ಸಾವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವಿಸುತ್ತಿದ್ದ ಪೆಡಂಭೂತಗಳಂತಹ ಡೈನೋಸಾರ್ ಎಂಬ ಜೀವಿಗಳು ನಾಶವಾಗದೇ ಹೋಗಿದ್ದರೆ ಏನಾಗುತ್ತಿತ್ತು? ಈ ಬೃಹತ್ ಡೈನೋಸಾರ್ ಗಳ ನಾಶಕ್ಕೆ ಕಾರಣವಾದದ್ದು ಕ್ಷುದ್ರಗ್ರಹವೊಂದರ ಭೂಮಿಗೆ ಅಪ್ಪಳಿಸುವಿಕೆ ಎಂಬುದು ಈಗ ಬಹುತೇಕ ಖಚಿತವಾಗಿದೆ. ಇದರ ಹೊರತಾಗಿ ಹಲವಾರು ಇತರ ಕಾರಣಗಳನ್ನೂ ಸಂಶೋಧಕರು ನೀಡುತ್ತಾರೆಯಾದರೂ, ಒಂದೇ ಸಮಯದಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜೀವಿಸುತ್ತಿದ್ದ ಈ ಡೈನೋಸಾರ್ ಗಳು ನಾಶವಾಗಬೇಕಾದರೆ ಪರಮಾಣು ಬಾಂಬ್ ನಂತಹ ಸ್ಪೋಟಕ್ಕೆ ಮಾತ್ರ ಸಾಧ್ಯ. ಸಾವಿರಾರು ವರ್ಷಗಳ ಹಿಂದೆ ಬಾಂಬ್ ಬಗ್ಗೆ ನಾವು ಕಲ್ಪನೆಯನ್ನೇ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಕ್ಷುದ್ರ ಗ್ರಹವೊಂದು ಭೂಮಿಗೆ ಅಪ್ಪಳಿಸಿದ ಪರಿಣಾಮವಾಗಿಯೇ ಈ ಡೈನೋಸಾರ್ ಗಳು ಅಳಿದು ಹೋದವು ಎಂಬುದನ್ನು ನಂಬ ಬಹುದಾಗಿದೆ.
ಮಧ್ಯಜೀವಯುಗ (Mesozoic era) ದ ಸಮಯದಲ್ಲಿ ಡೈನೋಸಾರ್ ಗಳು ಬದುಕಿದ್ದವು. ಈ ಬಗ್ಗೆ ಸಂಶೋಧನೆ ಮಾಡಿದ ಅಪ್ಪ-ಮಗನ ಜೋಡಿ (ಲೂಯಿ ಆಲ್ವರಿಸ್ ಮತ್ತು ವಾಲ್ಟರ್ ಆಲ್ವರಿಸ್) ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದ ಪರಿಣಾಮವಾಗಿಯೇ ಈ ಡೈನೋಸಾರ್ ಗಳು ನಾಶವಾಗಿ ಹೋದವು ಎಂದಿದ್ದಾರೆ. ಅಂದು ಅಪ್ಪಳಿಸಿದ ಕ್ಷುದ್ರಗ್ರಹದ ಕುರುಹು ಇಂದೂ ಉತ್ತರ ಅಮೇರಿಕಾದಲ್ಲಿರುವ ಮೆಕ್ಸಿಕೋದ ಯುಕಟಾನ್ ಕಡಲ ತೀರದಲ್ಲಿದೆ. ಈ ಗುಂಡಿಯನ್ನು ಚಿಕ್ಸುಲಬ್ ಕುಳಿ (Chicxulub Crater) ಎನ್ನುತ್ತಾರೆ.
ಅಂದಿನ ಮಧ್ಯಜೀವ ಯುಗದಲ್ಲಿ ಭೂಮಿಯ ಮೇಲ್ಮೈ ರಚನೆ ಮತ್ತು ಹವಾಗುಣ ಈಗಿನದ್ದಕ್ಕಿಂತ ಬೇರೆಯದ್ದೇ ಆಗಿತ್ತು. ಆಗ ಧ್ರುವ ಪ್ರದೇಶಗಳಲ್ಲಿ ಹಿಮದ ಮಂಜುಗಡ್ಡೆಗಳು ನಿರ್ಮಾಣವಾಗಿರಲಿಲ್ಲ. ವಾತಾವರಣವೂ ಬೆಚ್ಚಗಿತ್ತು. ಇಡೀ ಭೂಮಿ ಇಂದಿನಂತೆ ವಿವಿಧ ಖಂಡಗಳಾಗಿ ಬೇರ್ಪಟ್ಟಿರಲಿಲ್ಲ. ನಂತರದ ದಿನಗಳಲ್ಲಿ ಖಂಡಾಂತರ ಚಲನೆಗಳ ಕಾರಣದಿಂದ ಅವುಗಳು ಬೇರೆ ಬೇರೆ ಖಂಡಗಳಾಗಿ ಬೇರ್ಪಟ್ಟವು. ನೀರಿನ ಹರಿವು ಮತ್ತು ಒತ್ತಡದ ಕಾರಣದಿಂದ ಭೂಗರ್ಭದಿಂದ ನಿಧಾನವಾಗಿ ಬೇರ್ಪಡಲಾರಂಬಿಸಿತು. ಇದನ್ನು ಪಾಂಜಿಯಾ (Pangea) ಎಂದು ಗುರುತಿಸಲಾಗುತ್ತದೆ. ಈ ಸಮಯವೇ ಈ ದೊಡ್ಡ ಪೆಡಂಭೂತಗಳು ಭೂಮಿಯನ್ನು ಆಳುತ್ತಿದ್ದ ಸಮಯ ಎಂದು ಹೇಳಬಹುದು.
ಆಗ ಭೂಮಿಯ ಮೇಲೆ ಟನ್ ಗಟ್ಟಲೆ ತೂಗುವ ಸುಮಾರು ೨೫೦೦ಕ್ಕೂ ವಿಧದ ಡೈನೋಸಾರ್ ಗಳು ಬದುಕಿದ್ದವು ಎನ್ನುತ್ತದೆ ಒಂದು ಸಂಶೋಧನೆ. ಅದರಲ್ಲಿ ಬೃಹತ್ ಗಾತ್ರದ ಸಾರೋಪಾಡ್ ಗಳು (Sauropods), ಟೆರೋಸಾರಸ್ ಗಳು (Pterosaurs), ನೀರಿನಲ್ಲಿ ವಾಸ ಮಾಡುತ್ತಿದ್ದ ಮೋಸಸಾರ್ ಗಳು (Mosasaurs) ಜೀವಿಸುತ್ತಿದ್ದವು. ಅದೇ ಸಮಯ ಹಲವಾರು ಬಗೆಯ ಕೀಟಗಳು, ಇಲಿಗಳನ್ನು ಹೋಲುವ ಜೀವಿಗಳು (ಸಸ್ತನಿಗಳಲ್ಲ), ಮೊಸಳೆಯ ಜಾತಿಗೆ ಸೇರಿದ ಫೈಟೋಸಾರ್ ಗಳು (Phytosaurus) ಮೊದಲಾದ ಜೀವಿಗಳು ಒಟ್ಟಿಗೆ ಬದುಕುತ್ತಿದ್ದವು.
ಆ ಸಮಯದಲ್ಲಿ ಸೆಕೆಂಡಿಗೆ ೨೦ ಕಿಲೋಮೀಟರ್ ಗಳಷ್ಟು ಸೂಪರ್ ಸಾನಿಕ್ ವೇಗದಲ್ಲಿ ಚಲಿಸುತ್ತಿದ್ದ ಸುಮಾರು ೧೦ ಕಿ ಮೀ ನಷ್ಟು ವಿಶಾಲವಾಗಿದ್ದ ಕ್ಷುದ್ರಗ್ರಹವೊಂದು ಭೂಮಿಗೆ ಢಿಕ್ಕಿ ಹೊಡೆಯಿತಂತೆ. ಸಂಶೋಧಕರ ಪ್ರಕಾರ ಈ ಕ್ಷುದ್ರಗ್ರಹದ ವಿಸ್ತಾರ ನಮ್ಮ ಮೌಂಟ್ ಎವರೆಸ್ಟ್ ಗಿಂತಲೂ ದೊಡ್ದದಾಗಿತ್ತು. ನೀವೇ ಯೋಚಿಸಿ, ಮೌಂಟ್ ಎವರೆಸ್ಟ್ ಗಾತ್ರದ ವಸ್ತುವೊಂದು ಕ್ಷಿಪಣಿಗಳು ಚಲಿಸುವ ವೇಗದಲ್ಲಿ ಬಂದು ಭೂಮಿಗೆ ಅಪ್ಪಳಿಸಿದರೆ ಏನಾಗಬಹುದು? ಇದರ ಪರಿಣಾಮ ಏನೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ನಲ್ಲಿ ಸ್ಫೋಟಿಸಿದ ಪರಮಾಣು ಬಾಂಬಿಗಿಂತ ಹತ್ತು ಬಿಲಿಯನ್ ಪಟ್ಟು ಹೆಚ್ಚಾಗಿತ್ತು. ೬೬ ಮಿಲಿಯನ್ ವರ್ಷಗಳ ಹಿಂದೆ ಇಂತಹ ಒಂದು ಭಯಾನಕ ಘಟನೆ ನಡೆಯಿತು ಎಂದು ಹೇಳುತ್ತಾರೆ.
ಭೂಮಿಯ ಕಕ್ಷೆಯನ್ನು ಪ್ರವೇಶಿಸುವಾಗ ಈ ಕ್ಷುದ್ರ ಗ್ರಹ ಒಂದು ದೊಡ್ಡ ಬೆಂಕಿನ ಉಂಡೆಯಂತಾಗಿತ್ತು. ಅತ್ಯಂತ ತೀವ್ರ ಗತಿಯಲ್ಲಿ ಅಂದರೆ ಘಟನೆಯ ಕೇಂದ್ರದಿಂದ ಸುಮಾರು ೧೮೦ ಕಿಮೀ ವ್ಯಾಪ್ತಿಯಲ್ಲಿ ಭೂಮಿಯ ಹೊರ ಪದರವನ್ನು ಛಿದ್ರ ಛಿದ್ರವನ್ನಾಗಿಸಿತ್ತು. ಭೂಕಂಪನವಾಗುವಾಗ ರಿಕ್ಟರ್ ಮಾಪಕದಲ್ಲಿ ೭.೦ ಕ್ಕಿಂತ ಅಧಿಕ ತೀವ್ರತೆಯನ್ನು ಹೊಂದಿದ್ದರೆ ಏನಾಗುತ್ತದೆ ಎಂದು ಇತ್ತೀಚೆಗೆ ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ ಭೂಕಂಪದ ಘಟನೆಗಳಿಂದ ನಿಮಗೆಲ್ಲಾ ತಿಳಿದೇ ಇದೆ. ಆದರೆ ಕ್ಷುದ್ರಗ್ರಹ ಅಪ್ಪಳಿಸುವಾಗ ಈ ತೀವ್ರತೆ ಸುಮಾರು ೧೧ ಕ್ಕಿಂತಲೂ ಅಧಿಕವಾಗಿರ ಬಹುದೆಂದು ಅಂದಾಜಿಸಲಾಗಿದೆ. ಇದರಿಂದ ಮೇಲೆದ್ದ ಧೂಳು, ಬೂದಿ ಮತ್ತು ಭೂಮಿಯ ಮೇಲ್ಮೈ ಅವಶೇಷಗಳು ವಾಯು ಮಂಡಲದಲ್ಲೆಲ್ಲಾ ಚಿಮ್ಮಿ ಹೋದುವು. ವಾತಾವರಣದ ಉಷ್ಣತೆ ೩೦೦ ಡಿಗ್ರಿ ಸೆಲ್ಸಿಯಸ್ ಗೆ ಏರಿತು. ತಕ್ಷಣವೇ ಇದರ ಸಂಪರ್ಕಕ್ಕೆ ಬಂದ ಎಲ್ಲಾ ಜೀವಿಗಳು ಸುಟ್ಟು ಭಸ್ಮವಾಗಿ ಹೋದವು.
ಹಲವು ತಿಂಗಳುಗಳ ಕಾಲ ಸೂರ್ಯನ ಬಿಸಿಲು ಭೂಮಿಗೆ ತಾಕಲೇ ಇಲ್ಲ. ಈ ಕಾರಣದಿಂದ ಗಿಡಗಳ ದ್ಯುತಿ ಸಂಶ್ಲೇಷಣಾ ಕ್ರಿಯೆ ನಿಂತು ಹೋಯಿತು. ಸಸ್ಯಗಳು ನಾಶವಾದ ಪರಿಣಾಮವಾಗಿ ಅದನ್ನು ಅವಲಂಬಿಸಿದ್ದ ಸಸ್ಯಾಹಾರಿ ಜೀವಿಗಳೂ ನಾಶ ಹೊಂದಿದವು. ಆಹಾರ ಸರಪಣಿಯ ಮುಖ್ಯ ಭಾಗವನ್ನು ಕಳೆದುಕೊಂಡದ್ದರಿಂದ ಬಹಳಷ್ಟು ಜೀವಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದವು. ಸಿಹಿನೀರಿನ ಜೀವಿಗಳು, ಪಾಚಿಗಳನ್ನು ತಿಂದು ಬದುಕುತ್ತಿದ್ದ ಜೀವಿಗಳು, ಮೀನುಗಳನ್ನು ಆಹಾರವಾಗಿ ತಿನ್ನುತ್ತಿದ್ದ ಜೀವಿಗಳ ಬದುಕು ಅಸ್ತವ್ಯಸ್ತವಾದುವು. ಈ ಪರಿಣಾಮದಿಂದಾಗಿ ಡೈನೋಸಾರ್ ಗಳಂತಹ ಜೀವಿಗಳೆಲ್ಲಾ ನಿರ್ನಾಮವಾಗಿ ಹೋದವು. ಈ ರೀತಿಯ ವಾತಾವರಣದಲ್ಲೂ ಕೆಲವು ಅಪರೂಪದ ಜೀವಿಗಳು ಬದುಕಿ ಉಳಿದವು. ಕೆಲವೊಂದು ಸಸ್ಯದ ಬೀಜಗಳು ಉಳಿದು, ಕಾಲಕ್ರಮೇಣ ಅವುಗಳಿಗೆ ಸೂಕ್ತ ವಾತಾವರಣ ಲಭಿಸಿದಾಗ ಮತ್ತೆ ಚಿಗುರಿಕೊಂಡವು. ಹೀಗೆ ಮತ್ತೆ ಭೂಮಿಯ ಮೇಲೆ ಜೀವ ಸಂಕುಲಗಳು ಬದುಕು ಕಾಣತೊಡಗಿದವು.
(ಇನ್ನೂ ಇದೆ)
(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!