ನನಗೆ ಬೇಕೊಂದು ಮಿಠಾಯಿ

ಆದರದು ನೂರು ರೂಪಾಯಿ

ಕೈಗೆಟುಕದು ಕಾಸಿನ ಡಬ್ಬ

ಹಣದೊರೆತರೆ ನನಗೆ ಹಬ್ಬ.

 

ಅಣ್ಣನ ಕೇಳಲು ನಾನು

ನೀಡುವ ಹಣವ ಅವನು

ಬೇಡುವ ಸಿಹಿಯಲಿ ಪಾಲು

ಸಿಡುಕಲಿ ಹಿಡಿಯುವ ಕೋಲು.

 

ಕೇಳುವೆ ನಾ ಅಮ್ಮನಲಿ

ಮಾಡಿ ನೀಡುವಳು ಒಲವಿನಲಿ

ಹೊರಗಿನ ತಿಂಡಿಯು ಕೇಡೆಂದು 

ಮನೆಯ ರುಚಿಗೆ ಗೆಲುವೆಂದು.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

***

ಗಝಲ್

ಕಲಿಯು ಕಲಿತು ಜಗತ್ತಿಗೇ ಕಲಿಸು ಆದರೆ ಮೆಚ್ಚದಿರು

ಕಲಿಯದೆಯೆ ಕಲಿತಿರುವೆನೆಂದು ಕಲಿಸುತ್ತಾ ತೆಗಳದಿರು

 

ಕೂಲಿನಾಲಿ ಮಾಡಿಯಾದರೂ ಹೊಟ್ಟೆ ಹೊರೆಯುವುದು ಗೊತ್ತಿಲ್ಲವೆ

ಜೀವನದಲ್ಲಿ ಯಾವುದನ್ನೂ ಅಭ್ಯಾಸಿಸದೆ ನೀನೆಂದೂ ಬೊಗಳದಿರು

 

ಉಪ್ಪಿನಕಾಯಿಯಲ್ಲಿ ಹುಳುವಾದಂತೆ ಬಾಳುವುದು ವ್ಯರ್ಥವಲ್ಲವೆ

ಸುತ್ತ ಮುತ್ತಲ ಊರಿನವರಿಗೆಲ್ಲರಿಗು ಗೊತ್ತಿರುವನಂತೆ ತಿರುಗದಿರು

 

ಹೊಸಗನ್ನಡದ ಸಂಸ್ಕಾರದ ರೀತಿನಿಯಮಗಳು ತಿಳಿದಿಲ್ಲವೆ

ಹೊಚ್ಚಹೊಸತಿನ ಮಲ್ಲಿಗೆಯ ಪರಿಮಳಕ್ಕೇ ಕುಣಿಯದಿರು

 

ಒಂದೊಂದು ನುಡಿಗಳೂ ತೂಕದಿಂದ ಕೂಡಿರುತ್ತದೆ ಬಲ್ಲೆಯಾ ಈಶಾ 

ಮಾತನಾಡುವಾಗ ಬರೆಯುವಾಗ ತಪ್ಪಿಯೂ ಸಭ್ಯತೆಯ ಮೀರದಿರು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ