ಗಝಲ್ ೧
ಬಲಿತವರು ಯಾರೋ, ಹೀಗೆಂದವರು ಹೋದರು
ನಡತೆಯೆಲ್ಲ ಸಂಶಯ, ಹಾಗೆಂದವರು ಹೋದರು
ಹುಡುಕಾಡಿ ಸಾಕಾಗಿದೆ, ಕಲಿತವರೆಲ್ಲ ಎಲ್ಲಿಹರೋ
ಕಳಿತವರ ನಡುವೆಯೇ, ಏಳೆಂದವರು ಹೋದರು
ನಮ್ಮೊಳಗಿನ ಕೇಡದು,ನಮ್ಮನ್ನೇ ನುಂಗಿತಂತೆ ಹೌದೆ
ಮುನಿಸುಗಳು ತರವಲ್ಲ, ಬೇಡೆಂದವರು ಹೋದರು
ಕೆಲವು ಸಸ್ಯಗಳು, ತಾವೇ ಹಾಯಾಗಿ ಬೆಳೆಯುತ್ತವೆ
ಹಲವು ಮನುಜರ ರೀತಿ, ಹೋಗೆಂದವರು ಹೋದರು
ವಿಜಾತಿಯ ವಸ್ತುಗಳ ಆಕರ್ಷಣೆ, ಜಾಸ್ತಿಯಂತೆ ಈಶಾ
ಒಳ್ಳೆಯವರ ಕೆಂಡವೆನುತ ಜೋರೆಂದವರು ಹೋದರು
***
ಗಝಲ್ ೨
ಒಮ್ಮೆಯೆನ್ನ ಅಪ್ಪಿಬಿಡೆ ಮುದ್ದು ಮುಖದ ಮೋಹಿನಿ
ಸೌಖ್ಯವಿಹುದು ಬಾಳಿನಲ್ಲಿ ಒಲುಮೆ ಸುಖದ ಮೋಹಿನಿ
ಜೀವದೊಲುಮೆ ತಾಣದಲ್ಲಿ ಪ್ರೀತಿ ಅರಳಿ ನಿಂತಿದೆ
ತನುವಿನಾಳ ಚೆಲುವು ಮೂಡೆ ಪ್ರೇಮ ಮನದ ಮೋಹಿನಿ
ಕನಸಿನಾಳ ನನಸು ಇರಲಿ ಖುಷಿಯ ತರಲಿ ಕಂಗಳು
ಚತುರನಾಟ ಸನಿಹ ಸಿಹಿಯು ಚೈತ್ರ ಸೊಗದ ಮೋಹಿನಿ
ಚಿತ್ರದೊಳಗೆ ಬಿಡಿಸಿದಂತ ಕಮಲದೊಳಗೆ ಸೊಬಗಿದೆ
ನಗುವಿನೊಳಗೆ ಬೆಸುಗೆ ಬರಲಿ ಮೈತ್ರಿ ತನದ ಮೋಹಿನಿ
ಬದುಕಿನೊಳಗೆ ಇರಲು ಸುತ್ತ ಹರುಷ ಚೆಲ್ಲಿ ಈಶನೆ
ತಂಪಿನೊಸರು ಸ್ನೇಹದೊಳಗೆ ಸೇರಿ ಸವಿದ ಮೋಹಿನಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!