ಮರುಜಾತಿ ಜನಗಣತಿ ಪ್ರಾರಂಭವಾಗಿದ್ದೇ ತಡ ಎಲ್ಲಾ ಜಾತಿ ನಾಯಕರ ಮುಖವಾಡಗಳು ಬಯಲಾಗುತ್ತಿದೆ. ತನ್ನ ಜಾತಿ ಜನರ ಸಂಖ್ಯೆ ಹೆಚ್ಚಾಗಿ ದಾಖಲಾಗಬೇಕು, ಆ ಮೂಲಕ ತಮಗೆ ರಾಜಕೀಯವಾಗಿ ಹೆಚ್ಚು ಲಾಭ ಸಿಗಬೇಕು, ತಾವು ಪ್ರಬಲ ಜಾತಿ ಎಂದು, ಅಂದರೆ ಹೆಚ್ಚು ಜನಸಂಖ್ಯೆಯ ಪ್ರಬಲ ಜಾತಿ, ಆರ್ಥಿಕವಾಗಿ ಬಡ ಜಾತಿ ಎಂದು ಅಂಕಿಸಂಖ್ಯೆಗಳ ಮೂಲಕ ತೋರಿಸಿಕೊಳ್ಳಬೇಕು, ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬ ಜಾತಿ ನಾಯಕರು ಅದಕ್ಕಾಗಿ ತುಂಬಾ ತುಂಬಾ ಶ್ರಮ ಪಡುತ್ತಿದ್ದಾರೆ. ಎಲ್ಲಾ ಕಡೆ ಜಾತಿ ಜನಗಣತಿಯ ಸಮಯದಲ್ಲಿ ಯಾವ ರೀತಿ ತಮ್ಮ ಜಾತಿಯ ಹೆಸರನ್ನು ದಾಖಲು ಮಾಡಬೇಕು ಎಂಬ ತರಬೇತಿ ಅಥವಾ ಜಾಗೃತ ಶಿಬಿರಗಳನ್ನು ಮತ್ತು ಪತ್ರಿಕಾ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ತಮ್ಮ ಅಸ್ತಿತ್ವ ಈ ಜಾತಿ ಗಣತಿಯಿಂದಲೇ ನಿರ್ಧಾರವಾಗುತ್ತದೆ ಎಂದು ಗಂಭೀರವಾಗಿ ಪರಿಗಣಿಸಿದ್ದಾರೆ.

ಮದುವೆ, ಚುನಾವಣೆ ಮುಂತಾದ ಸಂಬಂಧಗಳಲ್ಲಿ ಜಾತಿ, ಉಪಜಾತಿ, ಕುಲಗೋತ್ರಗಳನ್ನು ನೋಡುವ ಈ ಜನ ಇದೀಗ ಉಪಜಾತಿಗಳನ್ನೆಲ್ಲಾ ಸೇರಿಸಿ ಒಂದೇ ಜಾತಿ ಅಡಿಯಲ್ಲಿ ದಾಖಲಿಸಲು ಸಾಮಾನ್ಯ ಜನರಿಗೆ ದಂಬಾಲು ಬೀಳುತ್ತಿದ್ದಾರೆ. ಜಾತಿ ಜಾತಿಗಳ ನಡುವಿನ ಸ್ಪರ್ಧೆ ಏರ್ಪಟ್ಟಿದೆ. ವೀರಶೈವರೇ, ಲಿಂಗಾಯಿತರೇ ಇದನ್ನೇ ಏನು ಬಸವಣ್ಣ ಮತ್ತು ವಚನ ಸಂಸ್ಕೃತಿ ನಿಮಗೆ ಕಲಿಸಿದ್ದು, ಇವನಾರವ, ಇವನಾರವ ಎಂದೆಣಿಸಿದೆ, ಇಂವ ನಮ್ಮವ, ಇಂವ ನಮ್ಮವ ಎಂದೆಣಿಸಯ್ಯ ಎಂದು ಹೇಳಿದ್ದು ಯಾರಿಗಾಗಿ, 

ಒಕ್ಕಲಿಗರೇ ಇದನ್ನೇ ಏನು  ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದು, ಇದನ್ನೇ ಏನು ನಿಮಗೆ ಶೋಷಿತ ಸಮುದಾಯಗಳೇ, ಬುದ್ಧ, ಬಾಬ ಸಾಹೇಬರು ಹೇಳಿಕೊಟ್ಟಿದ್ದು, ಮೇಲ್ಜಾತಿಯವರೇ ಇದನ್ನೇ ಏನು ನಿಮಗೆ ಸ್ವಾಮಿ ವಿವೇಕಾನಂದರಂತ ಭಾರತೀಯ ಸಾಂಸ್ಕೃತಿಕ ನಾಯಕರು, ಈ ದೇಶದ ಮೌಲ್ಯಗಳನ್ನು ಪ್ರತಿಪಾದಿಸಿದ್ದು, ಇದನ್ನೇ ಏನು ನಿಮಗೆ ಕನಕ, ಪುರಂದರರು ಹೇಳಿಕೊಟ್ಟಿದ್ದು, ಇದನ್ನೇ ಏನು ನಿಮಗೆ ಆಚಾರ್ಯತ್ರಯರು ಕಲಿಸಿದ್ದು. 

ಜಾತಿ ಭಾರತೀಯ ಸಮಾಜದ ಒಂದು ಶಾಪ ಎಂದು ಪದೇ ಪದೇ ಹೇಳುವ ಎಲ್ಲರೂ ಈಗ ಜಾತಿ ಗಣತಿಯ ಸಂದರ್ಭದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಯುದ್ಧದ ಸಮಯದಲ್ಲಿ ನಾವೆಲ್ಲರೂ ಭಾರತೀಯರು ಎನ್ನುವುದು, ಧಾರ್ಮಿಕ ಆಚರಣೆ ಸಂದರ್ಭದಲ್ಲಿ ನಾವೆಲ್ಲರೂ ಹಿಂದುಗಳು ಎನ್ನುವುದು, ಸಾಮಾಜಿಕ ನ್ಯಾಯದ ಸಂದರ್ಭದಲ್ಲಿ ನಾವೆಲ್ಲ ಶೋಷಿತರು ಎನ್ನುವುದು. ಇದೇ ಏನು ಈ ದೇಶದ ನಿಜವಾದ ಬಣ್ಣ, ಮೂಲ ಸ್ವರೂಪ. 

ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ, ಜಾತಿಗಳ ಆಧಾರದ ಮೇಲೆ, ಹುಟ್ಟಿನಿಂದ ಗಳಿಸಿಕೊಂಡ ನಿಮ್ಮ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ನೀವುಗಳು ಇನ್ನೂ ಕೂಡ ಬದುಕಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡು ಅನಿಸುವುದಿಲ್ಲವೇ? ಈ  ವ್ಯವಸ್ಥೆಯಲ್ಲಿ ನಿಜ ಮನುಷ್ಯರನ್ನು ಹುಡುಕುವುದಾದರೂ ಎಲ್ಲಿ. ಮಾಧ್ಯಮಗಳು, ಧಾರ್ಮಿಕ ಮುಖಂಡರು, ಪ್ರಗತಿಪರ ಚಿಂತಕರು ಎಲ್ಲರೂ ತಮ್ಮ ಜಾತಿಗಳ ಪರವಾಗಿ ಯಾವುದೇ ಸಂಕೋಚವಿಲ್ಲದೆ ಬ್ಯಾಟು ಬೀಸುತ್ತಿದ್ದಾರೆ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ