ಪ್ರಬಂಧ ನಿಮ್ಮದೇ

ಎಲ್ಲೆ ಮೇಲಿನ ಪ್ರಬಂಧಕ್ಕೆ ಪಕ್ಕದ ಮನೆ ಹುಡುಗನಿಗೆ ಬಹುಮಾನ ದೊರೆಯಿತು. ಸೂರಿಯ ಮಗನಿಗೆ ಏನೂ ಸಿಗಲಿಲ್ಲ. ಸೂರಿ ಮಗನನ್ನು ತರಾಟೆಗೆ ತೆಗೆದುಕೊಂಡು, ‘ಈಗಲಾದರೂ ಅರ್ಥವಾಯಿತಾ?’ ಹಿರಿಯರ ಮಾರ್ಗದರ್ಶನ ಬೇಕು ಅನ್ನುವುದು ಇದಕ್ಕೆ. ನನ್ನ ಬಳಿ ಕೇಳಿಕೊಂಡು ಪ್ರಬಂಧ ಬರೆದಿದ್ದರೆ ನಿನಗೇ ಮೊದಲ ಬಹುಮಾನ ಬರುತ್ತಿತ್ತು’ ಎಂದು ಕಿವಿ ಹಿಂಡಿದ. ಆಗ ಮಗ ‘ಇಲ್ಲಪ್ಪ… ನಾನು ನಿಮ್ಮ ಹಳೆಯ ಪ್ರಬಂಧ ಪುಸ್ತಕವನ್ನು ನೋಡಿಯೇ ಬರೆದದ್ದು. ನಾನು ಸ್ವಂತ ಬರೆದ ಪ್ರಬಂಧವನ್ನು ಪಕ್ಕದ ಮನೆ ಹುಡುಗನಿಗೆ ಕೊಟ್ಟಿದ್ದೆ’ ಎಂದಾಗ ಸೂರಿಗೆ ಏನು ಹೇಳಬೇಕೋ ತಿಳಿಯದಾಯಿತು.

***

ಲಾಂಗ್ ಸ್ಟಾಪ್ ಗಾಡಿ !

ಹೀಗೆ ಮೊನ್ನೆ ನಮ್ಮ ಗ್ರಾಮದಲ್ಲೊಂದು ಸಮಾರಂಭಕ್ಕೆ ಹೋಗಿದ್ದಾಗ ನೆಂಟರಿಷ್ಟರೆಲ್ಲಾ ಒಬ್ಬೊಬ್ಬರಾಗಿ ಬರುತ್ತಿದ್ದರು. ಮೊದಲು ಬಂದವರು ಆಗಾಗ ಬರುತ್ತಿದ್ದವರನ್ನು ‘ಈಗ ಬಂದಿರಾ? ಹೇಗೆ ಬಂದಿರಿ? ತಿಂಡಿ ತಿನ್ನಿ’ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಹೀಗಿರುವಾಗ ಬೆಂಗಳೂರಿನಿಂದ ಬಂದವರೊಬ್ಬರನ್ನು ‘ಈಗ ಬಂದಿರಾ, ಮಗಳು ಬರಲಿಲ್ಲವಾ?’ ಎಂದು ಕೇಳಿದರು.

ಆಗ ಅವರು ‘ಅಯ್ಯೋ ನಾನು ಚನ್ನರಾಯಪಟ್ಟಣದಲ್ಲಿ ಇಳಿದು ಮಗಳನ್ನ ಕರೆದುಕೊಂಡು ಬರೋಣ ಅಂತಿದ್ದೆ. ನೋಡಿದ್ರೆ ನಾನು ಹತ್ತಿದ್ದು ‘ಲಾಂಗ್ ಸ್ಟಾಪ್’ ಗಾಡಿ. ಚನ್ನರಾಯಪಟ್ಟಣದಲ್ಲಿ ನಿಲ್ಲಿಸಲಿಲ್ಲ. ಲಾಂಗ್ ಸ್ಟಾಪ್ ಗಾಡಿ ತಿಂಡಿಗೆ ಯಾವುದೋ ಹೋಟೆಲ್ ಮುಂದೆ ನಿಲ್ಲಿಸಿದ್ದು ಬಿಟ್ಟರೆ ಎಲ್ಲೂ ನಿಲ್ಲಿಸಲಿಲ್ಲ. ಯಾಕೆಂದರೆ ಅದು ಲಾಂಗ್ ಸ್ಟಾಪ್ ಗಾಡಿ ಅಂತಲ್ಲ’ ಎಂದು ಅವರು ಮತ್ತೆ ಮತ್ತೆ ಹೇಳುವಾಗ ನಾವೂ ಕೂಡ ದನಿಗೂಡಿಸಿ, ‘ಹುಂ ಆಂಟಿ ಲಾಂಗ್ ಸ್ಟಾಪ್ ಗಾಡಿನ ಎಲ್ಲೂ ನಿಲ್ಸಲ್ಲಾ ಬಿಡಿ! ಎಂದೆವು. ಬಂದ ನಗುವನ್ನು ತಡೆಯುತ್ತಾ. ‘ನಾನ್ ಸ್ಟಾಪ್’ ಗಾಡಿ ಅವರ ಬಾಯಲ್ಲಿ ‘ಲಾಂಗ್ ಸ್ಟಾಪ್’ ಆಗಿತ್ತು.

***

ಪ್ರಯಾಣ

ಸೂರಿ: ನನ್ನ ಅಕ್ಕ ತಂಗೀರು ಎಷ್ಟು ದೂರದ ಊರಿನಿಂದ ನನ್ನನ್ನು ನೋಡಲು ಬರ್ತಿದ್ದಾರಂತೆ. ನೋಡೆ ಅವ್ರಿಗೆಲ್ಲಾ ನನ್ನ ಕಂಡ್ರೆ ಎಷ್ಟೊಂದು ಪ್ರೀತಿ, ಏನಾದ್ರೂ ಸಿಹಿ ಮಾಡೆ.

ಶ್ರೀಮತಿ: ಕಂಡಿದ್ದೀನಿ ಸುಮ್ಮನಿರಿ. ಇಷ್ಟು ವರ್ಷ ಇಲ್ದಿರೋ ಪ್ರೀತಿ ಈಗ ಹೇಗ್ ಬರುತ್ತೆ? ಬಸ್ ಟಿಕೆಟ್ ಫ್ರೀ ಅಂತ ಬರ್ತಿದ್ದಾರಷ್ಟೆ.

ಸೂರಿ: ಮೊನ್ನೆ, ಹತ್ತಾರು ವರ್ಷಗಳ ಬಳಿಕ ನೀನೂ ನಿನ್ನ ಅಣ್ಣ-ತಮ್ಮನ ಮನೆಗೆ ಹೋಗಿದ್ದೂ ಅದ್ಕೆನಾ?

ಶ್ರೀಮತಿ: ಹಾಗೆ ಅಂದುಕೊಳ್ಳಿ.

ಸೂರಿ: ಹೋಗ್ಲಿ ಬಿಡು. ಅವ್ರು ಭಾನುವಾರ ಬರ್ತಾರೆ ಏನಾದ್ರೂ ಹಬ್ಬದೂಟ ಮಾಡಿ ಬಡ್ಸೆ.

ಶ್ರೀಮತಿ: ನಂಗು ಬಸ್ ಟಿಕೆಟ್ ಫ್ರೀ. ನಾನು ಹಬ್ಬದೂಟಕ್ಕಂತ ಭಾನುವಾರನೇ ನಮ್ಮಣ್ಣನ ಮನೆಗೆ ಹೋಗ್ತಿದ್ದೀನ್ರಿ, ನೀವೇ ಮಾಡಿ.

***

ರೊಟ್ಟಿ

ಸೂರಿ: ನಿನ್ನ ಹೆಂಡ್ತಿ ಯೂಟ್ಯೂಬ್ ನಲ್ಲಿ ಎಷ್ಟು ಚೆನ್ನಾಗಿ ರೊಟ್ಟಿ ಮಾಡ್ತಾರೆ. ಆ ವಿಡಿಯೋವನ್ನು ನಾನೂ ನೋಡಿದ್ದೀನಿ. ನಂಗೂ ಒಂದಿನ ರೊಟ್ಟಿ ಮಾಡಿಸಿಕೊಡೊ, ತಿನ್ಬೇಕು ಅನಿಸ್ತಿದೆ.

ಗಾಂಪ: ಅದು ನೋಡೋಕೆ ಮಾತ್ರ ಚೆನ್ನಾಗಿರುತ್ತೆ. ತಿನ್ನಕ್ಕಲ್ಲ. ಬೇಕು ಅಂದ್ರೆ ಹೇಳು ತಂದ್ ಕೊಡ್ತೀನಿ!

***

ಚಪಾತಿ

ಸೂರಿ: ಚಪಾತಿನಾ ಯಾಕಿಷ್ಟು ಕೆಟ್ಟದಾಗಿ ಮಾಡ್ತೀಯಾ?

ಶ್ರೀಮತಿ: ಇಷ್ಟು ಕೆಟ್ಟದಾಗಿ ಮಾಡಿದ್ರೂ ಹತ್ತು ಚಪಾತಿ ತಿನ್ತೀರಾ, ಇನ್ನು ಚೆನ್ನಾಗಿ ಮಾಡಿದ್ರೆ ಎಷ್ಟು ತಿನ್ತೀರೋ. ಅದ್ಕೆ ಕಣ್ರೀ!

***

ಪ್ರೀತಿ

ಶ್ರೀಮತಿ: ‘ನಂಗೆ ತಂಗಿ ಅಂದ್ರೆ ತುಂಬಾ ಇಷ್ಟ. ಅವಳಿಗೋಸ್ಕರ ಪ್ರಾಣ ಕೊಡ್ತೀನಿ. ಸರ್ವಸ್ವವನ್ನೂ ಕೊಡ್ತೀನಿ’ ಅಂತೀರ. ನಿಮ್ಗೆ ತಂಗಿನೇ ಇಲ್ವಲ್ರೀ?

ಸೂರಿ: ನಿನ್ನ ತಂಗಿಗೇ ಕಣೆ ನಾನು ಹೇಳಿದ್ದು !

(ಸಂಗ್ರಹ )

ಚಿತ್ರ ಕೃಪೆ: ಅಂತರ್ಜಾಲ ತಾಣ