ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಎಮು ಎನ್ನುವ ವಿದೇಶೀ ಹಕ್ಕಿಯ ಆಗಮನವಾಯಿತು. ಎಮು ಹಕ್ಕಿಯನ್ನು ಸಾಕುವುದರಿಂದ ಅಪಾರ ಲಾಭವಿದೆ ಎಂದು ಹೇಳಿಕೊಳ್ಳುವ ಹಲವಾರು ಏಜೆನ್ಸಿಗಳೂ ಹುಟ್ಟಿಕೊಂಡವು. ಎಮು ಒಂದು ಹಾರಲಾರದ ಬೃಹತ್ ಹಕ್ಕಿ. ಹೆಚ್ಚಾಗಿ ಮಾಂಸಕ್ಕೇ ಬಳಕೆಯಾಗುವ ಕೋಳಿ ಜಾತಿಯ ಹಕ್ಕಿ ಇದು. ಮೊದಲೆಲ್ಲಾ ಕೇವಲ ಮೃಗಾಲಯದಲ್ಲಿ ಮಾತ್ರ ನೋಡಿದ್ದ ಎಮು ಹಕ್ಕಿ ಸಾಕಣೆಯನ್ನು ಒಂದಿಷ್ಟು ಮಂದಿ ಕುತೂಹಲದಿಂದ ಪ್ರಾರಂಭಿಸಿದ್ದೂ ಇದೆ. ಕೆಲವು ಮಂದಿ ಇದನ್ನು ಮಾರಿ ಲಾಭ ಮಾಡಿಕೊಂಡರು. ಇದರ ಮರಿಯನ್ನು ನೀಡಿದ ಕೆಲವು ಏಜೆನ್ಸಿಗಳು ಬೆಳೆದು ದೊಡ್ಡದಾದಾಗ ಹಿಂದೆ ಪಡೆದುಕೊಳ್ಳುವುದರಿಂದ (Buy Back) ಜಾರಿಕೊಂಡರು. ಇದನ್ನು ಸಾಕಿದವರು ನಿರಾಶೆಗೆ ಒಳಗಾದರು. ಕೋಳಿಯಂತೆ ಸುಲಭವಾಗಿ ಕಡಿದು, ಮಾರುವಂತಿಲ್ಲ. ಬೃಹತ್ ಗಾತ್ರದ ಹಕ್ಕಿಯಾದುದರಿಂದ ಸಿಗುವ ಮಾಂಸದ ಪ್ರಮಾಣವೂ ಅಧಿಕ. ಅದರ ರುಚಿಯೇ ಗೊತ್ತಿರದ ಜನರಿಗೆ ಮಾರುವುದಾದರೂ ಹೇಗೆ? ಮಾಂಸದ ಬಣ್ಣವೂ ಸ್ವಲ್ಪ ಮಟ್ಟಿಗೆ ಕೆಂಪು ಕಪ್ಪು. ಹೀಗೆ ಹಲವಾರು ಸಮಸ್ಯೆಗಳು ಹುಟ್ಟಿಕೊಂಡವು. ಯೋಜನಾಬದ್ಧವಾಗಿ ಸಾಕಿದವರು ಇದನ್ನು ಮಾರಿ ಲಾಭ ಗಳಿಸಿಕೊಂಡರು. ಎಮು ಹಕ್ಕಿಯಿಂದ ತಯಾರಾಗುವ ಎಣ್ಣೆಗೆ ಲೀಟರ್ಗೆ ರೂ.೮೦೦೦ ದಿಂದ ೧೦,೦೦೦ ಬೆಲೆ ಇದೆ.
ಎಮು ಒಂದು ಹಾರಲಾಗದ ದೊಡ್ಡ ಗಾತ್ರದ ಪಕ್ಷಿ. ಉಷ್ಟ್ರಪಕ್ಷಿ (ಆಸ್ಟಿಚ್) ಹೊರತುಪಡಿಸಿ ಗಾತ್ರದಲ್ಲಿ ಎರಡನೇ ದೊಡ್ಡ ಪಕ್ಷಿಯಾಗಿದೆ. ಇದರ ತವರು ಆಸ್ಟ್ರೇಲಿಯಾ. ಎಮು ಪಕ್ಷಿಗಳು ಆಫ್ರಿಕಾದ ‘ ಆಸ್ಟ್ರಿಚ್’ ದಕ್ಷಿಣ ಅಮೆರಿಕಾದ ‘ರಿಯಾ’ ಆಸ್ಟೇಲಿಯಾದ ‘ಕ್ಯಾಸವೆರಿ’ ಹಾಗೂ ನ್ಯೂಜಿಲೆಂಡಿನ ’ಕಿವಿ’ ಪಕ್ಷಿಗಳ ಗುಂಪಿಗೆ ಸೇರಿವೆ. ಇವುಗಳನ್ನು ೧೯೩೦ ರಿಂದ ೧೯೫೦ ರವರೆಗೆ ಯು,ಎಸ್.ಎ. ನಲ್ಲಿನ ಮೃಗಾಲಯಗಳಿಗೆ ಪೂರೈಸಲಾಗುತ್ತಿತ್ತು. ೧೯೬೦ ರಲ್ಲಿ ಆಸ್ಟ್ರೇಲಿಯಾ ಸರಕಾರ ಎಮು ಪಕ್ಷಿಯನ್ನು ತನ್ನ ರಾಷ್ಟ್ರಪಕ್ಷಿಯಾನ್ನಾಗಿ ಅಂಗೀಕರಿಸಿ, ಅಂದಿನಿಂದ ೩೦ ವರುಷಗಳವರೆಗೆ ಎಮು ಪಕ್ಷಿಗಳ ರಫ್ತನ್ನು ನಿಷೇಧಿಸಿತು.
ಎಮುಗಳು ಒಂದು ಅಚ್ಚರಿಯ ಹಾಗೂ ವಿಧೇಯ ಪಕ್ದಿಗಳಾಗಿವೆ. ಹುಟ್ಟುವಾಗ ೧೦ ಇಂಚು ಉದ್ದವಾಗಿದ್ದು, ಕಪ್ಪು ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಪ್ರೌಢಾವಸ್ಥೆ ತಲುಪಿದ ಪಕ್ಷಿಗಳು ೫ ರಿಂದ ೬ ಅಡಿ ಎತ್ತರವಾಗಿದ್ದು ೪೦ ರಿಂದ ೬೦ ಕೆ.ಜಿ.ವರೆಗೆ ತೂಗುತ್ತವೆ. ಗಂಟೆಗೆ ೪೦ ಮೈಲಿ ವೇಗವಾಗಿ ಓಡಬಲ್ಲವು. ಎಮುಗಳು ಎಲ್ಲಾ ವಾತಾವರಣಗಳಿಗೆ ಹೋದಿಕೊಳ್ಳುತ್ತವೆ. ಅತ್ಯಂತ ಹೆಚ್ಚಿನ ಉಷ್ಣಾಶಗಳಲ್ಲು ಬದುಕಬಲ್ಲವು. ಇದು ದಿನವೊಂದಕ್ಕೆ ಸರಾಸರಿ ೨ ರಿಂದ ೪ ಗ್ಯಾಲನ್ ನೀರು ಕುಡಿಯುತ್ತವೆ. ಸಾಮಾನ್ಯವಾಗಿ ಎಮು ಪಕ್ಷಿಗಳು ೨ ರಿಂದ ೩ ವರ್ಷಗಳಲ್ಲಿ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ೨೫ ರಿಂದ ೩೦ ವರ್ಷಗಳವರೆಗೆ ಮೊಟ್ಟೆ ಇಡಬಲ್ಲವು. ಪ್ರತಿ ಋತುವಿನಲ್ಲಿ ೨೦ ರಿಂದ ೫೦ ಮೊಟ್ಟೆ ಇಡುತ್ತವೆ.
ದೇಹದ ಬದಲಾವಣೆ:
೧. ಮರಿಯಿಂದ ೨ ತಿಂಗಳವರೆಗೆ ಮೈಮೇಲೆ ನೇರವಾಗಿರುವ ಪಟ್ಟೆಗಳು
೨. ೩ ತಿಂಗಳುಗಳಿಂದ ೧ ವರ್ಷಗಳ ವರೆಗೆ ಮೈಮೇಲೆ ಚಾಕೊಲೇಟ್ ಬಣ್ಣ ಮತ್ತು ತಲೆಯ ಭಾಗ ಕಡುವಾಗಿರುವುದು.
೩. ವಯಸ್ಕ ಕೋಳಿಗಳು ಪುಕ್ಕಗಳಿಲ್ಲದ ಕುತ್ತಿಗೆ ಹಾಗೂ ಸುತ್ತಲೂ ಕಡುಗಪ್ಪು ಪುಕ್ಕಗಳು, ಚುಕ್ಕೆಯಿರುವ ರೆಕ್ಕೆಗಳು. ಗಂಡು ಮತ್ತು ಹೆಣ್ಣುಗಳಲ್ಲಿ ವ್ಯತ್ಯಾಸ ಇರುವುದಿಲ್ಲ.
ಆಸ್ಟೇಲಿಯಾ ದೇಶವು ಎಮುಗಳ ಉತ್ಪಾದಕ ದೇಶವಾಗಿದ್ದು ಅಮೆರಿಕ ಮತ್ತು ಯೂರೋಪ್ ನಂತರದ ಸ್ಥಾನಗಳಲ್ಲಿವೆ. ಭಾರತದಲ್ಲಿ ಎಮು ಪಕ್ಷಿಗಳ ಪರಿಚಯವಾಗಿ ಸುಮಾರು ಹತ್ತು ವರ್ಷಗಳೇ ಕಳೆದಿವೆ. ಆದರೂ ಪ್ರಾರಂಭದಲ್ಲಿದ್ದ ಜನಪ್ರಿಯತೆ ಈಗ ಅಷ್ಟಾಗಿ ಉಳಿದುಕೊಂಡಿಲ್ಲ. ಭಾರತದಲ್ಲಿ ಎಮು ಪಕ್ಷಿಗಳ ಎರಡು ಸಂತತಿಗಳನ್ನು ಬೆಳೆಸಲಾಗುತಿದ್ದು ವೇಗವಾಗಿ ಬೆಳವಣಿಗೆ ಹೊಂದುತ್ತಿವೆ.
ಎಮು ಪಕ್ಷಿಯ ಮಾಂಸ ಕೆಂಪು ಬಣ್ಣವಾಗಿದ್ದು ಕೆಂಪು ಮಾಂಸ (ರೆಡ್ ಮೀಟ್) ಎಂದು ಕರೆಯಲಾಗುತ್ತದೆ. ಮಾಂಸ ಶೇ.೯೮ ರಷ್ಟು ಕೊಬ್ಬುರಹಿತವಾಗಿದ್ದು, ಆತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಹಾಗೂ ಪ್ರೋಟಿನ್ ಹೊಂದಿರುತ್ತದೆ. ಮಾಂಸವು ಮೃದುವಾಗಿದ್ದು ಮತ್ತು ಬೇಯಿಸಲು ಸುಲಭ ಹಾಗೂ ರುಚಿಕರ. ಎಮು ಪಕ್ಷಿಗಳ ಎಣ್ಣೆ ಮತ್ತು ಕೊಬ್ಬನ್ನು ಮಾಂಸಖಂಡಗಳ ಹಾಗೂ ಸಂಧಿವಾತಗಳ ನೋವುಗಳ ನಿವಾರಕವಾಗಿ ಬಳಸುತ್ತಾರೆ. ಪಕ್ಷಿಯ ಎಣ್ಣೆಯ ಚರ್ಮದತುರಿಕೆ ಮತ್ತು ಉರಿಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಕೊಬ್ಬನ್ನು ಕೆಳಕಂಡ ರೋಗಗಳ ನಿವಾರಣೆಯಲ್ಲಿ ಬಳಸುತ್ತಾರೆ. ಚರ್ಮದ ಉರಿ ಮತ್ತು ತರಿಕೆ ತಡೆಗಟ್ಟಲು. ಚರ್ಮವನ್ನು ಶುಭ್ರ, ತೇವ ಮತ್ತು ಕಾಂತಿಯುಕ್ತಗೊಳಿಸಲು, ಕೊಬ್ಬನ್ನು ಕರಗಿಸಲು ಮತ್ತು ಬ್ಯಾಕ್ಟೀರಿಯಾ ನಿರೋಧಕವಾಗಿ ಗಾಯಗಳನ್ನು ಗುಣಪಡಿಸಲು ಬಳಸುತ್ತಾರೆ.
ಎಮು ಪಕ್ಷಿಗಳ ಮೊಟ್ಟೆ ಮತ್ತು ಚರ್ಮಕ್ಕೆ ಭಾರಿ ಬೇಡಿಕೆಯಿದ್ದು ಚರ್ಮವನ್ನು ಪ್ಯಾಶನ್ ಉದ್ಯಮದಲ್ಲಿ ಬಳಸಲಾಗುತ್ತಿದೆ. ಮೊಟ್ಟೆಯನ್ನು ಕರಕುಶಲ ವಸ್ತುಗಳ ತಯಾರಕೆಯಲ್ಲಿ ಬಳಸಲಾಗುತ್ತದೆ. ಮೊಟ್ಟೆ, ಚರ್ಮ, ಮಾಂಸ, ರೆಕ್ಕೆಗಳು ಹೀಗೆ ಪ್ರತಿಯೊಂದು ಭಾಗಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಭಾರೀ ಬೇಡಿಕೆ ಪಡೆದುಕೊಂಡಿವೆ. ಹೀಗಾಗಿ ಎಮು ಸಾಕಾಣಿಕೆ ಮುಂದೊಂದು ದಿನ ಜನಪ್ರಿಯ ಉದ್ಯಮವಾಗುವುದರಲ್ಲಿ ಎರಡು ಮಾತಿಲ್ಲ. ಪಕ್ಷಿಗಳು ವಿಧೇಯವಾಗಿರುವುದರಿಂದ ಮನುಷ್ಯರ ಮೇಲೆ ದಾಳಿ ಮಾಡುವ ಯಾವುದೇ ಗುಣಗಳನ್ನು ಹೊಂದಿಲ್ಲದಿರುವುದರಿಂದ ಸಾಕಾಣಿಕೆ ಸುಲಭ. ಎಮು ಸಾಕಾಣಿಕೆಯು ರೈತನಿಗೆ ಒಂದು ಉತ್ತಮ ಆಯ್ಕೆಯಾಗಿದ್ದು ಅದರಲ್ಲು ಬಯಲುಸೀಮೆಯ ರೈತರಿಗೆ
ವರದಾನವಾಗಬಲ್ಲದು. ಎಮು ಸಾಣಿಕೆಯಂತಹ ಉಪಕಸುಬುಗಳು ರೈತರ ಬದುಕನ್ನು ಹಸನಾಗಿಸಿ ಹೆಚ್ಚಿನ ಆದಾಯ ಪಡೆಯಲು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ರೈತರು ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಪ್ರತಿಯೊಂದು ಹೊಸ ಉದ್ಯಮದಲ್ಲಿ ಲಾಭ ನಷ್ಟಗಳು ಇದ್ದೇ ಇರುತ್ತವೆ. ಹಕ್ಕಿಗಳು ಮರಿಯಿಂದ ಬೆಳೆದು ದೊಡ್ಡದಾದಾಗ ಅದನ್ನು ಖರೀದಿಸುವುವವರು ಇಲ್ಲದಿದ್ದರೆ ಅನಾಹುತವೇ ಆಗಿಬಿಡುತ್ತದೆ. ಇಂತಹ ಕೆಲವೊಂದು ಘಟನೆಗಳು ಈಗಾಗಲೇ ನಡೆದಿವೆ. ಕೋಳಿಯಂತೆ ಸ್ಥಳೀಯವಾಗಿ ಎಮುವಿನ ಮಾಂಸಕ್ಕೆ ಮಾರುಕಟ್ಟೆ ಇಲ್ಲ. ದೊಡ್ಡ ದೊಡ್ಡ ಹೋಟೇಲ್ ಗಳಲ್ಲಿ, ವಿದೇಶಗಳಲ್ಲಿ ಇದಕ್ಕೆ ಬೇಡಿಕೆ ಇದೆ. ಆದರೆ ಅಂತಹ ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಸುಲಭ ಸಾಧ್ಯವಲ್ಲ. ಈ ಕಾರಣದಿಂದ ನೂರಾರು ಎಮು ಹಕ್ಕಿಗಳನ್ನು ಒಂದೇ ಬಾರಿಗೆ ಸಾಕುವುದಕ್ಕಿಂತ ಒಂದು ಬಾರಿಗೆ ಐದಾರು ಹಕ್ಕಿಗಳನ್ನು ಮಾತ್ರ ಸಾಕುತ್ತಾ ಅದನ್ನು ಸರಿಯಾಗಿ ಮಾರುಕಟ್ಟೆ ವಿಲೇವಾರಿ ಮಾಡುತ್ತಾ ಬದುಕು ಕಂಡುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಬೆಳೆದು ನಿಂತ ಬೃಹತ್ ಗಾತ್ರದ ಹಕ್ಕಿಗಳ ಹೊಟ್ಟೆ ತುಂಬಿಸುವುದೇ ದೊಡ್ಡ ಶ್ರಮದಾಯಕ ಕೆಲಸವಾದೀತು. ಯಾವುದಕ್ಕೂ ಯೋಚಿಸಿ ಮುಂದಡಿ ಇಡಿ.
ಮಾಹಿತಿ ಸಹಕಾರ: ಡಾ|| ಎಂ.ಎಸ್. ರುದ್ರಸ್ವಾಮಿ, ತಿಪಟೂರು,
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!