ಘಟನೆಯೊಂದು ನಡೆದಿತ್ತು. ಅದನ್ನ ಕಂಡವರು ಕೆಲವರು. ಬರೆದಿಡಬೇಕಾದವರು ಒಬ್ಬರು. ಅವರು ಬರೆದಿಟ್ಟ ಕಥೆ ಒಂದಷ್ಟು ಸಮಯದ ನಂತರ ಇನ್ನೊಬ್ಬರು ಯಾರೋ ಓದಬೇಕು. ಆಗ ಬರೆದಿಟ್ಟವರ ಆಲೋಚನೆಯ ಕಥೆಯನ್ನೇ ಮುಂದಿನವರು ಓದುತ್ತಾರೆ ವಿನಃ ನಿಜವನ್ನೇ ಓದಬೇಕು ಅಂತ ಏನು ಇಲ್ವಲ್ಲ. ಹಾಗಾಗಿ ಬರೆಯುವವರು ಎಂಥವರು ಅನ್ನೋದರ ಮೇಲೆ ಕಥೆಗಳು ನಿರ್ಧರಿತವಾಗಿರುತ್ತವೆ. ಈ ಮಾತನ್ನ ತನ್ನ ಮಗನನ್ನು ಹಾಸ್ಟೆಲಿಗೆ ಸೇರಿಸೋಕೆ ಬಂದ ಅಪ್ಪ ಹೇಳುತ್ತಿದ್ದರು. ಮಾತು ಮುಂದುವರೆಸುತ್ತಾ ನೋಡು ಮಗ ನಿನ್ನ ಬಗ್ಗೆ ಒಬ್ಬೊಬ್ಬರು ಒಂದೊಂದು ಮಾತನಾಡಿಕೊಳ್ಳುವುದಕ್ಕೆ ಆರಂಭ ಮಾಡುತ್ತಾರೆ. ಹಾಗಾಗಿ ಯಾರೂ ಬರೆದ ಕಥೆಯ ಬಗ್ಗೆ ನೀನು ಯೋಚನೆ ಮಾಡಬೇಕಾಗಿಲ್ಲ. ನಿನ್ನ ಕಥೆ ಹೇಗಿರಬೇಕು ಅನ್ನೋದು ನಾವು ಒಂದಷ್ಟು ತೀರ್ಮಾನ ಮಾಡಿಕೊಂಡಿದ್ದೇವೆ ನಿನ್ನಲ್ಲೂ ಒಂದಷ್ಟು ಕನಸುಗಳಿದ್ದಾವೆ, ಅವೆಲ್ಲವೂ ಸೇರಿಸಿ ಚಂದದ ಚಿತ್ರಕಥೆ ನಾವೇ ಸೇರಿಕೊಂಡು ಬರೆಯೋಣ. ಇನ್ಯಾರದೋ ಮಾತಿಗೆ ತಲೆಕೆಡಿಸಿಕೊಳ್ಳುತ್ತಾ ಅವರಿಗೋಸ್ಕರ ನಿನ್ನ ಜೀವನದ ದಾರಿಯನ್ನ ಬದಲಿಸಿಕೊಳ್ಳುತ್ತಾ ಯಾವತ್ತೂ ಸಾಗುವುದಕ್ಕೆ ಹೋಗಬೇಡ. ನಮ್ಮ ಜೀವನದ ಕಥೆ ಬರೆಯುವುದಕ್ಕೆ ಒಂದಷ್ಟು ಜನ ಸುಮ್ಮನೆ ಕಾಲ ಹರಣ ಮಾಡುತ್ತಾ ಹೋಗುತ್ತಿರುತ್ತಾರೆ.ನಮ್ಮ ಜೀವನದ ಚಿತ್ರ ಚೆನ್ನಾಗಿರಬೇಕು ಅಂತ ಅಂದ್ರೆ ನಾವೇ ಕಥೆ ಬರೆಯಬೇಕು ನಾವೇ ನಿರ್ದೇಶಕರಾಗಬೇಕು ನಮ್ಮ ಜೀವನ ಇನ್ನೊಬ್ಬರ ಕೈಗೆ ಕೊಟ್ಟು ಸೋತು ನಿರಾಶರಾಗಬಾರದು. ಸರಿ ನಾಳೆಯಿಂದ ನಿನ್ನ ಜೀವನದ ಹೊಸ ಅಧ್ಯಾಯ ಆರಂಭವಾಗುತ್ತೆ. ಆಲ್ ದಿ ಬೆಸ್ಟ್ ಅಂತ ಹೇಳಿ ನಡೆದೇಬಿಟ್ರು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ