ನೆರೆಯ ದೇಶ ನೇಪಾಲದಲ್ಲಿ ಸರಕಾರವು ಹಲವು ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ವಿಧಿಸಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ. ಹಲವು ಮಂದಿ ಈ ದುರ್ಘಟನೆಯಲ್ಲಿ ಪ್ರಾಣ ತೆತ್ತಿದ್ದಾರೆ. ನೇಪಾಲವು ನಮ್ಮ ಜತೆಗೆ ಗಡಿಯನ್ನು ಹಂಚಿಕೊಂಡಿರುವ ದೇಶ, ಅಲ್ಲಿ ಉದ್ಭವಿಸಿರುವ ಪರಿಸ್ಥಿತಿ ನಮಗೂ ಎಚ್ಚರಿಕೆಯ ಕರೆಘಂಟೆ ಆಗಿದೆ.
ನೇಪಾಲದಲ್ಲಿ ಫೇಸ್ಬುಕ್, ಟ್ವಿಟರ್, ವ್ಯಾಟ್ಸ್ಆ್ಯಪ್, ಇನ್ಸ್ಟಾಗ್ರಾಂನಂತಹ ಹಲವು ಸಾಮಾಜಿಕ ಮಾಧ್ಯಮಗಳನ್ನು ಸರಕಾರವು ನಿಷೇಧಿಸಿದೆ. ಸೆಪ್ಟೆಂಬರ್ ೪ರಂದು ಈ ನಿಷೇಧ ಜಾರಿಗೊಂಡಿತ್ತು. ಸರಕಾರ ಹಾಗೆ ಮಾಡಲು ಕಾರಣಗಳಿವೆ. ನೇಪಾಲದಲ್ಲಿ ನೋಂದಣಿ ಮಾಡಿಕೊಳ್ಳದ ಸಾಮಾಜಿಕ ಮಾಧ್ಯಮಗಳಿಗೆ ಈ ನಿಷೇಧ ಲಗಾವಾಗುತ್ತದೆ. ಈ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ. 'ದುಷ್ಕರ್ಮಿಗಳು ದ್ವೇಷ ಭಾಷಣ, ವದಂತಿಗಳು, ಸುಳ್ಳುಸುದ್ದಿಗಳನ್ನು ಹರಡುತ್ತಿದ್ದಾರೆ. ಸೈಬರ್ ಅಪರಾಧಗಳಿಗೆ ಕೂಡ ಈ ಮಾಧ್ಯಮಗಳು ಬಳಕೆಯಾಗುತ್ತಿವೆ. ಇದು ಒಟ್ಟು ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದಾಗಿ ಅಲ್ಲಿನ ಸರಕಾರ ಹೇಳಿದೆ. ಸರಕಾರದ ನಿಯಂತ್ರಕ ಪ್ರಾಧಿಕಾರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಈ ಸಾಮಾಜಿಕ ಮಾಧ್ಯಮಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಆದರೆ ಪ್ರಮುಖ ಮಾಧ್ಯಮಗಳ ಪೈಕಿ ಟಿಕ್ಟಾಕ್ ಹೊರತುಪಡಿಸಿದರೆ ಇನ್ಯಾವುದೇ ಸಾಮಾಜಿಕ ಮಾಧ್ಯಮ ನೆಲದ ಕಾನೂನು -ನಿಯಮ ಪಾಲಿಸಲು ವಿಫಲವಾದವು. ಹೀಗಾಗಿ ನಿಷೇಧ ಮಾಡಲಾಗಿದೆ ಎಂಬುದು ನೇಪಾಲಿ ಸರಕಾರದ ವಾದವಾಗಿದೆ.
ನೇಪಾಲದಲ್ಲಿ ಈ ಪ್ರತಿಭಟನೆಯನ್ನು 'ಝಡ್ ಪೀಳಿಗೆಯ ಹೋರಾಟ' ಎಂಬುದಾಗಿ ಪ್ರತಿಭಟನಕಾರರು ಹೇಳಿಕೊಂಡಿದ್ದಾರೆ. ಝಡ್ ಪೀಳಿಗೆ ಎಂದರೆ ೧೯೯೫-೨೦೧೦ರ ನಡುವೆ ಜನಿಸಿದವರು, ಈಗ ೧೬-೨೫ ವಯೋಮಾನದವರು. ನೇಪಾಲದ ಒಟ್ಟು ಜನಸಂಖ್ಯೆಯಲ್ಲಿ ಈ ವಯೋಮಾನದವರು ಶೇ. ೨೦.೮ರಷ್ಟಿದ್ದಾರೆ. ಅಲ್ಲಿ ಒಟ್ಟು ಜನಸಂಖ್ಯೆಯ ಶೇ. ೯೦ ಮಂದಿ ಇಂಟರ್ನೆಟ್ ಉಪಯೋಗಿಸುತ್ತಿದ್ದಾರೆ. ಅಂದರೆ ಯಾವುದೇ ವಸ್ತು-ವಿಷಯಗಳನ್ನು ಪ್ರತಿಪಾದಿಸಲು, ಜನಸಮೂಹದ ನಡುವೆ ಹರಡಲು ಇಂಟರ್ಸೆಟ್ - ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನಬಹುದು. ಸರಕಾರದ ನಿಷೇಧವನ್ನು ಪ್ರಶ್ನಿಸಿ ಬೀದಿಗಿಳಿದವರು ಯುವ ಜನರೇ ಆಗಿದ್ದಾರೆ.
ಇದಕ್ಕಿಂತ ಮೊದಲು ಬಾಂಗ್ಲಾದೇಶದಲ್ಲಿ ಶ್ರೀಲಂಕಾದಲ್ಲಿ ಇಂತಹುದೇ ಮಾದರಿಯ ಕ್ಷಿಪ್ರ ದಂಗೆಗಳು ನಡೆದಿರುವುದನ್ನು ನಾವು ಗಮನಿಸಬಹುದು. ಇಲ್ಲೆಲ್ಲ ಕಾರಣಗಳು ಬೇರೆ ಬೇರೆ ಇರಬಹುದು. ಆದರೆ ಸಾಮಾಜಿಕ ಮಾಧ್ಯಮಗಳನ್ನು ಆಳವಾಗಿ ನಂಬುವ, ಅದರ ಪ್ರಭಾವಕ್ಕೆ ಒಳಗಾಗುವ ಯುವ ಸಮೂಹವನ್ನು ತಪ್ಪು ಉದ್ದೇಶಗಳಿಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಿಪ್ರ ದಂಗೆಗೆ ಪ್ರೇರೇಪಿಸುವ ಕಾರ್ಯ ಆಗಬಾರದು. ಇಲ್ಲಿ ಸಾಮಾಜಿಕ ಜಾಲತಾಣ ಕಂಪೆನಿಗಳ ಹೊಣೆಗಾರಿಕೆಯೂ ಇದೆ. ಯಾವುದೇ ಮೂಲದವಾಗಿರಲಿ; ಆ ಕಂಪೆನಿಗಳು ತಾವು ಕಾರ್ಯಾಚರಿಸುತ್ತಿರುವ ದೇಶದ ಕಾನೂನು, ನಿಯಮಗಳನ್ನು ಗೌರವಿಸಬೇಕು, ಅನುಸರಿಸಬೇಕು. ಈ ಹಿಂದೆ ಭಾರತದಲ್ಲಿಯೂ ಸರಕಾರ ನಿಯಮಗಳನ್ನು ಪಾಲಿಸದ ಆ್ಯಪ್ಗಳನ್ನು ನಿಷೇಧಿಸಿದ್ದನ್ನು ನೆನಪಿಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಸ್ತು ವಿಷಯಗಳಿಗೆ ಪ್ರಸ್ತುತ ಯಾವುದೇ ರೀತಿಯ ಲಂಗುಲಗಾಮು ಇಲ್ಲ ಎಂಬಂತಹ ಸ್ಥಿತಿ ಇದೆ. ಅದಕ್ಕೆ ನಿಯಂತ್ರಣ ವಿಧಿಸಲು ಮುಂದಾದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ ಮುನ್ನೆಲೆಗೆ ಬರುತ್ತದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವು ಸ್ಟೇಚ್ಛೆ ಸ್ವಚ್ಛಂದ ಆಗಬಾರದು. ಹೀಗಾಗಿ ನಿಯಮ-ನಿಯಂತ್ರಣ ಅಗತ್ಯವಾಗಿ ಬೇಕು. ಇದನ್ನು ಸಾಮಾಜಿಕ ಮಾಧ್ಯಮಗಳು ಅನುಸರಿಸಬೇಕು. ಇಲ್ಲವಾದರೆ ಯುವ ಜನರು ದಾರಿತಪ್ಪಿ ಅನಗತ್ಯವಾಗಿ ಬೀದಿಗಿಳಿಯುವುದು, ಅರಾಜಕತೆ ಸೃಷ್ಟಿಯಾಗುವುದು ಸಾಧ್ಯ. ಅಂತಹ ಸನ್ನಿವೇಶ ಉದ್ಭವಿಸದಂತೆ ಎಚ್ಚರಿಕೆಯಿಂದ ಇರಬೇಕಾಗಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೯-೦೯-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!