'ನೋಕ್ರು ನಂಕ್ ಕಾಸಿ ಎಂದುಮ್ ಬೇಂಡ; ನಙಂ ಪೆನ್ನ್ ಪೆತ್ತಙಮೇ..'(ನೋಡಿ ನಮಗೆ ವರದಕ್ಷಿಣೆ ಏನೂ ಬೇಡ ನಾವೂ ಹೆಣ್ಣು ಹೆತ್ತವರೇ..) ಗಂಡಿನ ತಂದೆ ಇಸುಬಾಕನ ಮಾತಿಗೆ ಇಬ್ರಾಯಾಕನ ಮುಖ ಪ್ರಸನ್ನವಾಗಿತ್ತು. 'ಅಲ್ಹಮ್ದುಲಿಲ್ಲಾಹ್ ಅಲ್ಲಾಹನೊಟ್ಟಿಗೆ ದುಆ ಮಾಡಿದ್ದಕ್ಕೂ ಸಾರ್ಥಕವಾಯ್ತು' ಎಂದು ಮನಸಿನಲ್ಲಿ ಸಂತೃಪ್ತಗೊಳ್ಳುವಾಗಲೇ 'ನಮಗೆ ವರದಕ್ಷಿಣೆ ಬೇಡ, ಆದ್ರೆ ನಿಮ್ಮ ಮಗಳಿಗೆ ಇಪ್ಪತ್ತೈದು ಪವನ್ ಚಿನ್ನ ಹಾಕಿದ್ರೆ ಸಾಕು.. ನಿಮ್ಮ ಮಗಳಲ್ಲೇ ಇರುತ್ತೆ ಅಲ್ವಾ..' ಅಂದಾಗ ಇಬ್ರಾಯಾಕನ ಪ್ರಸನ್ನತೆ ಮಳೆಗಾಲದ ಬಿಸಿಲಿನಂತೆ ಮೂಡಿ ಮರೆಯಾಗಿತ್ತು.
ಹೆಚ್ಚಿನ ಅನುಕೂಲವಂತರಾಗಿದ್ದಾರೆ ಸಮಸ್ಯೆಯೇನು ಇರುತ್ತಿರಲಿಲ್ಲ. ಇಪ್ಪತ್ತೈದು ಪವನ್ ಚಿನ್ನ ಹಾಕೋದೇ ಅಸಾಧ್ಯವಾದರೆ ಬೇರೆ ಒಳ್ಳೆಯ ಪಾರ್ಟಿ ಬರಬಹುದು ಎಂಬ ನಿರೀಕ್ಷೆಗೆ ಅಲ್ಲಿ ಅವಕಾಶವಿರಲಿಲ್ಲ. ಹುಡುಗ ಹುಡುಗಿ ಪರಸ್ಪರ ಪ್ರೀತಿಸಿದ್ದರು. ಈ ವಿಷಯ ಇಬ್ರಾಯಾಕನಿಗೆ ತಿಳಿದಿರಲಿಲ್ಲ. ಇಬ್ರಾಯಾಕ ಬ್ರೋಕರ್ ಹತ್ತಿರ ಒಂದು ಒಳ್ಳೆಯ ಸಂಬಂಧ ನೋಡಿ ಎಂದು ತಿಳಿಸಿದ್ದುದು ಮಗಳು ನಸೀಮಾಗೆ ತಿಳಿದಿತ್ತು. ನಸೀಮಾ ಹುಡುಗನಿಗೆ ತಿಳಿಸಿ ಅವರು ಹೆಣ್ಣು ನೋಡಲು ಬಂದಿದ್ದರು. ಗೊಂದಲದಲ್ಲಿದ್ದ ಇಬ್ರಾಯಾಕನ ಮೌನವನ್ನು ಗಮನಿಸಿದ ಇಸುಬಾಕ, 'ನೋಕ್ರು ಎಂದ್ರೆಂಟ್ ಪಿನ್ನೆ ಚೆಲ್ಲೋರು. ಚೆರ್ಕ ಡಿಸೆಂಬರ್ ಲ್ ಸೌದಿಗ್ ಪೋಂಡ. ಈ ಅಗೋಸ್ಟು ಲ್ ಮಂಙಿಲ ಬೆಕ್ಕ ಆವಲೆ..' (ನೋಡಿ, ಏನು ಅಂತ ಮತ್ತೆ ಹೇಳಿ. ಹುಡುಗ ಡಿಸೆಂಬರ್ ನಲ್ಲಿ ಸೌದಿಗೆ ಹೋಗ್ತಾನೆ. ಈ ಆಗಸ್ಟ್ ನಲ್ಲಿ ಮದ್ವೆ ಮಾಡುವ ಆಗದ) ಇಬ್ರಾಯಾಕನ ಸಂತಸ, ಮಾತಿನ ಸ್ಪುಟತೆ ಕ್ಷೀಣವಾಗಿತ್ತು.. 'ನಿಂಕ್ ಅಸರ್ ಗ್ ಕಾಲ್ ಅಕ್ರೆ..' ಅಂತ ಅವರನ್ನು ಬೀಳ್ಕೊಟ್ಟರು. ನಸೀಮಾಳನ್ನು ನೋಡಲು ಬಂದ ಪಾರ್ಟಿಗಳಲ್ಲಿ ಇವರು ಎಂಟನೆಯವರು. ಉಳಿದ ಪಾರ್ಟಿಗಳಲ್ಲಿ ಕೆಲವರು ಸಣ್ಣ ಮನೆ, ಮಣ್ಣಿನ ಗೋಡೆ ನೋಡಿ ನಮ್ಮ ಮಗ ಇಲ್ಲಿಗೆ ಬರ್ಬೇಕಾ ಅಂತ್ಹೇಳಿ ಹಿಂದಿರುಗಿದ್ದರೆ ಇನ್ನೂ ಕೆಲ ಹುಡುಗರನ್ನು ನಸೀಮಾ ತಿರಸ್ಕರಿಸಿದ್ದಳು.
ಸುಮಾರು ಹತ್ತು ವರ್ಷಗಳಿಂದ ಮಂಗಳೂರಿನ ಬ್ಯಾರಿ ಸಮುದಾಯದಲ್ಲಿ ಕಾಸಿ ಬಂಗಾರಿನ ತಾಳ ಮೇಳಗಳು ಕಡಿಮೆಯಾಗಿದೆ ಎಂದು ಕೇಳಿದ್ದ ಇಬ್ರಾಯಾಕನಿಗೆ ಇವರ ಮಾತಿನ ವರಸೆ ಕೇಳಿ ತಲ್ಲಣವಾಗಿತ್ತು 'ನಿಮ್ಗೆ ಎಷ್ಟು ಸಾಧ್ಯ ಆಗ್ತದೋ ಅಷ್ಟು ಹಾಕಿ ನಮ್ದು ಏನೂ ಬೇಡಿಕೆ ಇಲ್ಲ' ಅಂತ ಸೌಜನ್ಯಕ್ಕಾದರೂ ಅನ್ನಬಹುದಿತ್ತಲ್ಲ ಎಂಬುವುದೇ ಅವರಿಗೆ ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ಮುಸ್ಲಿಮರಲ್ಲಿ ವರದಕ್ಷಿಣೆಗಿಂತ ವಧುದಕ್ಷಿಣೆಗೆ ಹೆಚ್ಚು ಮಹತ್ವವಿದೆ. ಮದುವೆಯಾಗುವ ಹುಡುಗ ತನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿದ ಹಣವನ್ನೋ ಅಥವಾ ಬಂಗಾರವನ್ನೋ ಇಟ್ಟು ಅದರ ಬದಲಾಗಿ ಹೆಣ್ಣನ್ನು ವರಿಸುವುದು ಮುಸ್ಲಿಂ ವಿವಾಹ ಪದ್ಧತಿ. ಅಲ್ಲಿ ಹೆಣ್ಣು ಗಂಡಿನ ನಡುವೆ ಶಾಸ್ತ್ರ ಏರ್ಪಡುವುದಲ್ಲ ಬದಲಿಗೆ ಹೆಣ್ಣಿನ ತಂದೆ ಹಾಗೂ ಗಂಡಿನ ನಡುವೆ ಶಾಸ್ತ್ರ(ಒಪ್ಪಂದ) ಏರ್ಪಡುತ್ತದೆ.
ಇಸುಬಾಕನನ್ನು ಬೀಳ್ಕೊಟ್ಟ ಇಬ್ರಾಯಾಕ ಒಳಮನೆಗೆ ಬಂದಾಗ ಎಲ್ಲರ ಕಣ್ಣುಗಳೂ ಪ್ರಶ್ನಾರ್ಥಕವಾಗಿ ನೋಡುತ್ತಿತ್ತು. 'ಅಙ ಪೋಯರ್' ಎಂದಾಗ ನೆಲೆಸಿದ್ದ ಮೌನ ಮಾಯವಾಗಿ ಮಾತುಗಳು ಮೂಡಿದ್ದವು. 'ಚೆರ್ಕ ಚಂದ ಉಲ್ಲ ಅಲೆ. ನಿಙ ಎಂದ್ರೆ ಚೆನ್ನಾರ್? ಎಪ್ಪ ಮಂಙಿಲ ಬೆಕ್ರೆವುಲ?' ಸಾಲು ಸಾಲು ಪ್ರಶ್ನೆಗಳು ಇಬ್ರಾಯಾಕನಿಗೆ ಕಿರಿಕಿರಿಯುಂಟು ಮಾಡುತ್ತಿದ್ದರೂ ತೋರ್ಪಡಿಸಲಾಗದೆ 'ಚೆಲ್ಡೆ ಎಲ್ಲಮ್.. ನಕ್ ತೆಲ್ ಕನ್ನ ತಾ..' ಪತ್ನಿ ಅಮೀನಾ ತಂದ ಕನ್ನಾದ ಒಂದು ಗುಟುಕು ಕುಡಿದ ಇಬ್ರಾಯಾಕ ವಿಷಯವನ್ನು ಪ್ರಸ್ತುತ ಪಡಿಸಲು ಅಣಿಯಾದರು.
'ಚೆರ್ಕ ಚಂದ ಉಲ್ಲ.. ಅಙಲೆ ಕಾಸಿಗ್ ಎಂದುಮ್ ಡಿಮ್ಯಾಂಡ್ ಇಲ್ಲೆ.. ಆಯೆಂಗ್..'
'ಎಂದ್ರೆ, ಆಯೆಂಗ್?..' ಕುತೂಹಲ ತಡೆಯಲಾಗದೆ ನಸೀಮಾ ಪ್ರಶ್ನೆ ಕೇಳಿದ್ದಳು.'
ನಿಕ್ ನಙ ಇರುವತ್ತಂಜಿ ಪವನ್ ಬಂಗಾರ್ ಇಡೋನುಲ..' ಎಂದಾಗ ಎಲ್ಲರೂ ಮೌನವಾಗಿದ್ದರು. ಸಾಸಿವೆ ಬಿದ್ದರೂ ಕೇಳಿಸಬಹುದಾದಷ್ಟು ಮೌನ ಮನೆಮಾಡಿತ್ತು.
ಇಬ್ರಾಯಾಕನ ಮೂರು ಮಕ್ಕಳಲ್ಲಿ ಎರಡನೆಯವಳು ನಸೀಮಾ. ಮೊದಲನೆ ಮತ್ತು ಕೊನೆಯಲ್ಲಿ ಇಬ್ಬರು ಗಂಡು ಮಕ್ಕಳು. ಸಣ್ಣಮನೆ ಅನ್ಯೋನ್ಯ ಕುಟುಂಬ. ದೊಡ್ಡಮಗನಿಗೆ ಆಗತಾನೆ ಖಾಸಗಿ ಕಾಲೇಜೊಂದರಲ್ಲಿ ಕೆಲಸಸಿಕ್ಕಿತ್ತು. ಬಹಳ ಜಾಗ್ರತೆ ಮಾಡೋ ಮನುಷ್ಯ. ನಸೀಮಾ ಹುಟ್ಟಿದಾಗಲೇ ಯೋಜನೆ ಮಾಡಿಸಿದ್ದರು. ಅಲ್ಲದೇ ತಮ್ಮ ಐಸ್ ಕ್ಯಾಂಡಿ ವ್ಯಾಪಾರದಲ್ಲಿ ಉಳಿದ ಅಷ್ಟೋ ಇಷ್ಟೋ ಒಟ್ಟುಮಾಡಿ ಬ್ಯಾಂಕಿನಲ್ಲಿ FD ಮಾಡಿಸಿದ್ದರು. ಐಸ್ಕ್ಯಾಂಡಿ ಅಲ್ಲದೇ ತನ್ನ ಅಣ್ಣಂದಿರು ಮಾಡುತ್ತಿದ್ದ ಸಂತೆ ವ್ಯಾಪಾರದಲ್ಲಿ ತನ್ನನ್ನು ತೊಡಗಿಸಿಕೊಂಡು ಜಾತ್ರೆ ಊರೂಸಿನಲ್ಲಿ ಮಂಡಕ್ಕಿ, ಚುರುಮುರಿ, ಕಡ್ಲೆಯ ಅಂಗಡಿ ಹಾಕಿ ರಾತ್ರಿ ಹಗಲು ದುಡಿಯುತ್ತಿದ್ದರು. ನಸೀಮಾಳನ್ನು PUC ವರೆಗೆ ಓದಿಸಿದ್ದ ಇಬ್ರಾಯಾಕ ನಂತರ ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿಗೆ ಕಳಿಸಿದ್ದರು. ಆ ಸಮಯದಲ್ಲಿ ಪರಿಚಯವಾದವನು ಹುಸೇನ್. ಹುಸೇನ್ ತನ್ನನ್ನು ಹಿಂಬಾಲಿಸುವುದು ಖಚಿತವಾದಾಗ ನಸೀಮಾ ನೇರವಾಗಿ ನಿನಗೆ ನನ್ನ ಮೇಲೆ ಇಷ್ಟ ಇದ್ರೆ ನನ್ನಪ್ಪನಲ್ಲಿ ಮಾತಾಡು ಹಿಂದೆ ಬರ್ಬೇಡ ಎಂದು ಹೇಳಿ ವೇಣೂರಿನಿಂದ ಮನೆಗೆ ನಾಲ್ಕು ಮುಕ್ಕಾಲಿನ ಬಸ್ಸು ಹತ್ತಿದ್ದಳು. ನಸೀಮಾಳ ಮಾತು ವಾರ್ನಿಂಗ್ ಆಗಿರಲಿಲ್ಲ ಬದಲಿಗೆ ಸಮ್ಮತಿಯಾಗಿತ್ತು. ತಂದೆ ತಾಯಿಯ ನಂಬಿಕೆಗೆ ಮೋಸಮಾಡಲಿಚ್ಛಿಸದೇ, ಪ್ರೀತಿಯನ್ನು ಕಡೆಗಣಿಸಲೂ ಆಗದೆ ಆ ಮಾತನ್ನು ಹೇಳಿದ್ದಳು ನಸೀಮಾ. ಆ ಮಾತಿಗೂ ಮೊದಲೇ ಫೋನ್ ನಂಬರ್ ಗಳು ವಿನಿಮಯವಾಗಿತ್ತು.
'ಇಪ್ಪತ್ತೈದು ಪವನ್ ಹಾಕ್ಲಿಕ್ಕೆ ನಮ್ಮಿಂದ ಸಾಧ್ಯ ಇಲ್ಲ.. ಬೇರೆ ಸಂಬಂಧ ನೋಡ್ಲಿಕ್ಕೆ ರಹಿಮಾನಾಕನತ್ರ ಹೇಳ್ತೇನೆ' ಎಂದಾಗ 'ಇಲ್ಲೆ ಬಾಪ ನಕ್ ಅದೇ ಚೆರ್ಕ ಆವು.. ನಿಙ ಒನ್ನು ಮುಂಡಿ ನೋಕೋರು. ನಕ್ ಬೇರೆ ಚೆರ್ಕರೆ ನೋಕ್ರೆ ಬೇಂಡ" ಇಬ್ರಾಯಾಕನಿಗೂ ನಸೀಮಾಳ ಮಾತಿನಲ್ಲಿದ್ದ ನೋವು ಅರಿವಾಗಿತ್ತು. ನಸೀಮಾಳ ಪ್ರೀತಿಯ ಬಗೆಗೆ ಗೊತ್ತಿರದಿದ್ದರೂ ಈಗಿನ ಮಕ್ಕಳು ಸಂಬಂಧದ ಕುರಿತಾಗಿ ತಮ್ಮದೇ ಕನಸು ಕಟ್ಟಿಕೊಂಡಿರ್ತಾರೆ, ಕಲ್ಪನೆಗಳಿರುತ್ತವೆ. ಕ್ಷಣ ಕ್ಷಣ ಆ ಕಲ್ಪನೆಯ ವ್ಯಕ್ತಿ ಬದಲಾಗ್ತಾ ಇದ್ರೆ ಅಲ್ಲಿ ಪ್ರೀತಿ ಹೇಗೆ ಸಾಧ್ಯ ಎಂಬುವುದು ಅವರ ನಿಲುವಾಗಿತ್ತು. ಅಲ್ಲದೇ ನೋಡಲು ಬರುವ ಸಂಬಂಧ ಹೀಗೆ ಹಿಂದಿರುಗಿ ಹೋದರೆ ಹೆಣ್ಣಿನಲ್ಲಿ ಏನೋ ದೋಷವಿದೆಯೆಂದು ಸಮಾಜ ಆಡಿಕೊಳ್ಳುವುದಿಲ್ಲವೇ?..
ನಸೀಮಾಳಿಗೆ ಇಪ್ಪತ್ತೊಂದು ತುಂಬಲು ಇನ್ನೂ ಎರಡು ತಿಂಗಳಿತ್ತು. ಹದಿನೆಂಟು ಆಗುವಾಗಲೇ ಮದುವೆ ಮಾಡಿಸೋ ತರಾತುರಿಯಲ್ಲಿದ್ದ ಇಬ್ರಾಯಾಕನಿಗೆ ಇಪ್ಪತ್ತೊಂದು ಎಪ್ಪತ್ತೊಂದರಂತೆ ಭಾಸವಾಗುತ್ತಿತ್ತು. ಸಣ್ಣಮಗ ಸೆಕೆಂಡ್ ಇಯರ್ ಡಿಗ್ರಿಯ ರಜೆಯಲ್ಲಿ ಸಾಧ್ಯವಾದಷ್ಟು ಕೆಲಸಕ್ಕೆ ಹೋಗಿ ಐವತ್ತು ಸಾವಿರ ಒಟ್ಟು ಸೇರಿಸಿದ್ದ. ಆದರೂ ಅದು ಎಲ್ಲಿಗೂ ಸಾಲುತ್ತಿರಲಿಲ್ಲ. ಇಬ್ರಾಯಾಕ ಇಡೀ ಇಪ್ಪತ್ತು ವರ್ಷದಲ್ಲಿ ಸುಮಾರು ಎಂಟು ಲಕ್ಷದವರೆಗೆ ಉಳಿತಾಯ ಮಾಡಿಟ್ಟಿದ್ದರು. ಅದು ಹದಿನೈದು ಪವನ್ ಗೆ ಸಾಲುತ್ತಿತ್ತು. ಇನ್ನೂ ಹೆಚ್ಚೆಂದರೆ ಎರಡು ಮೂರು ಲಕ್ಷ ಪರಿಚಯದವರ ಬಳಿ ಕೈಸಾಲ ಮಾಡಿದರೂ ಅದು ಸಾಲುತ್ತಿರಲಿಲ್ಲ. ಮನೆಯನ್ನು ಅಡವಿಟ್ಟು ಸಾಲ ಪಡೆಯೋಣವೆಂದರೆ ಇರುವ ಒಂದು ಮನೆಯೂ ಇಬ್ರಾಯಾಕನ ತಾಯಿಯ ಹೆಸರಿನಲ್ಲಿತ್ತು. ಅದಾಗ್ಯೂ ಪ್ರಯತ್ನವೆಂಬಂತೆ ನಾಲ್ಕಾರು ಜನರಲ್ಲಿ ಮಾತನಾಡಿ ಅವರು ಹಣದ ವಿಶ್ವಾಸ ಕೊಟ್ಟಾಗ ಇಬ್ರಾಯಾಕ ಇಸುಬಾಕನಿಗೆ ಕರೆಮಾಡಿ ಒಪ್ಪಿಗೆ ತಿಳಿಸಿ ನಿಶ್ಚಿತಾರ್ಥಕ್ಕೆ ದಿನ ನಿಗದಿಪಡಿಸಿದ್ದರು. ನಸೀಮಾಳ ಮುಖದಲ್ಲಿ ಪ್ರಸನ್ನತೆಯೊಂದು ಸುಳಿದಿತ್ತು.
ನಿಶ್ಚಿತಾರ್ಥದ ದಿನ ಗಂಡಿನ ಕಡೆಯವರು ಕುರಾನ್, ನಮಾಜ್ ಮ್ಯಾಟ್, ಒಂದು ಪವನಿನ ಸರ, ಚಾಕಲೇಟ್ ಬೊಕ್ಕೆ, ಹೆಣ್ಣಿಗೆ ಲೆಹೆಂಗಾವನ್ನೆಲ್ಲ ತಂದಿದ್ದರು. ನಸೀಮಾ ಮತ್ತು ಮನೆಯವರು ಖುಷಿಯಲ್ಲಿದ್ದರೆ ಇಬ್ರಾಯಾಕನಿಗೆ ಅವೆಲ್ಲವೂ ತನ್ನನ್ನು ಅಣಕಿಸಿದಂತೆ ತೋರುತ್ತಿತ್ತು. ಆಗಸ್ಟ್ ಹದಿನೇಳು ಭಾನುವಾರಕ್ಕೆ ಮದುವೆ ನಿಶ್ಚಯವಾಗಿತ್ತು.
ಇಬ್ರಯಾಕನ ದುರಾದೃಷ್ಟವೋ ಏನೋ ಆ ವರ್ಷ ಮೇ ತಿಂಗಳಿನಲ್ಲೇ ಮಳೆ ಶುರುವಾಗಿತ್ತು. ಸಂತೆ ವ್ಯಾಪಾರ ಐಸ್ ಕ್ಯಾಂಡಿ ವ್ಯಾಪಾರ ವಾಡಿಕೆ ಗಿಂತ ಒಂದು ತಿಂಗಳು ಮೊದಲೇ ಮಳೆಯಿಂದ ಸ್ಥಗಿತಗೊಂಡಿತ್ತು. ಮಳೆಗಾಲದಲ್ಲಿ ಭಟ್ರ ಮನೆಗೆ ತೋಟದ ಕೆಲಸಕ್ಕೆ ಹೋಗುತ್ತಿದ್ದ ಇಬ್ರಾಯಾಕನಿಗೆ ಹಿಂದಿ ಕಾರ್ಮಿಕರಿಂದಾಗಿ ಕೆಲಸ ತಪ್ಪಿತ್ತು. ದಿನದ ಖರ್ಚಿಗೆ ಪರದಾಡುವ ಪರಿಸ್ಥಿತಿಯಿದ್ದರೂ ಅನಾವಶ್ಯಕವಾಗಿ ಸಾಲ ಪಡೆಯದ ಸ್ವಾಭಿಮಾನಿಯಾಗಿದ್ದರು ಇಬ್ರಾಯಾಕ.
ಆಗಸ್ಟ್ ತಿಂಗಳಿನಲ್ಲಿ ನಡೆಯಬೇಕಿದ್ದ ಮದುವೆಗೆ ಜೂನ್ ನಲ್ಲೇ ಹಣ ಒಟ್ಟುಗೂಡಿಸಲು ತಾವು ಈ ಹಿಂದೆ ಮಾತನಾಡಿದ್ದ ತಮ್ಮ ಪರಿಚಯಸ್ಥರಿಗೆ ಕರೆಮಾಡಿದಾಗ, ಮಳೆ ಆರಂಭವಾದ ಕಾರಣದಿಂದ ನಮ್ಮಲ್ಲಿ ಹೆಚ್ಚಿನ ಹಣ ಇಲ್ಲವೆಂದೂ ವಾಸ್ತವವನ್ನು ತಿಳಿಸಿದ್ದರು. ನಿಜ.. ಮೇ ತಿಂಗಳಿನಲ್ಲಿ ನಡೆಯುತ್ತಿದ್ದ ಎರಡು ದೊಡ್ಡ ಜಾತ್ರೆಗಳು ಹಾಗೂ ಒಂದು ಊರೂಸ್ ಗೆ ಮಳೆಕಾರಣದಿಂದ ಸಂತೆ ಹಾಕಲು ಹೆಚ್ಚಿನವರಿಗೆ ಸಾಧ್ಯವಾಗಲಿಲ್ಲ. ಸಂತೆ ಹಾಕಿದ ಕೆಲವರು ಜಾಗದ ಹಣ ನೀಡುವಷ್ಟೂ ವ್ಯಾಪಾರವಾಗದೆ ನಷ್ಟ ಅನುಭವಿಸಿದ್ದರು. ತಂದ ಸರಕುಗಳು ಹಾಳಾಗಿದ್ದವು. ಅಲ್ಲದೇ ಅಕ್ಟೋಬರ್ ವರೆಗೆ ಆದಾಯವಿಲ್ಲದೇ ದಿನದೂಡಬೇಕಾದ ಅನಿವಾರ್ಯತೆ ಅವರಿಗಿತ್ತು. ತಾನು ದಿನಸಿ ತರುತ್ತಿದ್ದ ಊರಿನ ಲಿಗೋರಿ ಪೊರ್ಬುಲ ಬಳಿ ಮಾತ್ರ ಎರಡು ಲಕ್ಷದ ವ್ಯವಸ್ಥೆಯಾಗಿತ್ತು. ದೊಡ್ಡಮಗ ಕೆಲಸಕ್ಕೆ ಸೇರಿ ಎರಡು ತಿಂಗಳಾಗಿದ್ದರಿಂದ ಲೋನ್ ಅಸಾಧ್ಯವೆಂದರಿವಾಗಿತ್ತು. ಇನ್ನು ಕುಟುಂಬದಲ್ಲಿ ಸ್ಥಿತಿವಂತರು ಯಾರೂ ಇರದಿದ್ದುದರಿಂದ ಕೇಳಲು ಸಂಕೋಚವಾಗಿತ್ತು ಇಬ್ರಾಯಾಕನಿಗೆ.
ಮಗಳ ಮಾತಿಗೆ ಒಪ್ಪಿಗೆಕೊಟ್ಟು ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ನಸೀಮಾ ಹುಸೇನ್ ನನ್ನು ಗಾಢವಾಗಿ ಹಚ್ಚಿಕೊಂಡಿದ್ದಳು. ಇಬ್ರಾಯಾಕನ ತಳಮಳ ಅವರಿಗಷ್ಟೇ ತಿಳಿದಿತ್ತು. ದಿನಗಳುರುತ್ತಿತ್ತು. ಬಂಗಾರದ ಬೆಲೆ ಮುಗಿಲು ಮುಟ್ಟಿತ್ತು. ಬಂಗಾರದ ವಿಷಯವಾಗಿ ಇಸುಬಾಕನಿಗೆ ಕರೆಮಾಡಿದ ಇಬ್ರಾಯಾಕನಿಗೆ 'ನೀವು ಇಪ್ಪತ್ತೈದು ಪವನ್ ಹಾಕೋದಾಗಿ ಮಾತು ಕೊಟ್ಟಿದ್ದೀರಾ. ಈಗ ಕಮ್ಮಿ ಹಾಕ್ತೇವೆ ಅಂದ್ರೆ ಹೇಗೆ? ಮನೆ ಸೊಸೆಯಾಗಿ ಬರವವಳು ಮೈ ತುಂಬಾ ಬಂಗಾರ ಹಾಕ್ಕೊಂಡು ಬಂದ್ರೆ ನಮ್ಮ ಸ್ಟೇಟಸ್ ತೋರಿಸ್ಕೊಬಹುದು ನಾವು' ಎಂದು ಸ್ಪಷ್ಟವಾಗಿ ಹೇಳಿ ಮಾತು ಮುಗಿಸಿದ್ದರು.
ಮದುವೆಗೆ ಹತ್ತು ದಿನವಿತ್ತು. ಇನ್ನೂ ಯಾರನ್ನೂ ಕರೆದಿರಲಿಲ್ಲ. ನಾಳೆ ಶುಕ್ರವಾರ ಮಸೀದಿಯಲ್ಲಿ 'ಕೇಳಿ' ಕೇಳಬೇಕು. ಮಸೀದಿ ವಂತಿಗೆಕಟ್ಟಿ ರಸೀದಿ ಪಡೀಬೇಕು. ಮಗಳ ಮೊಯಿಲಾಂಜಿ (ಮದರಂಗಿ) ಶನಿವಾರ ಮಾಡಬೇಕು. ಡ್ರೆಸ್ ತರ್ಲಿಕ್ಕೆ ಸಾಗರ್ ಗೆ ಹೋಗುವ ಅಲ್ಲಿ ಕಡಿಮೆಗೆ ಸಿಗ್ತದೆ ಅಂತ ನಸೀಮಾ ಮೆಲ್ಲನೆ ಹೇಳಿದ್ದಳು. ಇಬ್ರಾಯಾಕನಿಗೆ ತಾನೊಂದು ಗೊಂಬೆ ಆದರೆ ಯಾರ್ಯಾರೋ ನನ್ನನ್ನು ಆಡಿಸುತ್ತಿದ್ದಾರೆ ಎಂದನ್ನಿಸುತ್ತಿತ್ತು. ಬೆಳ್ತಂಗಡಿಯ ಪ್ರಿಂಟರ್ಸ್ ನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಲು ಕೊಟ್ಟು ಬಂದ ಇಬ್ರಾಯಾಕ ಎರಡು ದಿನದಲ್ಲಿ ಸಿಗ್ಬೇಕು ಅಂತ ಒಂದು ಸಾವಿರ ಅಡ್ವಾನ್ಸ್ ಕೊಟ್ಟಿದ್ದರು. ಹಾಗೇ ಬರುವಾಗ ಪೇಟೆಯಿಂದ ಒಂದು ಬಿಳಿ ಅಂಗಿ ಬಿಳಿಪಂಚೆ ಮದುವೆಗಾಗಿ ತಂದಿದ್ದರು. ಅಂದು ರಾತ್ರಿ ನಸೀಮಾಳಲ್ಲಿ ಬಿರಿಯಾನಿ ಮಾಡಲು ಹೇಳಿದ ಇಬ್ರಾಯಾಕ ನೆಮ್ಮದಿಯಾಗಿ ಊಟಮಾಡಿ ಮಲಗಿದ್ದರು. ಮದುವೆಗೆ ಹತ್ತು ದಿನವಿತ್ತು. ಶುಕ್ರವಾರ ಬೆಳಗೆದ್ದು ತಹಜ್ಜುದ್ ನಮಾಜ್ ಮಾಡಿದ ಆಮೀನಾದ ಸುಬುಹಿ ನಮಾಜ್ ಗೆ ಇಬ್ರಾಯಾಕನನ್ನು ಎಬ್ಬಿಸಲು ಹೋದಾಗ ಅಘಾತಕಾದಿತ್ತು. ಆ ರಾತ್ರಿ ಇಬ್ರಾಯಾಕನಿಗೆ ಹೃದಯಾಘಾತವಾಗಿತ್ತು.
ಸುಬುಹಿ ನಮಾಜಿನ ಹೊತ್ತಿಗೆ ವಿಷಯ ಮಸೀದಿ ಅಂಗಳ ತಲುಪಿತ್ತು ಖಬರ್ ಸ್ಥಾನದಲ್ಲಿ ಗುಂಡಿ ಅಗೆಯುವ ಕೆಲಸ ಆರಂಭವಾಗಿತ್ತು. ಶುಕ್ರವಾರದ ನಮಾಜಿನ ಮೊದಲು ಎಲ್ಲಾ ಕಾರ್ಯಗಳು ಮುಗಿಯಬೇಕಿತ್ತು. ಇಬ್ರಾಯಾಕನ ದೊಡ್ಡಮಗ ಬಾಕಿ ವಂತಿಗೆಯನ್ನು ಕಟ್ಟಿದ ಮೇಲೆಯೇ ಉಸ್ತಾದರುಗಳನ್ನು ಕಮಿಟಿಯವರು ಇಬ್ರಾಯಾಕನ ಮನೆಗೆ ಕಳಿಸಿದ್ದು. ಮೊದಲೇ ಲೋ ಬಿಪಿ ಇದ್ದರೂ ಕಡೆಗಣಿಸುತ್ತಿದ್ದ ಇಬ್ರಾಯಾಕನಿಗೆ ಹೃದಯಾಘಾತ ಅನಿರೀಕ್ಷಿತವಾಗಿ ಎದುರಾಗಿತ್ತು ಮದುವೆಯ ಸಂಭ್ರಮ ಮೂಡಬೇಕಾಗಿದ್ದ ಮನೆಯಲ್ಲಿ ಮರಣ ಮೃದಂಗ ಕೇಳಿಸುತ್ತಿತ್ತು. ಮಗಳ ದಾಂಪತ್ಯಕ್ಕೆ ದುಆ ಮಾಡಬೇಕಾಗಿದ್ದ ಉಸ್ತಾದರುಗಳು ಇಬ್ರಾಯಾಕನ ಮಗ್ಫಿರತ್ ಗಾಗಿ ಪ್ರಾರ್ಥಿಸುತ್ತಿದ್ದರು. ಆಮಿನಾದ ಕುಸಿದಿದ್ದರು. ಮೂರು ಮಕ್ಕಳಿಗೂ ಭವಿಷ್ಯವೆನ್ನುವುದು ಶೂನ್ಯವೆಂಬಂತೆ ಅನ್ನಿಸತೊಡಗಿತ್ತು. ಇಸುಬಾಕ ಬಂದವರು ದೂರದಲ್ಲೇ ನಿಂತು ಮಯ್ಯಿತ್ ನೋಡಿ ಒಂದು ಬಾರಿ ಯಾಸಿನ್ ಸೂರತ್ ಪಠಿಸಿ ತೆರಳಿದ್ದರು. ನಸೀಮಾಳ ಮುಖ ಮುದುಡಿಹೋಗಿತ್ತು. ಅವಳ ಒತ್ತಾಯವೇ ಅಪ್ಪನ ಸಾವಿಗೆ ಕಾರಣ ಎನ್ನುವುದು ಅವಳಿಗೂ ಅನ್ನಿಸಿತ್ತೋ ಏನೋ.. ಅಳು ನಿಲ್ಲಲೇ ಇಲ್ಲ. ತಡೆಯುವ ಪ್ರಯತ್ನ ಯಾರೂ ಮಾಡಲಿಲ್ಲ. ಮದುವೆಯ ದಿನ ವರನ ಕೈಹಿಡಿದು ಉಸ್ತಾದರು ಹೇಳಿಕೊಡುವ ಶಾಸ್ತ್ರವನ್ನು ಹೇಳಬೇಕಾಗಿದ್ದ ದೇಹವನ್ನು ಮನೆಯ ಚಾವಡಿಯಲ್ಲಿ ಮಲಗಿಸಲಾಗಿತ್ತು. ಎಲ್ಲರೂ ಬಂದ ನಂತರ, ಮಯ್ಯಿತ್ ನ ಸ್ನಾನ ಮಾಡಿಸಿ ಮೂರು ಕಫನ್ ಬಟ್ಟೆಯಲ್ಲಿ ಸುತ್ತಿದ ಇಬ್ರಾಯಾಕನ ಪಾರ್ಥಿವ ಶರೀರವನ್ನು ಹನ್ನೆರಡುವರೆಯ ಹೊತ್ತಿಗೆ ಮಣ್ಣುಮಾಡುವಾಗ ದೊಡ್ಡ ಮಗನಿಗೆ ಕರೆಯೊಂದು ಬಂದಿತ್ತು. "ನಿಮ್ಮ ಇನ್ವಿಟೇಶನ್ ಕಾರ್ಡ್ ಪ್ರಿಂಟ್ ಆಗಿದೆ. ಯಾವಾಗ ಬರ್ತೀರಿ?.."
‘ಮೌನರಾಗ’ ಶಮೀರ್ ನಂದಿಬೆಟ್ಟ..
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!