ಭಾರತದಲ್ಲಿ ದೈನಿಕ ಕನಿಷ್ಟ ವೇತನ ಪ್ರಮಾಣ ಹೆಚ್ಚಿಸಬೇಕು. ಈಗಿನ ಬೆಲೆಯೇರಿಕೆಯ ಮಾನದಂಡಕ್ಕೆ ಅದು ಅನುಗುಣವಾಗಿಲ್ಲ ಎಂಬುದು ಬಹುಸಮಯದಿಂದ ಕೇಳಿಬರುತ್ತಿರುವ ಕೂಗು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರಕಾರ, ಭಾರತದಲ್ಲಿ ಈಗಿರುವ ಕನಿಷ್ಟ ವೇತನವನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ ಎಲ್ ಒ) ಪರಿಣಿತರ ಸಲಹೆ ಪಡೆದು ವೈಜ್ಞಾನಿಕವಾಗಿ ಪರಿಷ್ಕರಿಸಲು ಮತ್ತು ಕನಿಷ್ಟ ವೇತನದ ಬದಲು ಜೀವನ ನಿರ್ವಹಣೆಗೆ ತಗಲುವ ಖರ್ಚನ್ನು ಆಧರಿಸಿ (ಲಿವಿಂಗ್ ವೇಜ್) ವೇತನದ ರೂಪುರೇಷೆ ರಚಿಸಲು ಮುಂದಾಗಿರುವುದು ಸ್ವಾಗತಾರ್ಹ. ೨೦೨೫ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ಪ್ರಸಕ್ತ ಭಾರತದಲ್ಲಿ ದೈನಿಕ ಕನಿಷ್ಟ ವೇತನ ೧೭೬ ರೂ. (೨.೧ ಡಾಲರ್) ಇದೆ. ಇದು ಬಾಂಗ್ಲಾದೇಶ (೩.೧ ಡಾಲರ್), ವಿಯೆಟ್ನಾಂ (೬.೫ ಡಾಲರ್), ಚೀನಾ (೧೧.೯ ಡಾಲರ್) ದೇಶಗಳಿಗಿಂತ ತೀರಾ ಕಡಿಮೆ. ಭಾರತದಲ್ಲಿ ಸರಾಸರಿ ೫೦ ಕೋಟಿ ಜನರು ದೈನಂದಿನ ಕೂಲಿಯ ಮೇಲೆ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆ ಪೈಕಿ ಶೇಕಡ ೯೦ ರಷ್ಟು ಜನರು ಅಸಂಘಟಿತ ವಲಯಕ್ಕೆ ಸೇರಿದವರು. ಇನ್ನು ಮುಂದೆ, ಆಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಟ ವೇತನದ ಬದಲು ಜೀವನ ನಿರ್ವಹಣೆ ಆಧಾರದಲ್ಲಿ ವೇತನ ನಿಗದಿ ಪಡಿಸಲು ಚಿಂತನೆ ನಡೆಸಿರುವುದರಿಂದ, ಅದರಿಂದ ಖಂಡಿತವಾಗಿಯೂ ಅಸಂಘಟಿತ ವಲಯದ ಕಾರ್ಮಿಕರಿಗೆ ಲಾಭವಾಗಲಿದೆ ಮತ್ತು ಅವರ ಜೀವನಸ್ತರ ವಿಸ್ತರಿಸಲು ಅನುಕೂಲವಾಗಲಿದೆ ಎಂಬುದು ತಜ್ಞರ ಅಂಬೋಣ. ಭಾರತದಲ್ಲಿ ದೈನಿಕ ಕನಿಷ್ಟ ವೇತನ (೧೭೬ ರೂ) ೨೦೧೭ರಿಂದಲೂ ಬದಲಾಗಿಲ್ಲ ಎಂಬುದು ಗಮನಾರ್ಹ. ಆದರೆ ಕಳೆದ ಏಳು ವರ್ಷಗಳಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆಗಳಲ್ಲಿ ಗಣನೀಯ ಪ್ರಮಾಣದ ಏರಿಕೆ ಆಗಿದೆ. ಆಹಾರಧಾನ್ಯ, ತರಕಾರಿ, ಹಣ್ಣು ಸೇರಿದಂತೆ ಎಲ್ಲ ವಸ್ತುಗಳ ದರಗಳು ಹೆಚ್ಚಿವೆ. ಹೀಗಿರುವಾಗ ಕಾರ್ಮಿಕರು ಈ ಏಳು ವರ್ಷಗಳ ಹಳೆಯ ಮಾನದಂಡದ ಕನಿಷ್ಟ ವೇತನದಲ್ಲಿ ಜೀವನ ನಿರ್ವಹಿಸಲು ಹೇಗೆ ಸಾಧ್ಯ?

ಪ್ರಸಕ್ತ ವಿವಿಧ ರಂಗಗಳಲ್ಲಿ ಕಾರ್ಮಿಕರ ಉತ್ಪಾದಕತೆ ಮತ್ತು ಕೌಶಲದ ಆಧಾರದಲ್ಲಿ ವೇತನ ನೀಡಲಾಗುತ್ತಿದೆ. ಆದರೆ, ಈ ವೇತನ ಯಾವುದಕ್ಕೂ ಸಾಕಾಗುತ್ತಿಲ್ಲ. ಹಾಗಾಗಿಯೇ, ಜೀವನ ನಿರ್ವಹಣೆ ವೆಚ್ಚದ ಆಧಾರದಲ್ಲಿ ದೈನಿಕ ಕನಿಷ್ಟ ವೇತನ ವ್ಯವಸ್ಥೆಯನ್ನು ಮರುರೂಪಿಸುವ ಬೇಡಿಕೆಗೆ ಕೊನೆಗೂ ಸರಕಾರ ಸ್ಪಂದಿಸಿರುವುದು ಉತ್ತಮ ಬೆಳವಣಿಗೆ. ಅಸಂಘಟಿತ ವಲಯದ ಕಾರ್ಮಿಕರ ಹಿತಕ್ಕಾಗಿ ಅನೇಕ ಯೋಜನೆಗಳೇನೋ ಘೋಷಣೆಯಾಗುತ್ತವೆ. ಆದರೆ, ಅವು ಜಾರಿಯ ಹಂತದಲ್ಲಿ ಎಡವಿ, ನಿಜವಾದ ಫಲಾನುಭವಿಗಳಿಗೆ ತಲುಪುವುದೇ ಇಲ್ಲ ಎಂಬುದು ಕಟು ವಾಸ್ತವ. ಹಾಗಾಗಿ, ಕನಿಷ್ಟ ವೇತನವನ್ನು ಹೆಚ್ಚಿಸುವ ಮತ್ತು ಹೊಸ ವ್ಯವಸ್ಥೆಯನ್ನು ರೂಪಿಸುವ ಸಂದರ್ಭದಲ್ಲಾದರೂ, ಯಾವುದೇ ಅಪಸವ್ಯ ಸಂಭವಿಸದಂತೆ ಕಾಳಜಿ ವಹಿಸಬೇಕು ಮತ್ತು ಕಾರ್ಮಿಕರು ಘನತೆಯ ಬದುಕು ಕಟ್ಟೊಕೊಳ್ಳುವಂತಾಗಲು, ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗುವಂತಾಗಲು ಸರ್ಕಾರ ಸೂಕ್ತ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಕಾರ್ಮಿಕರ ಜೀವನಸ್ಥಿತಿ ಸುಧಾರಿಸಿದರೆ ಅದರಿಂದ ಆರ್ಥಿಕತೆಗೂ ಪೂರಕ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೪-೦೫-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ