ಹಾಗೆ ಬಸ್ಸಿಗೆ ಕಾಯುತ್ತಿದ್ದವನಿಗೆ ಎರಡು ಜನ ಅಣ್ಣತಮ್ಮಂದಿರ ವಾದ ಕಿವಿಗೆ ಬಿತ್ತು. ಅಣ್ಣ ಈ ಸಮಾಜದಲ್ಲಿ ನಾವು ಒಂದು ದಿನ ಮಿನುಗುವುದು ಯಾವಾಗ ? ನಾವು ಇದ್ದೇವೆ ನಾವೇನು ಸಾಧಿಸುತ್ತಿದ್ದೇವೆ, ನಮ್ಮ ಕುಟುಂಬ ಇದು ಅನ್ನೋದನ್ನ ಜಗತ್ತಿಗೆ ಪರಿಚಯಿಸುವುದು ಯಾವಾಗ?

"ನಾವು ಯಾಕೆ ಸಮಾಜಕ್ಕೆ ಪರಿಚಯವಾಗಬೇಕು? ನಮಗೊಂದು ಪುಟ್ಟ ಬದುಕಿದೆ ಆ ಬದುಕನ್ನು ಚೆನ್ನಾಗಿ ಬದುಕಿದ್ರೆ ಸಾಕಲ್ವಾ? "

"ಇಲ್ಲ ಅಣ್ಣ ನಾವು ಪರಿಶ್ರಮ ಪಡುತ್ತೇವೆ ನಮ್ಮ ಪರಿಶ್ರಮವನ್ನು ಸಮಾಜ ಗುರುತಿಸಬೇಕು, ನಾವು ಹೋದಲ್ಲೆಲ್ಲಾ ನಮ್ಮನ್ನ ಗೌರವಿಸಬೇಕು ಹಾಗಾದಾಗ ಮಾತ್ರ ಅಲ್ವಾ ಬದುಕಿಗೊಂದು ಅರ್ಥ"

" ನಮ್ಮ ಪರಿಶ್ರಮ ನಮ್ಮ ಆತ್ಮತೃಪ್ತಿಗೆ ಹೊರತು ಸಮಾಜ ನೋಡುವುದಕ್ಕಲ್ಲ, ನಿನ್ನನ್ನು ಹೆಚ್ಚು ಹೆಚ್ಚು ಸಮಾಜ ಗುರುತಿಸುತ್ತಾ ಹೋದಷ್ಟು ನಿನ್ನ ವೈಯಕ್ತಿಕ ಬದುಕನ್ನ ಕಳೆದುಕೊಳ್ಳುತ್ತೀಯಾ, ಸಣ್ಣ ಸಣ್ಣ ವಿಚಾರಗಳನ್ನ ಅನುಭವಿಸುವ ಸ್ವಾತಂತ್ರ್ಯ ನಿನಗಿರುವುದಿಲ್ಲ "

ನಾವು ಯಾಕೆ ಸಣ್ಣ ಸಣ್ಣ ವಿಚಾರಗಳನ್ನು ಅನುಭವಿಸಬೇಕು, ದೊಡ್ಡದಾದ ಅದ್ಭುತವಾದ ವಿಚಾರಗಳನ್ನು ಅನುಭವಿಸಿದರೇ ಒಳ್ಳೆಯದಲ್ವಾ?

ಎಷ್ಟೇ ದೊಡ್ಡ ವಿಚಾರಗಳನ್ನು ಅನುಭವಿಸಿದರೂ ಸಣ್ಣ ವಿಚಾರಗಳಲ್ಲಿ ಸಿಗುವ ಖುಷಿ ಸಿಗುವುದಿಲ್ಲ, ಬದುಕಿಗೆ ಅರ್ಥ ಸಿಗಬೇಕೆಂದರೆ ಪ್ರತಿ ದಿನವನ್ನು ಬದುಕಬೇಕು, ಜೀವಿಸಬೇಕು. ಪ್ರಸಿದ್ಧಿ ಬರಬೇಕು ಇನ್ನೊಬ್ಬರು ಗುರುತಿಸಬೇಕು ಅನ್ನುವ ಕಾರಣಕ್ಕೆ ಬದುಕಬಾರದು.

ಸರಿಯಣ್ಣ ನೀನು ಹಾಗೆ ಬದುಕು, ನಾನು ಹೀಗೆ ಬದುಕುತ್ತೇನೆ. ನಮ್ಮ ಜೀವನದ ಮುಸ್ಸಂಜೆಯ ಹೊತ್ತಿನಲ್ಲಿ ಒಂದು ದಿನ ಮತ್ತೆ ಮಾತಾಡೋಣ. ಇಬ್ಬರಲ್ಲಿ ಯಾರು ಸರಿ ಅಂತ. 

ನನಗಂತೂ ಈ ಪ್ರಶ್ನೆಯನ್ನು ನಿಮ್ಮ ಜೊತೆಗೆ ಕೇಳಬೇಕು ...ನಿಮ್ಮ ಪ್ರಕಾರ ಯಾರು ಸರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ