ಮಕ್ಕಳ ಕತೆಗಳು ಪುಟ್ಟಪುಟ್ಟ ಕಥೆಗಳಾಗಿದ್ದರೆ ಮಕ್ಕಳಿಗೆ ಖುಷಿಯೋ ಖುಷಿ. ಅವು ಉದ್ದುದ್ದ ಕತೆಗಳು ಆಗಿರಬೇಕೆಂದೇನೂ ಇಲ್ಲ. ಕೇವಲ 4 - 5 ವಾಕ್ಯಗಳಲ್ಲೇ ಮಕ್ಕಳಿಗೆ ಸೊಗಸಾದ ಕತೆ ಹೇಳಲು ಸಾಧ್ಯವಿದೆ.  

ಉದಾಹರಣೆಗೆ, ಶ್ಯಾಮ ಸುಶೀಲ್ ಪಠ್ಯ ಬರೆದು, ಭಾರ್ಗವ ಕುಲಕರ್ಣಿ ಚಿತ್ರಗಳನ್ನು ರಚಿಸಿರುವ“ಆಡಿನ ಮರಿ ಜೊತೆ” (“ಬಕರಿ ಕೆ ಸಾತ್”) ಎಂಬ ಶೀರ್ಷಿಕೆಯ ಹಿಂದಿ ಕತೆಯ ಅನುವಾದ ಇಲ್ಲಿದೆ:

ಆಡಿನ ಮರಿ ಜೊತೆ ಮುನ್ನಿ ಮಾತು ಆಡ್ತಾಳೆ

ಆಡಿನ ಮರಿ ಹೇಳ್ತದೆ ಮೆಂ… ಮೆಂ… ಮೆಂ… ಮುನ್ನಿ ಅಂತಾಳೆ ಏಮ್… ಏಮ್… ಏಮ್…

ಆಡಿನ ಮರಿ ಕಿವಿ ಅಲುಗಿಸಿತು, ಮುನ್ನಿ ಹಾಡು ಹಾಡ್ತಾಳೆ

ಪುಟ್ಟ ಆಡಿನ ಮರಿಯನ್ನ ಹಿಡೀತಾಳೆ ಮುನ್ನಿ

ಇದು ಕೇವಲ 12 ಪುಟಗಳ ಮಕ್ಕಳ ಕತೆ ಪುಸ್ತಕ. ಇದರ ಪ್ರಕಾಶಕರು: ಜುಗನೂ ಪ್ರಕಾಶನ, ಏಕತಾರ ಟ್ರಸ್ಟಿನ ಪ್ರಕಾಶನ ವಿಭಾಗ, ಸಿ-404, ಡಿಫೆನ್ಸ್ ಕಾಲೋನಿ, ನವದೆಹಲಿ (2018, ಬೆಲೆ: ರೂ. 40). ಈ ಪುಸ್ತಕದಲ್ಲಿ ತಲಾ ಎರಡು-ಪುಟಗಳಲ್ಲಿ ವ್ಯಾಪಿಸಿರುವ ಮುನ್ನಿ ಎಂಬ ಮುದ್ದು ಬಾಲಕಿ ಮತ್ತು ಅವಳ ಮುದ್ದಿನ ಆಡಿನ ಮರಿಯ ಕೇವಲ ನಾಲ್ಕು ಬಣ್ಣದ ಚಿತ್ರಗಳಿವೆ. ಪ್ರತಿಯೊಂದು ಚಿತ್ರಕ್ಕೆ ಅಂತ್ಯ-ಪ್ರಾಸದ ಒಂದು ವಾಕ್ಯದಂತೆ ಕೇವಲ ನಾಲ್ಕು (ಈ ಮೇಲಿನ) ವಾಕ್ಯಗಳಲ್ಲಿ ಹೇಳಿರುವ ಕತೆ ಇದು. ನಾಲ್ಕು ವಾಕ್ಯಗಳ ಕತೆಯಾದರೂ ಪ್ರತಿಯೊಂದು ಚಿತ್ರವೂ 15-20 ವಾಕ್ಯಗಳಲ್ಲಿ ತಿಳಿಸಬಹುದಾದ ವಿವರಗಳನ್ನು ಪ್ರಸ್ತುತಪಡಿಸುತ್ತವೆ.

ಇಂತಹದೇ ಇನ್ನೊಂದು ಪುಸ್ತಕದ ಶೀರ್ಷಿಕೆ: “ಬಾವಿಯಲ್ಲಿ ಬೆಕ್ಕಿನ ಮರಿ” (“ಕಿಟ್ಟಿ ಇನ್ ದ ವೆಲ್”). ಇದರ ಪಠ್ಯ ಮತ್ತು ಚಿತ್ರಗಳನ್ನು ರಚಿಸಿದವರು ಮಂಜರಿ ಚಕ್ರವರ್ತಿ. ಇದು ಕೂಡ ನವದೆಹಲಿಯ ಜುಗನೂ ಪ್ರಕಾಶನದವರೇ ಪ್ರಕಟಿಸಿರುವ (2021, ಬೆಲೆ: ರೂ. 50) ಮಕ್ಕಳ ಕತೆ ಪುಸ್ತಕ. ಇದರಲ್ಲಿ ಎಡ-ಪುಟಗಳಲ್ಲಿ ಚಿತ್ರವಿದ್ದು, ಬಲ-ಪುಟಗಳಲ್ಲಿ ಕೇವಲ 1-3 ವಾಕ್ಯಗಳಲ್ಲಿ ಆ ಚಿತ್ರಗಳ ಕುರಿತಾದ (ಒಟ್ಟು 25) ಕಥಾ- ವಾಕ್ಯಗಳಿವೆ. ಇದರ ಕತೆಯ ಭಾವಾನುವಾದ ಹೀಗಿದೆ:

ನಮ್ಮ ಮನೆಯ ಹಿತ್ತಲಿನಲ್ಲಿ ನೆರಳು ನೀಡುವ ದೊಡ್ಡ  ಮರಗಳು ಮತ್ತು ಒಂದು ಬಾವಿ ಇದೆ. ಏರೋಪ್ಲೇನ್ ಚಿಟ್ಟೆ (ಡ್ರಾಗನ್ ಚಿಟ್ಟೆ)ಗಳ ಜೊತೆ ಬೆಕ್ಕಿನ ಮರಿಯೊಂದು ಆಟವಾಡೋದನ್ನು ನಾನು ನೋಡುತ್ತಿದ್ದೆ. ಹಠಾತ್ತನೆ ಆ ಬೆಕ್ಕಿನ ಮರಿ ಬಾವಿಯ ದಂಡೆಗೆ ಹಾರಿತು ಮತ್ತು ಬಾವಿಯೊಳಗೆ ಬಿತ್ತು. ಓ, ಸಹಾಯಕ್ಕೆ ಬನ್ನಿ! … ಬೇಗನೇ ಬನ್ನಿ! ಬೆಕ್ಕಿನ ಮರಿಯನ್ನು ರಕ್ಷಿಸಿ!… ಬೆಕ್ಕಿನ ಮರಿ ಹೆದರಿದೆ ಮತ್ತು ಬಾವಿಯಲ್ಲಿದ್ದ ಒಂದು ತೂತಿನಲ್ಲಿ ಅಡಗಿದೆ. ಅದನ್ನು ರಕ್ಷಿಸಲಿಕ್ಕಾಗಿ ನಾವು ಬಾವಿಗೆ ಇಳಿಸಿದ ಬಕೆಟಿನೊಳಗೆ ಬೆಕ್ಕಿನ ಮರಿ ಬರುತ್ತಿಲ್ಲ. ಓ, ಅಗ್ನಿಶಾಮಕ ದಳದವರನ್ನು ಬೇಗನೇ ಕರೆಯಿರಿ!… ಗಂಟೆ ಬಾರಿಸುತ್ತಾ ಅವರು ಬಂದೇ ಬಂದರು. ಏಣಿಯೊಂದನ್ನು ಹಿಡಿದುಕೊಂಡು ಅವರು ಓಡೋದನ್ನು ನೋಡಿ…. ಆದರೆ ಅವರು ಬಾವಿಯೊಳಗೆ ಇಳಿಯಲಾರದಷ್ಟು ಗಾತ್ರದ ವ್ಯಕ್ತಿಗಳು. ಆಗ ಯುವಕನೊಬ್ಬ ಹೇಳಿದ, “ನಾನು ಬೆಕ್ಕಿನ ಮರಿಯನ್ನು ರಕ್ಷಿಸಿ ತರುತ್ತೇನೆ.” ಅವನು ಧೈರ್ಯವಂತ! … ಅವನು ಬಾವಿಯಲ್ಲಿ ಕೆಳಗೆ, ಕೆಳಗೆ, ಕೆಳಗೆ ಇಳಿದ. ಅರೆರೆ, ಬೆಕ್ಕಿನ ಮರಿ ಮೇಲೆ, ಮೇಲೆ, ಮೇಲೆ ಏಣಿಯಲ್ಲಿ ಹತ್ತಿ ಬಂದು, ಓಡಿ  ಹೋಯಿತು. ಎಲ್ಲರಿಗೂ ನಗುವೋ ನಗು. ಜಾಣ ಬೆಕ್ಕಿನ ಮರಿ! ಅದಕ್ಕೆ ಯಾರ ಸಹಾಯವೂ ಬೇಕಾಗಲಿಲ್ಲ!… ಧೈರ್ಯವಂತ ಯುವಕ ಬಾವಿಯಿಂದ ಮೇಲೇರಿ ಬರುತ್ತಾನೆ. ಅವನಿಗೆ ಸ್ವಲ್ಪ ಸುಸ್ತಾದಂತೆ ಕಾಣಿಸುತ್ತದೆ. ಅವನು ಬೆಕ್ಕಿನ ಮರಿಯನ್ನು ರಕ್ಷಿಸಲಿಕ್ಕಾಗಿ ಬಾವಿಯೊಳಗೆ ಇಳಿದಿದ್ದ. ಆದರೆ ಬೆಕ್ಕಿನ ಮರಿ ತನ್ನನ್ನು ತಾನೇ ರಕ್ಷಿಸಿಕೊಂಡಿತು!… ನಾವೆಲ್ಲರೂ ಬಿಸಿಬಿಸಿ ಚಹಾ ಮತ್ತು  ಬಿಸ್ಕಿಟ್ ಸೇವಿಸುತ್ತಾ ಪಾರ್ಟಿ ಮಾಡಿ ಸಂಭ್ರಮಿಸಿದೆವು. ಎಲ್ಲವೂ ಸುಖಾಂತ್ಯವಾಯಿತು…. ಅಲ್ಲಿ ದೂರದಲ್ಲಿ ಬೆಕ್ಕಿನ ಮರಿ ತನ್ನ ಒದ್ದೆ ಮೈ ನೆಕ್ಕುತ್ತಾ ಕುಳಿತಿತ್ತು.

ಕನ್ನಡದಲ್ಲಿಯೂ ಮಕ್ಕಳಿಗಾಗಿ ಇಂತಹ ಚಿತ್ರಸಹಿತ ಪುಟ್ಟಪುಟ್ಟ ಕತೆ ಪುಸ್ತಕಗಳು ಹೆಚ್ಚೆಚ್ಚು ಪ್ರಕಟವಾಗಲಿ ಎಂದು ಹಾರೈಸೋಣ.

ಫೋಟೋ : “ಬಕರಿ ಕೆ ಸಾತ್” ಮುಖಪುಟ

ಫೋಟೋ : “ಕಿಟ್ಟಿ ಇನ್ ದ ವೆಲ್” ಮುಖಪುಟ