ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಒಂದೊಂದೇ ಸಿಪ್ಪೆಗಳು ಸುಲಿದುಕೊಳ್ಳುತ್ತಿವೆ. ಈ ಪ್ರಕರಣದ ಶಂಕಿತ ಉಗ್ರರು ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಾಲಯವನ್ನು ಬಾಂಬ್ ಇರಿಸಿ ಸ್ಫೋಟಿಸಲು ಸಂಚು ಹೂಡಿದ್ದರು. ಆದರೆ ಬಾಂಬ್ ನ ಟೈಮರ್ ಅನ್ನು ನಿಗದಿತ ಗಳಿಗೆಗೆ ಸಜ್ಜುಗೊಳಿಸುವಲ್ಲಿ ಆದ ಎಡವಟ್ಟಿನಿಂದಾಗಿ ಅದು ಮಾರ್ಗ ಮಧ್ಯವೇ ಆಟೋರಿಕ್ಷಾದಲ್ಲಿ ಸ್ಫೋಟಗೊಂಡಿತು ಎಂಬ ಸ್ಫೋಟಕ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇ. ಡಿ.) ಬಯಲು ಮಾಡಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿಯೇ. ಉಗ್ರರು ಮತ್ತು ಕಿಡಿಗೇಡಿಗಳು ತಮ್ಮ ಗುಪ್ತ ಹಿತಾಸಕ್ತಿಯ ನೆರವೇರಿಕೆಗೆ ದೇಗುಲದಂತಹ ಶ್ರದ್ಧಾ ಭಕ್ತಿ ಕೇಂದ್ರಗಳನ್ನು ಬಳಸಿಕೊಳ್ಳುವುದಕ್ಕೂ ಹಿಂದು ಮುಂದು ನೋಡುವುದಿಲ್ಲ ಎಂಬುದು ಈ ಮಾಹಿತಿಯಿಂದ ಸಾಬೀತಾಗಿದೆ. ನಮ್ಮದೇ ನೆಲದಲ್ಲಿ ಬೀಡುಬಿಟ್ಟು, ಇಲ್ಲಿ ಗಾಳಿ, ನೀರು, ಆಹಾರವನ್ನೇ ಸೇವಿಸಿ, ನಮ್ಮ ಧಾರ್ಮಿಕ ಶ್ರದ್ಧೆ-ನಂಬಿಕೆಗಳಿಗೆ ಕೋಮು ಸೌಹಾರ್ದಕ್ಕೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಕೊಳ್ಳಿಯಿಡಲು ಮುಂದಾಗುವ ಇಂಥ ಕಿಡಿಗೇಡಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯನ್ನೇ ನೀಡಬೇಕು. ಇಂಥವರ ನಾಯಕತ್ವ ವಹಿಸಿದವರ ಹೆಡೆಮುರಿ ಕಟ್ಟಿ ಬಲಿಹಾಕಬೇಕು. ‘ತಲೆ’ಗಳಿಗೆ ಹೀಗೆ ಇಕ್ಕಳ ಹಾಕಿದರೆ, ಆಗ ‘ಬಾಲಂಗೋಚಿ’ಗಳು ತಾವಾಗೇ ದಾರಿಗೆ ಬರುತ್ತವೆ. ಇಲ್ಲವಾದಲ್ಲಿ ದುರುಳರಿಗೆ, ದುರಾತ್ಮರಿಗೆ ಕಾನೂನಿನ ಭಯವೇ ಇಲ್ಲದಂತಾಗುತ್ತದೆ. ಉಗ್ರವಾದಕ್ಕೆ ಇಂಬುಕೊಡುವವರನ್ನು ಮೊಳಕೆಯಲ್ಲೇ ಚಿವುಟಿ ಹಾಕದಿದ್ದರೆ, ಅವರು ಮುಂದೆ ಬೆಳೆದು ಹೆಮ್ಮರವಾದಾಗ ಮತ್ತು ಎಲ್ಲೆಡೆ ಹಬ್ಬಿಕೊಂಡಾಗ ಲಗಾಮು ಹಾಕುವುದು ಕಷ್ಟವಾಗಬಹುದು. ಮಾತ್ರವಲ್ಲದೆ, ಇಂಥವರಿಗೆ ನೆರೆಯ ಶತ್ರು ರಾಷ್ಟ್ರಗಳಿಂದ ಚಿತಾವಣೆ ಸಿಗುತ್ತಿದೆಯೇ ಮತ್ತು ಸಂಪನ್ಮೂಲ ಪೂರೈಕೆ ಆಗುತ್ತಿದೆಯೇ ಎಂಬುದರ ಕುರಿತೂ ಮಾಹಿತಿಗಳನ್ನು ಕಲೆ ಹಾಕಿ ಜಾಗತಿಕ ಸಮುದಾಯದ ಸಮ್ಮುಖದಲ್ಲಿ ಅವನ್ನು ಹರಡಬೇಕು. ತನ್ಮೂಲಕ, ಉಗ್ರವಾದವನ್ನು ಬೆಂಬಲಿಸುವವರಿಗೆ ಛೀಮಾರಿ ಹಾಕುವಂತಾಗಬೇಕು. ಅದು ಈ ಕ್ಷಣದ ಅನಿವಾರ್ಯತೆಯೂ ಹೌದು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೯-೦೮-೨೦೨೫
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!