್ಧರಿಸುವುದಕ್ಕೆ ದುಡಿತಾನೆ. ಆದರೆ ಈತ ಎಷ್ಟೇ ಶ್ರಮಪಟ್ಟರೂ ಕೆಲಸ ಮಾಡಿದರೂ ಶಾಲೆ ಮೇಲೆ ಇವನಿಗೆ ನಂಬಿಕೆ ಇಲ್ಲ. ಸ್ವಂತ ಮಕ್ಕಳನ್ನ ಈ ಶಾಲೆಗೆ ಕಳುಹಿಸುವುದಕ್ಕೆ ಅಷ್ಟು ಹಿಂದೆ ಮುಂದೆ ನೋಡೋ ಅವನು ಈ ಶಾಲೆಯ ಮಕ್ಕಳ ಭವಿಷ್ಯವನ್ನ ಹೇಗೆ ಬರೆಯುವುದ್ದಕ್ಕೆ ಸಾಧ್ಯ? ಅವನಿಗೆ ಅವನ ಮೇಲೆಯೇ ನಂಬಿಕೆ ಇಲ್ಲ ಅಂದಮೇಲೆ ಊರವರು ಅವರ ಮಕ್ಕಳನ್ನ ನಂಬಿ ಇಲ್ಲಿಗೆ ಹೇಗೆ ಕಳಿಸುವುದು ಹೇಗೆ?  ಇದು ವಿಪರ್ಯಾಸವೇ, ಮಕ್ಕಳು ಖಾಸಗಿ ಶಾಲೆಯ ವ್ಯಾನಿನಲ್ಲಿ ಬಂದು ಇದೇ ಸರಕಾರಿ ಶಾಲೆಯ ಮುಂದೆ ಬಂದು ಇಳಿತಾರೆ. ಇವನು ಅವರನ್ನು ಮನೆಗೆ ಕರೆದುಕೊಂಡು ಬರ್ತಾನೆ, ಬದಲಾವಣೆಯ ಕಡೆಗೆ ಮನಸ್ಸು ಮಾಡುವವರು ಯಾರು?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ