ಜವಾಬ್ದಾರಿಯನ್ನ ನಿಭಾಯಿಸಿದರೆ ನಾನೊಬ್ಬ ಉತ್ತಮ ವ್ಯಕ್ತಿ ಎನ್ನಿಸಿಕೊಳ್ಳುವುದಿಲ್ಲ. ಆ ಜವಾಬ್ದಾರಿಯನ್ನು ನಿಭಾಯಿಸುವಾಗ ಎದುರಿನವರ ಮನಸ್ಸನ್ನು ಅರ್ಥೈಸಿಕೊಂಡಿದ್ದೇನಾ ಅನ್ನೋದು ಕೂಡ ತುಂಬಾ ಮುಖ್ಯವಾಗುತ್ತೆ. ಇಷ್ಟು ದೊಡ್ಡ ಮಾತನಾಡುವುದಕ್ಕೂ ಕಾರಣವಿದೆ. ಕನಸುಗಳ ಮೂಟೆಗಳನ್ನು ಹೊತ್ತು ತುಂಬ ಧೈರ್ಯದಿಂದ ಜೀವನವನ್ನ ಸಾಗಿಸಬೇಕು ಅಂತ ಯೋಚನೆ ಮಾಡುತ್ತಿದ್ದ ಹುಡುಗಿ ಅವಳು. ಎಲ್ಲರ ಸಹಕಾರವು ಜೊತೆಗೆ ಇತ್ತು. ಆಕೆಯ ಶ್ರಮವು ಸೇರಿತ್ತು. ಉಳಿದೆಲ್ಲರಿಗಿಂತ ವಿಭಿನ್ನವಾಗಿ ವಿಶಿಷ್ಟವಾಗಿ ಆಕೆ ಬದುಕನ್ನ ನಿಭಾಯಿಸುತ್ತಿದ್ಲು. ಆದ್ರೆ ಜವಾಬ್ದಾರಿಯ ಯೋಚನೆ ಹೆತ್ತವರ ತಲೆಯೊಳಗೆ ಬಂದ ತಕ್ಷಣ ಹೆಣ್ಣು ಮಕ್ಕಳಾದರೆ ಮದುವೆ ಮಾಡಿಬಿಡಬೇಕು ಅನ್ನೋದೇ ಮುಖ್ಯವಾಗಿ ಬಿಡುತ್ತೆ. ಆಗ ಮಗಳ ಬಗ್ಗೆ ಕನಸುಗಳನ್ನು ಕಂಡವರು ಅವಳ ಕನಸುಗಳಿಗೆ ಬೆಲೆ ನೀಡದೆ ಇವರ ಕನಸಂತೆ ಅವಳ ಬದುಕನ್ನ ನಿರ್ಧರಿಸುವುದಕ್ಕೆ ಆರಂಭ ಮಾಡಿರಬೇಕು. ಅದರಿಂದ ಕನಸು ಕಂಗಳ ಹುಡುಗಿಯ ಬದುಕಿನ ದಿನಗಳು ಹೇಗಿರಬಹುದು? ಆಕೆಯ ಪ್ರತಿದಿನದ ರಾತ್ರಿಯಲ್ಲಿ ಕಾಡುವ ಕರಾಳ ಕನಸು ಎಷ್ಟು ಭಯಪಡಿಸಬಹುದು ಅನ್ನುವ ಯೋಚನೆಯು ಇಲ್ಲ. ಸುತ್ತಲಿನವರ ಸಾವಿರ ಮಾತುಗಳು ಮಕ್ಕಳ ಕನಸುಗಳಿಗೆ ಬೆಲೆ ನೀಡದಂತೆ ಮಾಡಿಬಿಡುತ್ತದೆ. ಇದು ನನಗನ್ನಿಸಿದ ಮಾತು. ತನ್ನ ಮನೆಗೆ ತೆರಳುವ ಬಸ್ಸನ್ನೇರಿ ಕುಳಿತ ಆ ಪುಟ್ಟ ಹುಡುಗಿ ಕಿಟಕಿಯನ್ನು ದಿಟ್ಟಿಸುತ್ತಾ ಕಣ್ಣೀರಿಳಿಸುತ್ತಿರುವುದನ್ನು ಕಂಡು ಹೀಗಾಗಿರಬಹುದು ಅಂದುಕೊಂಡೆ. ಮಕ್ಕಳ ಮನಸ್ಸಿನ ಮಾತುಗಳಿಗೆ ಕಿವಿ ಆದ್ರೆ ಮಕ್ಕಳ ಕಣ್ಣಿನಿಂದ ಇಳಿಯುವ ಕಣ್ಣೀರು ಕಡಿಮೆಯಾಗುತ್ತದೆ ಅನುಭವದ ಮಾತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ