ಖಾಲಿ ಆಕಾಶವನ್ನು ದಿಟ್ಟಿಸುತ್ತಾ ಮಿನುಗುವ ನಕ್ಷತ್ರಗಳನ್ನು ಹುಡುಕುತ್ತಿದ್ದೇನೆ. ಪ್ರತಿದಿನವೂ ಇದೇ ಕೆಲಸವನ್ನು ಮಾಡುತ್ತಿಲ್ಲ ಎಂದಲ್ಲ.ದಿನವೂ ನನಗೆ ಹೆಚ್ಚು ಮಿನುಗುವ ನಕ್ಷತ್ರಗಳು ಕಾಣಲಿ ಎನ್ನುವ ಆಸೆ ಅಷ್ಟೇ. ಆದರೆ ಕೆಲವೊಂದು ಕಡೆ ಮಿನುಗುವ ನಕ್ಷತ್ರಗಳ ನೋಡುವ ಅವಕಾಶಗಳನ್ನ ನಾನೇ ನನ್ನ ಕೈಯಾರೆ ಕಳೆದುಕೊಂಡಿದ್ದೇನೆ. ಹಲವಾರು ಜನ ಕೈ ಹಿಡಿದು ತಂದು ಮಿನುಗುವ ನಕ್ಷತ್ರಗಳನ್ನು ತೋರಿಸಿದರು ಕೂಡ ನನ್ನದೇ ಯೋಚನೆಗಳ ದಾಟಿಯಲ್ಲಿ ನನ್ನದೇ ಕೆಲಸದಲ್ಲಿ ಮುಳುಗಿ ಮಿನುಗುವ ಬೆಳಕನ್ನ ನನ್ನೊಳಗೆ ತಂದುಕೊಳ್ಳುವುದನ್ನು ಮರೆತಿದ್ದೇನೆ. ಆದರೆ ಇನ್ನು ಮುಂದೆ ಹಾಗಾಗಬಾರದು. ಪ್ರತಿದಿನವೂ ನಕ್ಷತ್ರದಂತೆ ಮಿನುಗುವ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು. ಅದಕ್ಕೋಸ್ಕರ ಇದೇ ದಿನ ಅಂತಲ್ಲ. ಆದರೆ ಇದನ್ನ ಯಾವತ್ತೋ ಮಾಡಬಹುದಿತ್ತು. ಇವತ್ತಿನಿಂದಲಾದರೂ ಮಾಡದೆ ಇದ್ರೆ ನಾನೊಬ್ಬ ಮೂರ್ಖನಾಗಿ ಉಳಿದುಬಿಡುತ್ತೇನೆ. ಹಾಗಾಗಿ ತಲೆಯೆತ್ತಿ ಮಿನುಗುವ ಅವಕಾಶಗಳನ್ನ ಕಣ್ಣ ಮುಂದೆ ಕಾಣುವ ಸಣ್ಣ ಸಣ್ಣ ಬೆಳಕುಗಳನ್ನ ಜೋಡಿಸುತ್ತಾ ದೊಡ್ಡ ಬೆಳಕಿನ ಕಡೆಗೆ, ಬೆಳಕಾಗುವ ಕಡೆಗೆ ಸಾಗಬೇಕಾಗಿದೆ. ಆ ಬೆಳಕಿನಲ್ಲಿ ಹೆಜ್ಜೆ ಇಡುವವರನ್ನು ಜೊತೆಗೆ ಕರೆದೊಯ್ಯುತ್ತಾ ಒಂದಷ್ಟು ಬೆಳಕುಗಳನ್ನ ಹಂಚುತ್ತಾ ಬೇರೆ ಬೇರೆ ಬೆಳಕಿನಲ್ಲಿ ಮಿನುಗುತ್ತಿರುವವರನ್ನು ಕಂಡು ಸ್ಪೂರ್ತಿಗೊಳ್ಳುತ್ತಾ ಮುಂದೆ ಸಾಗುತ್ತೇನೆ. ತಪ್ಪುಗಳ ಪಟ್ಟಿ ತುಂಬಾ ದೊಡ್ಡದಿದೆ ಅದು ಮರುಕಳಿಸಬಾರದೆಂಬ ನಿರ್ಧಾರದಿಂದ ಎಚ್ಚರವಾಗಿದ್ದೇನೆ." ಹೀಗೆ ರಾತ್ರಿ ನಿರ್ಧರಿಸಿದವನು ಮರುದಿನ ಬೆಳಗ್ಗೆ ಏಳುವುದನ್ನೇ ಮರೆತಿದ್ನಂತೆ. ನೀನು ಹಾಗಾಗಬೇಡ ಎಂದು ಪ್ರತಿದಿನವೂ ಸಿಗುತ್ತಿದ್ದ ಎದುರು ಮನೆ ಅಜ್ಜ ನನ್ನನ್ನು ನೋಡಿ ಹೇಳುತ್ತಾ ನಕ್ಕು ಮುಂದುವರೆದರು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!