ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ  ೧೯೨೫ರ ನವೆಂಬರ್ ೨೮ರಂದು ಜನಿಸಿದ ಕವಿ  ಡಾ. ಬಿ.ಸಿ.ರಾಮಚಂದ್ರ ಶರ್ಮ ಅವರು ನವ್ಯ ಸಾಹಿತ್ಯ ಕಾಲ ಘಟ್ಟದ ಪ್ರಮುಖ ಲೇಖಕರಲ್ಲಿ ಒಬ್ಬರು. ನವೋದಯ ಮತ್ತು ಪ್ರಗತಿಶೀಲ ಚಳವಳಿಯ ಸಣ್ಣ ಕಥೆಗಳಿಗಿಂತ ಭಿನ್ನವಾದ ಹೊಸ ಸಂವೇದನೆಯ ಕಥೆಗಳನ್ನು ರಚಿಸಿದವರು. ಕನ್ನಡದ ಮೊತ್ತಮೊದಲ ನವ್ಯ ಕಥೆಗಾರ ಎಂದು ಗುರುತಿಸುವಷ್ಟರ ಮಟ್ಟಿಗೆ ಅವರ ಕಥೆಗಳ ಸಾಹಿತ್ಯದ ಧೋರಣೆ ವಿಶಿಷ್ಟವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 'ಚಿಕವೀರರಾಜೇಂದ್ರ' ಕಾದಂಬರಿಯನ್ನು ಇಂಗ್ಲಿಷ್‌ಗೆ ಶರ್ಮರು ಅನುವಾದಿಸಿದ್ದರು.

ಈ ಶತಮಾನದ ನೂರು ಇಂಗ್ಲಿಷ್ ಕವನಗಳು ಹಾಗೂ ಹಲವು ಕಥೆಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶರ್ಮಾ ಅವರ ಕೃತಿಗಳು- ಮಂದಾರ ಕುಸುಮ, ಏಳನೆಯ ಜೀವ, ಬೆಳಗಾಯಿತು, ಕತೆಗಾರನ ಕತೆ (ಕಥಾ ಸಂಕಲನಗಳು), ಏಳು ಸುತ್ತಿನ ಕೋಟೆ, ಬುವಿ ನೀಡಿದ ಸ್ಫೂರ್ತಿ, ಹೃದಯಗೀತ, ಹೇಸರಗತ್ತೆ, ಬ್ರಾಹ್ಮಣ ಹುಡುಗ, ಮಾತು-ಮಾಟ, ದೆಹಲಿಗೆ ಬಂದ ಹೊಸ ವರ್ಷ, ಸಪ್ತಪದಿ (ಕವನ ಸಂಗ್ರಹಗಳು). ಸೆರಗಿನ ಕೆಂಡ, ನೆರಳು, ಬಾಳಸಂಜೆ, ನೀಲಿ ಕಾಗದ, ವೈತರಣಿ (ನಾಟಕಗಳು). ರಾಮಚಂದ್ರ ಶರ್ಮ ಅವರು ೨೦೦೫  ಏಪ್ರಿಲ್ ೧೮ರಂದು ನಿಧನರಾದರು.

ರಾಮಚಂದ್ರ ಶರ್ಮ ಇವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಅದನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಓದುವ ಸುಖ ನಿಮ್ಮದಾಗಲಿ…

ಕ್ಷೋಭೆ

೧.

ಗಾಳಿ

ಮಲ್ಲಿಗೆ ಕಂಪ ಮೂಸಿತ್ತು ನನಗಿಂತ ಬಲು ಮೊದಲೆ

ಕೊಠಡಿಯುದ್ದಕು ಕರಿಯತೊಂದು ಕರೆಂಟು!

ಗಾಳಿಯೊಳು ಕುಣಿದು ತೋರಿದರೆನಗೆ ನೂರು ಜೋಡಿ

ಗಳಾಗದಾಲ್ಟ್ಜ್ ಕುಣಿತದ ಲೀಲೆ

ಜೈಲರಿನ ಸೊಂಟದೊಳು ತುಂಟ ಬೀಗದಕೈಯ ಗೊಂಚಲದು

ಮೂಕ ! ಘಳಿಗೆ ಸರಿಗಮಮಿಡಿದು

ಅದಕೆ ಬಂದಿಯ ಹೃದಯ ಕುಣಿವುದುಂಟು

ನೂರು ಯೋಜನದಾಚೆ ಗಾಳಿಯಿಡುತಿರೆ ದಾಳಿ

ಸ್ಪಂದಿಸಿದೆ ರೇಡಿಯೋ ಬರುವ ಕ್ಷೋಭೆಯ ಮೊದಲ ತೊದಲು

ನುಡಿ ನುಡಿದು !

೨.

ಗಾಳಿ ಕಳವಳನುಡಿಯೆ ತಲೆಯೆತ್ತಿದೆ ನಾನು ಪುಸ್ತಕದ

ಸಾಲು ಸಂಕೋಲೆಯಿಂದ

ಬಿಸವಂದ !

ಬಿಸವಂದ!

ತೆರೆದ ಬಾಗಿಲಿಗೊರಗಿ ನಿಂತ ಹರೆಯದ ಹೆಣ್ಣ

ಮಾಟ ತುಂಬಿತು ಕಣ್ಣ.

ತಿಳಿಗೊಳದ ನೀರಿನೊಳಗಣ ನೆರಳು

ಈ ತರಳೆ !

ತನ್ನರಿದ ಮಂದಿರದ ಹೊಸ್ತಿಲೊಳು ನಿಂತಿರುವ  ಕೂಗು ಮನಸಿನ ಕನಸು

ಈ ಚೆಲುವೆ ಬಾಲೆ !

ಕೈಬೆರಳು

ಸೀರೆ ಸೆರಗಿನ ತುದಿಯ ಜೊತೆ ಗುಂಗುರದ ಆಟವಾಡಿತ್ತು

ಅಂತೆ ಕೆನ್ನೆಯ ಮನಸು

ಯಾವುದೋ ಬಯಕೆ ಸೆರಗಿನ ಅಂಚ ನೆಡೆಬಿಡದೆ ಕಾಡಿತ್ತು

ಅಯ್ಯೋ ಅಯ್ಯೋ ಪಾಪ

ಎದೆಯ ಅಂಗಳದಲಿ ನೂರು ಸೂರ್ಯರ ತಾಪ, ಕೋಪ, ಪ್ರತಾಪ

ಅಬಲೆಯೆದೆ ಬಾಡಿತು

ಮುಖ ಅಜ್ಜಿಹೂವಾಗಿ ನೋಡಿತು !

ಕರುಣೆಯನು ಬೇಡಿತು !

೩.

ಮಾತಿಲ್ಲ ಮಾತುಕತೆಯಿಲ್ಲ ನಮ್ಮ ನಡುವಿನೊಳು ಕಣ್ಣು 

ನುಡಿದಿತ್ತು ಎದೆಯ ಸಿರಿಬಯಕೆಯನ್ನು !

ನಿಸ್ತಂತು ವಾರ್ತಾಗ್ರಾಹಕ ನಾನು !

ಮಾತಿದ್ದರೇನು? ಇರದಿದ್ದರೇನು?

೪.

ನಾನಾಗ ಕಂಡೆ ಬೆತ್ತಲೆ ಹೆಣ್ಣ

ಅವಳ ನಗ್ನತೆ ಪೂರ್ಣ ಸಂಪೂರ್ಣ !

ನಗ್ನತೆಯ ಬೆಳಗಿತ್ತು ಕಣ್ಣ

ಸೆಳೆಯುವ ಬಣ್ಣ

ಬಣ್ಣಗಳ ನಿಯಾನ್ ದೀಪ

ತೆರೆದ ಪುಸ್ತಕದಂತೆ ಸ್ಪಷ್ಟರೂಪ !

ಮುಚ್ಚುಮರೆಯಿರಲಿಲ್ಲ 

ಭಾವ ಸೂಚಿಸಲಿಲ್ಲ

ಬಿಚ್ಚಿ ನುಡಿದಿತ್ತು ಮೈ ರೋಮ ರೋಮದ ಬಯಕೆ ಕತೆಯನು

ರಾಮ ರಾಮ !

ಸ್ಕೂಲ್ ಕಾಲೇಜುಗಳ ಕಕ್ಕಸಿನ ಗೋಡೆಗಳು ರಾರಾಜಿಸುವ

ಚಿತ್ರ ನುಡಿವಂಥ ಕಾಮ !

೫.

ಯಾವ ರಾಕ್ಷಸ ಕೈ

ಬರೆದ ಚಲನ ನಿಯಮವೊ ! ಎದೆಯಂತು

ತಿದಿಯಂತೆ

ಹಿಗ್ಗಿದೆ

ಕುಗ್ಗಿದೆ

ಕಡಲಮೈ

ಒಡಲಿನುಬ್ಬರವಿಳಿತ

ಎಂಥ ನಿಟ್ಟುಸಿರೆಳೆತ !

ಗೋಡೆ, ಛಾವಣಿ, ಕಿಟಕಿ, ಕುರ್ಚಿ, ಮೇಜುಗಳೆಲ್ಲ

ತೂಗಿವೆ

ಬಾಗಿವೆ

ಮುಗಿಲು ನೆಲಗಳ ನಡುವೆ ಉಯ್ಯಾಲೆಯೊಳಗಾಡಿದೆ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)