ಮಂಗಳೂರು ಶ್ರೀ ಸುಬ್ರಹ್ಮಣ್ಯ ಸಭಾದವರ 'ಜ್ಞಾನಶಕ್ತಿ"

ಮಂಗಳೂರು ನಗರ ಕೊಡಿಯಾಲ್ ಬೈಲ್ ಬಿಜೈ ರಸ್ತೆಯ ಕುಡ್ಪಿ ಪದ್ಮನಾಭಯ್ಯ ಗಾರ್ಡನ್ಸ್ ನಲ್ಲಿ ಕಾರ್ಯಾಲಯವಿರುವ ಶ್ರೀ ಸುಬ್ರಹ್ನಣ್ಯ ಸಭಾ (ರಿ) ಸಂಸ್ಥೆಯು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಜ್ಞಾನಶಕ್ತಿ".

೧೯೦೮ರಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ ಸ್ಥಾಪನೆಯಾಗಿತ್ತು. ವರ್ಷಕ್ಕೆ ನಾಲ್ಕೈದು ಕಾರ್ಯಕ್ರಮಗಳು ಸಭಾದ ವತಿಯಿಂದ ಆಯೋಜಿಸಲಾಗುತ್ತಿತ್ತು. ಸದಸ್ಯರಿಗೆ ಪೋಸ್ಟ್ ಕಾರ್ಡ್ ನಲ್ಲಿ ಕಾರ್ಯಕ್ರಮದ ಬಗ್ಗೆ ಬರೆದು ಆಮಂತ್ರಿಸಲಾಗುತ್ತಿತ್ತು. ನಂತರ ಕಾರ್ಡ್ ನ ಬದಲಾಗಿ ಇನ್ ಲ್ಯಾಂಡ್ ಲೆಟರ್ ನಲ್ಲಿ ಬರೆದು ಕಳುಹಿಸಲಾಗುತ್ತಿತ್ತು. ಈ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಪತ್ರಿಕೆಯ ಯೋಚನೆ ಪದಾಧಿಕಾರಿಗಳಲ್ಲಿ ಹೊಳೆದು ಕೊನೆಗೆ "ಜ್ಞಾನಶಕ್ತಿ" ಮಾಸಪತ್ರಿಕೆಯನ್ನು ಆರಂಭಿಸಲಾಯಿತು. ಆಗ ಪತ್ರಿಕೆ ನಾಲ್ಕು ಪುಟಗಳಿಗೆ ಸೀಮಿತವಾಗಿತ್ತು.

೨೦೦೬ - ೦೭ ಅವಧಿಯಲ್ಲಿ ಎರಡು ವರ್ಷ ಕಾಲ ಪತ್ರಿಕೆ ಸ್ಥಗಿತಗೊಂಡಿತ್ತು. ೨೦೦೮ - ೦೯ರಲ್ಲಿ ಸಭಾವು ಶತಮಾನೋತ್ಸವ ಆಚರಿಸಿಕೊಂಡ ನಂತರ ಪತ್ರಿಕೆಯನ್ನು ಎಂಟು ಪುಟಗಳಲ್ಲಿ ಪುನರಾರಂಭಿಸಲಾಯಿತು. ಕಳೆದ ೧೪ ವರ್ಷಗಳಿಂದ ಪ್ರಕಟವಾಗುತ್ತಿರುವ ಪತ್ರಿಕೆ ಎಂಟು ಪುಟಗಳನ್ನು ಹೊಂದಿದ್ದು, ಬಿಡಿ ಸಂಚಿಜೆಯ ಬೆಲೆ ಮೂರು ರೂಪಾಯಿ ಆಗಿರುತ್ತದೆ. ವಾರ್ಷಿಕ ಚಂದಾ ಮೊತ್ತ ಮೂವತ್ತು ರೂಪಾಯಿಗಳು. ಸಭಾದ ಸದಸ್ಯರಿಗೆ ಮಾತ್ರ ಪತ್ರಿಕೆಯನ್ನು ನೀಡಲಾಗುತ್ತದೆ.

ಸ್ಥಾನಿಕ ಬ್ರಾಹ್ಮಣರ ಸಂಘಟನೆಯಾದ ಶ್ರೀ ಸುಬ್ರಹ್ಮಣ್ಯ ಸಭಾದ ಮುಖವಾಣಿಯಾಗಿದೆ ಜ್ಞಾನಶಕ್ತಿ. ಆದ್ದರಿಂದ ಈ ಪತ್ರಿಕೆಯಲ್ಲಿ ಸಭಾದ ಕಾರ್ಯಕ್ರಮಗಳ ವರದಿಗಳು, ಸ್ಥಾನಿಕ ಬ್ರಾಹ್ಮಣರ ಸಾಧಕರ, ಪ್ರತಿಭಾವಂತರ ಪರಿಚಯ ಮತ್ತು ಸ್ಥಾನಿಕ ಬ್ರಾಹ್ಮಣರ ವೈವಿಧ್ಯಮಯ ಲೇಖನಗಳು ಪ್ರಕಟವಾಗುತ್ತವೆ.

ಸಭಾದ ಅಧ್ಯಕ್ಷರಾದ ಡಾ. ಎ. ಪಿ. ಕೃಷ್ಣ ಪತ್ರಿಕೆಯ ಪ್ರಕಾಶಕರು. ಪುತ್ತೂರು ದರ್ಬೆಯ ಎಂ. ಎಸ್. ರಘುನಾಥ ರಾವ್ ಪ್ರಧಾನ ಸಂಪಾದಕರು. ಮಂಗಳೂರಿನ ಪಿ. ಶ್ರೀಕಾಂತ ರಾವ್ ಸಂಪಾದಕರು. ನಾಗರಾಜ ವರ್ಕಾಡಿ, ರಘುವೀರ ಪೆರ್ಡೂರು, ಟಿ. ಬಿ. ಮೋಹನ ರಾವ್ ಹಾಗೂ ಸ್ವಾತಿ ಪ್ರಮೋದ್ ಕ್ಯಾದಿಗೆ ಸಂಪಾದಕ ಮಂಡಳಿ ಸದಸ್ಯರು. ಯದಯ ಕುಮಾರ್ ಪಿ., ಸಂತೋಷ್ ಕುಮಾರ್ ಯು. ಹಾಗೂ ಅನಿಲ್ ರಾವ್ ಬಿ. ಎಸ್. ಆರ್ಥಿಕ ಸಲಹಾ ಸಮಿತಿ ಸದಸ್ಯರು. ಚೇತನ್ ಶರ್ಮ ಹಾಗೂ ಶ್ರೀಮತಿ ಅರುಣಾ ಸೋಮಶೇಖರ್ ಗೌರವ ಸಲಹೆಗಾರರು. ಪತ್ರಿಕೆಯನ್ನು ಪುತ್ತೂರು ದರ್ಬೆಯ ರಾಜೇಶ್ ಪವರ್ ಪ್ರೆಸ್ ನಲ್ಲಿ ಮುದ್ರಿಸಲಾಗುತ್ತಿದೆ.

~ ಶ್ರೀರಾಮ ದಿವಾಣ