ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ನೆಲವೊಂದು ಜನರ ಪಾದ ಸ್ಪರ್ಶವನ್ನು ಬಯಸ್ತಾ ಇತ್ತು. ಆದರೆ ಸುತ್ತ ಬೆಳೆದ ಗಿಡ ಗಂಟಿಗಳಿಂದ ಆ ನೆಲವನ್ನ ಗಮನಿಸುವವರು ಇರಲಿಲ್ಲ. ಒಂದೇ ಒಂದು ಕಾಲದಲ್ಲಿ ಜನರೆಲ್ಲ ಅಲ್ಲಿ ಓಡಾಡುತಾ ಗಟ್ಟಿಯಾದ ಸಂಘಟನೆಯನ್ನು ಕಟ್ಟಿಕೊಂಡ ಸ್ಥಳವಂತೆ, ಹೀಗೊಂದು ಪೌರಾಣಿಕ ಇತಿಹಾಸವಿದೆ. ಕಾಲಾನುಕ್ರಮದಲ್ಲಿ ಮತ್ತೆ ಆ ಸ್ಥಳಕ್ಕೆ ಒಂದಷ್ಟು ಮೌಲ್ಯ ಸಿಗಬೇಕಾದ ಘಟನೆಯೊಂದು ಘಟಿಸಬೇಕಿತ್ತು. ಇಡೀ ಭಾರತಕ್ಕೆ ಲಾಕ್ಡೌನ್ ಎನ್ನುವ ಹೊಸತೊಂದು ಆದೇಶ ಬಂದಾಗ ಸುತ್ತಮುತ್ತಲ ಯುವಕರಿಗೆ ಸಮಯ ಕಳೆಯುವುದಕ್ಕಾಗಿ ಹೊಸತೊಂದು ಯೋಜನೆ ಬೇಕಿತ್ತು. ಹಾಗೆ ಆ ಗಿಡಗಂಟಿಗಳು ತುಂಬಿದ ಸ್ಥಳದಲ್ಲಿ ಆಟವಾಡುವುದಕ್ಕೆ ನಿರ್ಧರಿಸಿದ್ರು. ಕೆಲವು ಯುವಕರು ಸೇರಿಕೊಂಡು ಶ್ರಮವಹಿಸಿ ಸ್ಥಳವನ್ನು ಸ್ವಚ್ಛಗೊಳಿಸಿ ಸಣ್ಣದಾದೊಂದು ಕ್ರಿಕೆಟ್ ಅಂಗಳವನ್ನು ತಯಾರಿಸಿಬಿಟ್ರು. ಲಾಕ್ ಡೌನ್ ನಲ್ಲಿ ಕೆಲಸವಿಲ್ಲದ ಹಲವು ಮನಸ್ಸುಗಳು ಆಟವೆನ್ನುವ ಸಂಭ್ರಮದ ಪ್ರಪಂಚಕ್ಕೆ ಕಾಲಿಟ್ಟು ಹೊಸ ಹೊಸ ಮನಸ್ಸುಗಳನ್ನು ಸೇರಿಕೊಂಡು ಗಟ್ಟಿ ಸಂಘಟನೆಯಾಗುವಂತ ಬೆಳೆದರು. ಕೆಲವರಿದ್ದವರು ಹಲವರಾಗಿ ಯುವ ಮನಸ್ಸುಗಳಿಗೆ ಕ್ರಿಕೆಟ್ ಕಲಿಸುತ್ತಾ ಹೊಸ ಬಾಂಧವ್ಯವನ್ನು ಬೆಳೆಸಿಕೊಂಡರು. ಕಷ್ಟಕ್ಕೆ ಪರಿಹಾರವಾಗುತ್ತಾ, ನೋವಿಗೆ ನೆರವಾಗುತ್ತಾ, ಎಲ್ಲರ ಬದುಕಿನಲ್ಲಿ ಅತ್ಯಮೂಲ್ಯ ಕ್ಷಣಗಳನ್ನು ದಾಖಲಿಸಿಕೊಂಡರು. ಅಲ್ಲಿ ಕ್ರಿಕೆಟ್ ಗೆದ್ದಿತ್ತು, ಮನಸ್ಸುಗಳು ಗೆದ್ದಿದ್ದವು, ಹಲವರ ಶ್ರಮಕ್ಕೆ ಫಲ ಸಿಕ್ಕಿತ್ತು .ಜೊತೆಗೆ ಪಾದ ಸ್ಪರ್ಶಕ್ಕೆ ಕಾಯುತ್ತಿದ್ದ ನೆಲವಿಂದು ಸಂಭ್ರಮದಲ್ಲಿ ಕುಣಿದಾಡುತ್ತಿತ್ತು. ಅದ್ಭುತವಾದ ಪ್ರಪಂಚವನ್ನು ಕಟ್ಟಿ ಕೊಡುತ್ತಾ ನೆನಪುಗಳ ಮೂಟೆಯನ್ನು ತುಂಬಿಸಿ ಕಳುಹಿಸಿಕೊಟ್ಟವು. ನೆಲ ಬಯಸಿದಂತೆ ಹಲವು ಮನಸ್ಸುಗಳು ಇಂದು ಸದೃಡ ಸಮಾಜ ಕಟ್ಟುವಲ್ಲಿ ಹೊಸ ಪ್ರೇರೇಪಣೆ ನೀಡಿತು. ನೆಲ ಬಯಸಿದಂತೆ ಬದುಕಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ