ಉಮ್ಮಲ್ತಿ ಗುಡಿಯ ಸಾಕ್ಷಿ

ವಿಜಯಶ್ರೀ ಹಾಲಾಡಿ ಅವರ ನೂತನ ಕಥಾ ಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' ಇತ್ತೀಚೆಗೆ ಮುದ್ರಣಗೊಂಡಿದೆ. ಇದು ಅವರ ಹನ್ನೆರಡನೆಯ ಪುಸ್ತಕ. ಇದರಲ್ಲಿ ಹದಿಮೂರು ಕತೆಗಳಿದ್ದು ಹೆಚ್ಚಿನ ಕತೆಗಳ ಪರಿಸರ ಕುಂದಾಪ್ರದ ಆಸುಪಾಸು. ಮತ್ತು ಸುಮಾರು ಹತ್ತು ಕತೆಗಳ ಸಂಭಾಷಣೆ ಬಹುತೇಕ ಕುಂದಾಪ್ರ ಕನ್ನಡದಲ್ಲಿದೆ. ಹಿರಿಯ ಕತೆಗಾರರಾದ ಶ್ರೀಧರ ಬಳಗಾರ ಅವರ ಮುನ್ನುಡಿ, ಪಾರ್ವತಿ ಜಿ. ಐತಾಳ್ ಅವರ ಬೆನ್ನುಡಿ ಇದೆ. ಪ್ರಸನ್ನ ಪಿ ಬಿ ಅವರು ಅಭಿಪ್ರಾಯ ಬರೆದಿದ್ದಾರೆ. ಶ್ರೀಧರ ಬಳಗಾರ ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ…

“ವಿಜಯಶ್ರೀ ಹಾಲಾಡಿಯವರ ಕಥಾಲೋಕ ವಿಶಿಷ್ಟವಾದದ್ದು. ವಿಶಿಷ್ಟ ಏಕೆಂದರೆ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಸಂಕಲನದ ಕೆಲವು ಕತೆಗಳು ಮನುಷ್ಯ ಕಟ್ಟಿಕೊಂಡ ನಾಗರಿಕ ವ್ಯವಸ್ಥೆ ಮತ್ತು ಮನುಷ್ಯ ಸ್ವಭಾವದ ನಡುವಿನ ಸಂಬಂಧದಲ್ಲಿ ಉಂಟಾದ ಬಿಕ್ಕಟ್ಟುಗಳಿಗೆ ಕಾರಣ ಹುಡುಕಿ ತಾರ್ಕಿಕವಾಗಿ ಪ್ರತಿಪಾದಿಸುವ ಗೋಜಿಗೆ ಹೋಗದೆ ನಿರ್ಲಿಪ್ತ ನಿಲುವಿನಲ್ಲಿ ನಿಂತು ನೀವೇ ನೋಡಿ ಎಂದು ತಾತ್ವೀಕರಣಕ್ಕೆ ಒಳಪಡಿಸದ ಅನುಭವವನ್ನು ಪ್ರಸ್ತಾಪಿಸುತ್ತವೆ. ಅಂದರೆ, ಕಥೆಗಾರ್ತಿ ತೆರೆದಿಟ್ಟ ಅನುಭವಕ್ಕೆ ಪ್ರತಿಕ್ರಿಯಿಸುತ್ತಲೇ ಓದುಗನಿಗೆ ತನ್ನ ಧೋರಣೆಗಳನ್ನು ರೂಪಿಸಿಕೊಳ್ಳಲ್ಲೊಂದು ಸ್ವತಂತ್ರ ಅವಕಾಶ ಪ್ರಾಪ್ತವಾಗಿದೆ. ಗೃಹೀತ ನಂಬಿಕೆಗಳನ್ನು ಪುನರ್ ಪರಿಶೀಲಿಸಿ ಕಳಚಿಕೊಳ್ಳುವ ಅಥವಾ ಬದಲಾಯಿಸಿಕೊಳ್ಳುವ ಅನಿವಾರ್ಯತೆಯನ್ನು ಕಥೆಗಳ ಅನುಭವದಾಳದ ಧ್ವನಿಗಳು ಸೂಚಿಸುತ್ತವೆ. ಕಥೆಯ ಪ್ರಕಾರದ ಕುರಿತು ಅನಗತ್ಯ ಗೊಂದಲಗಳನ್ನು ಮಾಡಿಕೊಳ್ಳದೆ ಅನುಭವ ತನ್ನ ಪಾಡಿಗೆ ತಾನು ಕಥೆಯ ಆಕಾರ ಪಡೆಯುವದರತ್ತ ಅವರ ಲಕ್ಷ್ಯವಿದೆ. ಕಥೆಯ ವ್ಯಾಕರಣವನ್ನು ಮರೆಯದೆ ಅದೇ ಕ್ಷಣಕ್ಕೆ ಲೋಕಾನುಭವಕ್ಕೆ ಪ್ರಾಮಾಣಿಕವಾಗಿದ್ದು ಬರೆಯುವುದು ಕಲಾತ್ಮಕತೆಯ ದೃಷ್ಟಿಯಿಂದ ಕಷ್ಟದ ಕೆಲಸ. ಕ್ಯಾಮರಾದ ಎದುರು ಪ್ರಯತ್ನಪಟ್ಟಷ್ಟೂ ಫೋಟೊ ಅಸಹಜವಾಗುವಂತೆ ಹದ ತಪ್ಪಿದರೆ ಬರೆವಣಿಗೆಯೂ ಕೃತ್ರಿಮವಾಗಬಹುದು. ಅಂಥಹ ಅಪಾಯದಿಂದ ರಕ್ಷಿಸಿಕೊಳ್ಳುವ ದಾರಿಯಲ್ಲಿ ವಿಜಯಶ್ರೀ ಮುನ್ನಡೆಯುತ್ತಿದ್ದಾರೆಂದು ಇಲ್ಲಿನ ಕೆಲವು ಕಥೆಗಳು ಸಾಕ್ಷಿ ನುಡಿಯುತ್ತವೆ.

ಈ ಸಂಕಲನದ ಬಹುಪಾಲು ಕಥೆಗಳು ಶಿಥಿಲವಾದ ಕೌಟುಂಬಿಕ ವ್ಯವಸ್ಥೆ, ವಿಷಮಗೊಂಡ ದಾಂಪತ್ಯ ಸಂಬಂಧ, ಸಾಮಾಜಿಕ ದೂಷಣೆಯ ನಡುವೆ ಬಡತನ ಮತ್ತು ಅವಮಾನ ಲೆಕ್ಕಿಸದೆ ಅಸಾಧಾರಣ ಜೀವಪ್ರೇಮದಿಂದ ಸಂಕಟದ ಸಂಸಾರದಲ್ಲೂ ಜೀವನದ ಘನತೆಯನ್ನು ಸಂಯಮದಿಂದ ಪೋಷಿಸುವ ಸ್ತ್ರೀಯರ ಸ್ಥಿತಿ ಮತ್ತು ಸಾಧ್ಯತೆಯನ್ನು ನಿರೂಪಿಸುತ್ತವೆ. ಕಾಲಾಂತರದಿಂದಲೂ ಹೆಣ್ಣು ಅನುಭವಿಸುತ್ತ ಬಂದಿರುವ ವ್ಯಥೆಯನ್ನು ಲೋಕಕ್ಕೆ ಸಾರಿ ಹೇಳಲೆಂದೇ ಈ ಕಥೆಗಳು ಹುಟ್ಟಿಕೊಂಡಿವೆಯೇನೊ ಎಂಬುದನ್ನು ಖಚಿತಪಡಿಸುವಂತಿವೆ ಇಲ್ಲಿನ ರಚನೆಗಳು. ಹೆಣ್ಣಿನ ದೈವ ಎಂಬಂತೆ ಹಿಂಸೆ ಅವಳ ಜೀವನದಲ್ಲಿ ಜಾರಿಯಾದದ್ದು ಹೇಗೆ? ಸಮಾಜದ ಕೆಳಸ್ತರದಲ್ಲಿ ಹೆಣ್ಣಾಗಿ ಹುಟ್ಟಿದ್ದೆ ಕಾರಣವೆ? ವೈವಾಹಿಕ ವ್ಯವಸ್ಥೆ ತನ್ನೆಲ್ಲ ಯಾಂತ್ರಿಕತೆಯಿಂದ ಪ್ರೀತಿ-ಸಹಬಾಳ್ವೆಯನ್ನು ತುಳಿದಿದೆಯೆ? ಮನುಷ್ಯನ ಮೂಲ ಸ್ವಭಾವದಲ್ಲೆ ವಿಕೃತಿ ಸುಪ್ತವಾಗಿದೆಯೆ? ಸಮಾಜದ ರಚನೆಯಲ್ಲೆ ಕ್ರೌರ್ಯಕ್ಕೆ ಎಡೆಮಾಡುವ ಅಸಹನೆ, ಅಸಮಾನತೆ ಹಾಸುಹೊಕ್ಕಾಗಿವೆಯೆ? ಪಾಲನೆಯ ಜವಾಬ್ದಾರಿಯಿಂದ ನುಸುಳಿಕೊಂಡ ರಾಕ್ಷಸಿ ಪ್ರವೃತ್ತಿಯ ಪುರುಷನೆ? ಅವನನ್ನು ಒರಟನನ್ನಾಗಿಸಿದ ಜೀವನದ ಕಹಿ ಅನುಭವಗಳೆ? ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಆರೋಪಿತ ಹೊಣೆಗಾರಿಕೆಯನ್ನು ಇಲ್ಲಿನ ಕಥೆಗಳು ಹೊತ್ತುಕೊಂಡಿಲ್ಲ. ಅಥವಾ ಉತ್ತರಿಸುವ ಆವೇಶದಲ್ಲಿ ಸಾಮಾಜಶಾಸ್ತ್ರ, ಮನೋವಿಜ್ಞಾನ, ತತ್ವಶಾಸ್ತ್ರದ ಸಿದ್ಧಾಂತಗಳ ಸ್ಥಾಪಿತ ವಿಚಾರಗಳನ್ನು ಆಶ್ರಯಿಸುವುದಕ್ಕೆ ಹೋಗಲಿಲ್ಲ. ತತ್ವಗಳನ್ನು ತಂತ್ರಗಳಂತೆ ಉಪಯೋಗಿಸುವ ಬುದ್ಧಿವಂತಿಕೆಯಿಂದ ದೂರವಿದ್ದಾಗ ಮಾತ್ರ ಅನುಭವಗಳ ನಿಷ್ಠುರ ಸತ್ಯದ ಮುಖಾಮುಖಿ ಸಾಧ್ಯ ಎಂಬುದನ್ನು ಇಲ್ಲಿನ ಕಥೆಗಳು ಪರೋಕ್ಷವಾಗಿ ಕಂಡರಿಸುವಂತಿದೆ.

‘ಉಮ್ಮಲ್ತಿ ಗುಡಿಯ ಸಾಕ್ಷಿ’ ಯ ನಿರೂಪಕಿ ಸುಮಿ ಹಳ್ಳಿಯ ‘ಕಾಡ್ಮನೆ’ಯ ಪವಿತ್ರ ಪರಿಸರವೇ ಮೂರ್ತಿವೆತ್ತಂತಿದ್ದ ಭಾಗಿಯತ್ತೆ ಸಾವಿನ ಹಾಸಿಗೆಯಲ್ಲಿ ಮಲಗಿರುವ ಸುದ್ದಿ ತಿಳಿದಾಕ್ಷಣ ಊರಿಗೆ ಬರುವದರಿಂದ ಆರಂಭವಾಗುವ ಕಥೆ ಮೊದಮೊದಲು ಭಾಗಿಯತ್ತೆ ಮನೆಗೆ ಹೋಗುವುದನ್ನು ವಿರೋಧಿಸುತ್ತಿದ್ದ ಅಮ್ಮ ಈಗ ಹದಿನೈದು ಮಳೆಗಾಲ ಕಳೆದ ನಂತರ ಅವಳನ್ನು ಭೇಟಿಯಾಗಲು ಹೇಳುವುದರೊಂದಿಗೆ ಮುಗಿಯುತ್ತದೆ. ಅಮ್ಮ ಸೀತೆಯ ನಿಲುವಿನಲ್ಲಾದ ಅಚ್ಚರಿಯ ಪರಿವರ್ತನೆಯ ಹಿನ್ನಲೆಯಲ್ಲಿ ಭಾಗಿಯತ್ತೆ ಮತ್ತು ಸೀತೆಯ ಮನೆಗಳಲ್ಲಿ ನಡೆದಿದ್ದ ಎರಡು ದಶಕಗಳ ತಲ್ಲಣದ ಪ್ರಭಾವವಿದೆ. ಬಾಗಿಯತ್ತೆಯದು ಎರಡನೇ ಸಂಬಂಧ. ಕೋಪಿಷ್ಠನೂ ರೋಗಿಷ್ಟನೂ ಆಗಿದ್ದ ಗಂಡ ಮಾಬ್ಲುವಿನ ಮೇಲೆ ಮೊದಲ ಹೆಂಡತಿಯನ್ನು ಹೊಡೆದು ಕೊಂದನೆಂಬ ಆರೋಪವಿದೆ. ಭಾಗಿಯತ್ತೆಯೂ ಅನಾಚಾರದವಳೆಂಬ ಮಾತು ಬರುತ್ತದೆ. ತೀರಿ ಹೋದವಳಿಗೆ ಎರಡು, ಭಾಗಿಯತ್ತೆಗೆ ಮೂರು ಹೆಣ್ಣುಮಕ್ಕಳು. ಗಂಡನ ದೌರ್ಜನ್ಯ ಮತ್ತು ಕಡು ಬಡತನದಲ್ಲಿ ಭಾಗಿಯತ್ತೆ ಸೀತೆಯ ಮನೆಯ ಚಾಕರಿ ಮಾಡಿ, ಸ್ಥಿತಿವಂತರ ಮನೆಯ ಅಡುಗೆ ಕೆಲಸಕ್ಕೆ ಒದಗಿ, ಕೂಳಿಗೆ ಸಹಾಯ ಪಡೆಯುತ್ತ ಅನಾಚಾರದವಳು ಎಂಬ ನಿಂದನೆಗೆ ಪಾತ್ರಳಾಗುತ್ತ, ದಕ್ಕಿದ ಬದುಕನ್ನು ಓರಣವಾಗಿಟ್ಟುಕೊಂಡವಳು. ತನ್ನ ಗಂಡ ಮತ್ತು ಭಾಗಿಯತ್ತೆ ನಡುವೆ ಇರಬಹುದಾದ ಸಂಬಂಧದ ಬಗ್ಗೆ ಅನುಮಾನಿಸುತ್ತ ಸೀತೆ ಪರಚಾಡುವಳು. ಅವಳ ಮಾತಿಗೆ ಮುಖ ಕೊಡಲಾರದ ಗಂಡನ ಮೌನ ಸೀತೆಯದು ಕೇವಲ ಅನುಮಾನವಲ್ಲ ಎಂದೆನಿಸುವಂತೆ ಸಂಜ್ಞೆ ನೀಡುತ್ತದೆ. ಭಾಗಿಯತ್ತೆ ಸೀತೆಯ ಗಂಡನನ್ನು ಧರ್ಮರಾಯ ಎಂದು ಗುಣಗಾನ ಮಾಡುವುದು, ಭಾಗಿಯತ್ತೆಯನ್ನು ಮಾಬ್ಲು ಚರ್ಮ ಸುಲಿಯುವಂತೆ ಹೊಡೆಯುವುದು, ಸೀತೆಯ ಗಂಡ ಮಾಬ್ಲುನನ್ನು ಅನುಕಂಪದಿಂದ ವಹಿಸಿಕೊಂಡು ಬರುವುದು ಇದಕ್ಕೆ ಪುಷ್ಟಿ ನೀಡುವ ನಿಶ್ಯಬ್ದ ವಿವರಗಳು. ಇದೇ ಸಂದರ್ಭದಲ್ಲಿ ರಾತ್ರಿ ಚಿಮಣಿ ದೀಪವಾರಿಸಿ ಮಲಗಿದ ಮೇಲೆ ಭಾಗಿಯತ್ತೆ ಮಕ್ಕಳಿಗೆ ಹೇಳುವ ಉಮ್ಮಲ್ತಿ ಮತ್ತು ಬೊಬ್ಬರ್ಯ ಪ್ರೇಮಿಗಳ ದುರಂತ ಪ್ರಸಂಗವು ಕಥೆಯ ವಿನ್ಯಾಸದ ಮೇಲೆ ಬೀರುವ ಧ್ವನ್ಯಾರ್ಥವನ್ನು ಗಮನಿಸಬೇಕು. ಗುಡಿಯ ಉಮ್ಮಲ್ತಿ ದೈವದ ಮಡಿಲಲ್ಲಿ ತನ್ನ ಅವ್ಯಕ್ತ ಒಡಲುರಿಯನ್ನು ರಣಾವೇಶದಲ್ಲಿ ಭಾಗಿಯತ್ತೆ ಉಪಶಮನಗೊಳಿಸಿಕೊಳ್ಳುವ ವಾಸ್ತವ ದೃಶ್ಯ ಇಡೀ ಕಥೆಯ ರೂಪಕ ಶಕ್ತಿಯಾಗಿ ಕಾಡುತ್ತದೆ. ಮಳೆ, ಕತ್ತಲು ಮತ್ತು ಕಾಡು ಕೇವಲ ಭೌತಿಕ ವಿವರಗಳಾಗದೆ ಕಥೆಯ ಆಶಯವನ್ನು ಪೊರೆಯುವ ಪ್ರತೀಕಗಳಾಗಿವೆ.

ಕರುಣೆಯುಳ್ಳವರು ತಪ್ಪದ ಕಷ್ಟದ ಹಾದಿಯಲ್ಲಿ ಹೆಜ್ಜೆಹಾಕುತ್ತ ಸಹವರ್ತಿಗಳ ನೋವಿಗೆ ಸ್ಪಂದಿಸಿ ನೆರವಾಗುವುದನ್ನು ಚಿತ್ರಿಸುವ ಕಥೆ ‘ದೇವಮ್ಮಕ್ಕ’. ಸಮಾಜದ ದೋಷಾರೋಪಗಳಿಗೆ ಎದೆಗೊಟ್ಟ ದೇವಮ್ಮಕ್ಕ ಮಲ್ಲಿಕಾಳ ಕಷ್ಟಕ್ಕೆ ಮಿಡಿದು ಸಹಾಯಕ್ಕೆ ಒದಗುವುದು, ಹೆಣ್ಣು ಸಾಧ್ಯ ಮಾಡಿಕೊಂಡ ಅಪೂರ್ವ ಅಂತಃಕರಣಕ್ಕೆ ಒಂದು ಪ್ರಮಾಣ. ಬರಗಾಲದ ಬಿಸಿಲೂರಿಗೆ ಗಂಡನೊಂದಿಗೆ ಮಲ್ಲಿಕಾ ವರ್ಗವಾಗಿ ಹೋದಾಗ ಸಹಾಯಕ್ಕೆ ಒದಗಿದವಳು ದೇವಮ್ಮಕ್ಕ. ಹಾಸಿಗೆಯಲ್ಲಿ ಹಿಂಸಿಸುವವ ಗಂಡ ರವಿಯ ಘನಸ್ತಿಕೆಯನ್ನು ಮಲ್ಲಿಕಾ ದೇವಮ್ಮಕ್ಕನಲ್ಲಿ ಹಂಚಿಕೊಂಡು ತುಸು ಹಗುರಾದವಳು. ದಾಂಪತ್ಯದ ವಿಷಯದಲ್ಲಿ ದೇವಮ್ಮಕ್ಕ ಮತ್ತು ಮಲ್ಲಿಕಾ ಸಮಾನ ದುಃಖಿಗಳು. ವಿಧವೆ ದೇವಮ್ಮಕ್ಕ ಗಂಡನ ಹಿಂಸೆಯಿಂದ ಬೆಂದವಳು. ಪಕ್ಕದೂರಿನ ವಿಧುರ ಸಂಕ್ರಪ್ಪ ಕುಟುಂಬದಿಂದ ದೂರಾಗಿ ಅನುಕಂಪದಿಂದ ದೇವಮ್ಮಕ್ಕನಿಗೆ ಹತ್ತಿರವಾದವನು. ಪ್ರೀತಿಯಿಂದ ಒಟ್ಟಾಗಿ ಬದುಕುವ ಆಸೆ ಇಬ್ಬರಿಗೂ ಇತ್ತು. ನರಳಿಸದೆ, ಕೆರಳಿಸದೆ ಕಥೆ ತನ್ನ ಸಹಜತೆಯಿಂದ ನಮ್ಮನ್ನು ಆರ್ದ್ರಗೊಳಿಸುತ್ತದೆ.

ಬದುಕಿನಲ್ಲಿ ಬಂದದ್ದನ್ನು ಸ್ವೀಕರಿಸಿ ಮುನ್ನೆಡೆಯುವ ಹೆಣ್ಣಿನ ಪ್ರವೃತ್ತಿಗೆ ಸಮಾನಾಂತರವಾಗಿ ಕಷ್ಟಗಳನ್ನು ಅವುಗಳ ಸಹಜ ನೆಲೆಯಲ್ಲಿ ಅರಿಯುವ, ಅನ್ಯಾಯವನ್ನು ಪ್ರತಿರೋಧಿಸುವ ಕಥೆಗಳೂ ಇವೆ. ಮುಟ್ಟು ಹೆಣ್ಣಿನ ಪ್ರಕೃತಿ ಸಹಜವಾದ ಜೈವಿಕ ಸೃಷ್ಟಿ ಕ್ರಿಯೆಯೇನೊ ಹೌದು. ಆದರೆ ಅದೇ ಅತಿಸ್ರಾವವಾದರೆ ಹೆಣ್ಣು ಅನುಭವಿಸುವ ನೋವು, ಆತಂಕ, ಮುಜುಗರ ಅಸಹನೀಯವೆನಿಸುತ್ತದೆ. ಇಂಥ ವಸ್ತುವನ್ನಿಟ್ಟುಕೊಂಡು ಹೆಣ್ಣು ಮಾತ್ರ ಬರೆಯಬಹುದಾದ ಕಥೆ ‘ಹೊಳೆ’. ಕಥಾ ನಿರೂಪಕಿ ಜ್ಯೋತಿ ನಂದಿನಿ ನದಿಯ ಕೆಂಪು ಹರಿವು ಭೂತಾಯಿಯ ಜೀವ ಸೃಷ್ಟಿಯ ರಕ್ತ ಎಂಬ ದರ್ಶನ ಪಡೆಯುವದರ ಮೂಲಕ ಹೆಣ್ಣನ್ನು ಪ್ರಕೃತಿಯ ಅವಿಭಾಜ್ಯ ಭಾಗ ಎಂದು ಬಿಂಬಿಸಿ ಸಾರ್ವತ್ರಿಕ ಲೋಕಾನುಭವಕ್ಕೆ ರೂಪಕವಾಗುತ್ತಾಳೆ.

ಪ್ರಾಣಿಗಳ ಸಂಬಂಧದಲ್ಲಿ ವ್ಯಕ್ತವಾಗುವ ಮನುಷ್ಯನ ದಯೆ ಮತ್ತು ನಿರ್ದಯತೆ ಎರಡನ್ನೂ ಹೇಳುವ ‘ಏಕತಂತು’ ಮತ್ತು ಕರೊನಾ ವಕ್ಕರಿಸಿದ ಸಂದರ್ಭದಲ್ಲಿ ನರಳಿದ ಬಸುರಿಯೊಬ್ಬಳ ಚಿತ್ರ ನೀಡುವ ‘ಮಹಾಪ್ರಸ್ಥಾನ’-ಎರಡೂ ಕಥೆಗಳು ಪ್ರಸ್ತುತವಾಗಲು ಹೊರಟು ಲಯ ತಪ್ಪಿರುವುದನ್ನು ಗಮನಿಸಬಹುದು.

ಇಲ್ಲಿಯ ಹಲವು ಕಥೆಗಳ ನಿರೂಪಣೆ ಆಧುನಿಕ ಜಗತ್ತಿನ ಹೊಸ ತಲೆಮಾರಿಗೆ ಸೇರಿದ ಯುವತಿಯರಿಂದ ಸಾದರಪಟ್ಟಿದೆ. ಈ ತಂತ್ರದಿಂದ ವಿಜಯಶ್ರೀಯವರಿಗೆ ಹಲವು ಅನುಕೂಲಗಳು ಆಗಿವೆ: ಭೂತ ಮತ್ತು ವರ್ತಮಾನ ಕಾಲಗಳ ನಡುವಿನ ಸ್ಥಿತ್ಯಂತರವನ್ನು ಹೋಲಿಕೆಗೆ, ವೈದೃಶ್ಯಕ್ಕೆ ಅಣಿಗೊಳಿಸಿಕೊಳ್ಳಲು, ನಿರುದ್ವಿಗ್ನ ಮನಃಸ್ಥಿತಿಯಿಂದ ಪಾತ್ರಗಳ ಎಲ್ಲ ಆಯಾಮಗಳನ್ನು ಗಮನಿಸಲು, ಘಟನೆಗಳಿಗಿಂತ ಕಾಲದ ಸುದೀರ್ಘ ಚಲನೆಯಲ್ಲಿರುವ ಪಾತ್ರಗಳ ರಾಗ-ದ್ವೇಷಗಳಲ್ಲಿ ಉಂಟಾಗುವ ಪಲ್ಲಟವನ್ನು ದಾಖಲಿಸಲು, ಕಥನದ ಬೆಳವಣಿಗೆಯನ್ನು ಹಲವರ ಹೇಳಿಕೆಗಳಿಂದ ಗಾಢಗೊಳಿಸಲು ಈ ಓಲಾಟದ ತಂತ್ರ ಸೀಮಿತ ಚೌಕಟ್ಟಿನೊಳಗೆ ಯಶಸ್ವಿಯಾಗಿದೆ. ಕಥೆ ನಡೆದ ಮತ್ತು ಅದನ್ನು ನಿರೂಪಿಸುವ ದೇಶ-ಕಾಲಗಳ ಅಂತರ್ ಘಟ್ಟಗಳ ದ್ವಿಮುಖಿ ನಿರೂಪಣೆಗೆ ಪಾತ್ರ-ಪರಿಸರ-ಘಟನೆಗಳನ್ನು ಕಾಣಿಸುವ ಗುಣಕ್ಕಿಂತ ಹೇಳುವ ನಿರಾಯಾಸ ಓಟವೇ ಕಥೆಗಾರ್ತಿಗೆ ಸಲೀಸಾಗಿಬಿಟ್ಟಿದೆ ಎಂದು ಕೆಲವೊಮ್ಮೆ ಅನಿಸದಿರದು. ಆದ್ದರಿಂದ ಅನೇಕ ಸಲ ಇಲ್ಲಿನ ಕಥೆಗಳು ಕಾದಂಬರಿಯಾಗಲು ಹಾತೊರೆಯುತ್ತಿವೆ ಎಂದನಿಸುತ್ತದೆ.”