ಕಳೆದು ಹೋಗಿತ್ತು ನನ್ನ ಬೈಕಿನ ಕೀ. ಅದೆಷ್ಠೇ ಹುಡುಕಾಡಿದರೂ ಸಹ ಎಲ್ಲಿಟ್ಟಿದ್ದೇನೆ ಅನ್ನೋದು ನೆನಪಾಗ್ತಾ ಇಲ್ಲ. ನಾನು ನನ್ನ ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದೆ ಆತ ಕೆಲಸ ಮುಗಿಸಿ ಮರಳಿ ನನ್ನ ಕೈಗೆ ಕೊಟ್ಟದ್ದು ನೆನಪಿದೆ. ಆದರೆ ಎಲ್ಲಿಟ್ಟಿದ್ದೇನೆ ಅನ್ನೋದು ಎಷ್ಟು ಯೋಚನೆ ಮಾಡಿದ್ರು ಮನಸ್ಸಿಗೆ ಹೊಳಿತಾನೆ ಇಲ್ಲ. ಆ ದಿನ ಬೈಕನ್ನು ಅಲ್ಲೇ ಬಿಟ್ಟು ಮನೆ ಕಡೆ ಹೊರಟು ಬಿಟ್ಟೆ. ಮರುದಿನ ಮತ್ತೆ ಬಂದು ನಾನು ಹೋದ ಸ್ಥಳದಲ್ಲಿ ಎಲ್ಲಾ ಕಡೆ ಹುಡುಕಾಡಿದ್ರು ಸಹ ನನ್ನ ಬೈಕಿನ ಕೀ ಸಿಗಲೇ ಇಲ್ಲ. ಮತ್ತೆ ನಾನು ನನ್ನ ಬೈಕನ್ನೇರಬೇಕಾದರೆ ಹೊಸದಾಗಿ ಕೀ ತಯಾರಿಸುವವರ ಬಳಿ ತೆರಳಬೇಕು. ಅದಕ್ಕೆ ಏನು ಮಾಡಬೇಕು ಅಂತ ತಿಳಿದವರಲ್ಲಿ ಕೇಳಿಕೊಂಡು ಹೊರಡುವುದು ಅಂತ ತೀರ್ಮಾನ ಮಾಡಿದ್ದೆ. ಮಧ್ಯಾಹ್ನ ಹೊರಡುವುದಕ್ಕಾಗುವಾಗ ಒಂದಷ್ಟು ಕೆಲಸಗಳು ಮೇಲಿಂದ ಮೇಲೆ ನನಗೆ ಬಂದು ಆ ಸಮಯದಲ್ಲಿ ಹೊರಡುವುದಕ್ಕಾಗಲಿಲ್ಲ. ಸಂಜೆ ಮೂರು ಗಂಟೆಗೆ ನಿಗದಿಯಾಗಿದ್ದ ಅದೇ ಕೆಲಸ ಇನ್ಯಾವುದೋ ಕಾರಣಕ್ಕೆ ಮತ್ತೆ ಮುಂದೂಡಲ್ಪಟ್ಟಿತು. ಆ ಕೆಲಸ ಮುಗಿಸಿದ ತಕ್ಷಣದಲ್ಲಿ "ನಮ್ಮ ವಾಹನದಲ್ಲೆಲ್ಲಾದರೂ ನಿಮ್ಮ ಬೈಕಿನ ಕೀಯನ್ನ ಬಿಟ್ಟು ಹೋಗಿದ್ದೀರಾ?" ಅನ್ನುವ ಮಾತು ಒಂದು ಸಲ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಹೌದು ಆ ದಿನ ಒಂದಷ್ಟು ಕೆಲಸದ ನಡುವೆ ಒಂದೆರಡು ಗಾಡಿಗಳಲ್ಲಿ ಕೂಡ ಓಡಾಡಿದ್ದೆ. ಅಲ್ಲಿಯೇ ನನ್ನ ಬೈಕಿನ ಕೀಯನ್ನು ಬಿಟ್ಟು ಬಂದವನಾಗಿದ್ದೆ. ಅವರಿಂದಲೇ ಕರೆ ಬಂದು ನನ್ನ ಬೈಕಿನ ಕೀಯನ್ನು ಸ್ವೀಕರಿಸಿದೆ. ಭಗವಂತ ನನ್ನ ಬೈಕಿನ ಕೀ ನನಗೆ ಸಿಗಬೇಕು ಅನ್ನೋದ್ದನ್ನ ನಿರ್ಧರಿಸಿದ್ದ. ಅದಕ್ಕೆ ನಾನು ಹೊರಡುವ ಒಂದೆರಡು ಕ್ಷಣಗಳನ್ನು ಭಗವಂತ ತಪ್ಪಿಸಿಬಿಟ್ಟಿದ್ದ. ಭಗವಂತ ನಮಗೆ ಒಳಿತು ಮಾಡುವುದಕ್ಕೆ ಹಲವಾರು ಕಾರಣಗಳನ್ನು ಸೃಷ್ಟಿಸಿರುತ್ತಾನೆ. ನಮ್ಮನ್ನ ಸೃಷ್ಟಿಸಿದವನಿಗೆ ನಮ್ಮನೇನು ಮಾಡಬೇಕು ಅನ್ನೋದು ತುಂಬಾ ಚೆನ್ನಾಗಿ ತಿಳಿದಿರುತ್ತೆ ಅಲ್ವಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!