ಹೌದು, ಎರಡೆರಡು ಸಲ ಬಂಗಾರದಂತಹ ಅವಕಾಶ ಸಿಕ್ಕರೂ ನನಗೆ ಎಸ್ ಎಲ್ ಭೈರಪ್ಪನವರನ್ನು ಮುಖಃತ ನೋಡಲು ಆಗಲಿಲ್ಲ. ನನ್ನ ದುರಾದೃಷ್ಟವೋ, ನನ್ನ ನಿರ್ಲಕ್ಷ್ಯವೋ ಏನೋ ಸಿಕ್ಕ ಅವಕಾಶವನ್ನು ಕಳೆದುಕೊಂಡೆ. ಮುಂದೆ ಎಂದಾದರೂ ಸಿಗುವರು ಎಂಬ ಉದಾಸೀನ ಭಾವನೆಯೂ ಕಾಣವಾಗಿರಬಹುದು ಎಂದು ನನಗೆ ಈಗ ಅನಿಸುತ್ತಿದೆ. ಮಂಗಳೂರಿನಲ್ಲಿ ನಡೆದ ಸಾಹಿತ್ಯ ಹಬ್ಬ - ಲಿಟ್ ಫೆಸ್ಟ್ ಗೆ ಭೈರಪ್ಪನವರು ಬಂದಿದ್ದರು, ಆದರೆ ನನಗೆ ಹೋಗಲು ಆಗಲಿಲ್ಲ. ಸಿಕ್ಕಿದ್ದರೆ ಏನು ಮಾತನಾಡುತ್ತಿದ್ದೆ? ಅದೂ ಗೊತ್ತಿಲ್ಲ. ಅವರ ಬರಹಗಳನ್ನು ಕೇವಲ ಕೇಳಿ ಮೆಚ್ಚಿಕೊಂಡು ಬಂದ ನನಗೆ ಮಾತನಾಡಲು ಆಗುತ್ತಿತ್ತೋ ಅದೂ ಗೊತ್ತಿಲ್ಲ.

ಹಾಗೆಂದು ನಾನು ಭೈರಪ್ಪನವರ ಕಾದಂಬರಿಗಳ ದೊಡ್ಡ ಅಭಿಮಾನಿ ಓದುಗ ಏನಲ್ಲ. ನಾನು ಅವರ ಕಾದಂಬರಿಗಳಲ್ಲಿ ಪೂರ್ಣವಾಗಿ ಓದಿದ್ದು ಒಂದು ಮಾತ್ರ. ಅದು ‘ಸಾರ್ಥ’. ಮೊದಲಿನಿಂದಲೂ ನನಗೆ ತುಂಬಾ ದೀರ್ಘವಾದ ಕಾದಂಬರಿಗಳನ್ನು ಓದುವುದು ಇಷ್ಟವಾಗುತ್ತಿರಲಿಲ್ಲ. ಈ ಕಾರಣದಿಂದಲೇ ನಾನು ಭೈರಪ್ಪವನರ ಕಾದಂಬರಿಗಳನ್ನು ದೂರವೇ ಇಟ್ಟೆ ಅನಿಸುತ್ತೆ. ‘ಪರ್ವ’ ಕಾದಂಬರಿಯ ಕೆಲವು ಅಧ್ಯಾಯಗಳನ್ನು ಅಧ್ಯಯನ ನಿಮಿತ್ತ ಓದಿದ್ದು ಇದೆ. ಅದರಲ್ಲಿ ಶ್ರೀಕೃಷ್ಣ -ಗಾಂಧಾರಿಯ ಒಂದು ಸಂಭಾಷಣೆ ನನಗೆ ಈಗಲೂ ನೆನಪಿನಲ್ಲಿ ಉಳಿದಿದೆ. 

ಎಸ್ ಎಲ್ ಭೈರಪ್ಪನವರು ಸೆಪ್ಟೆಂಬರ್ ೨೪, ೨೦೨೫ರಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಬರೆದ ಎಲ್ಲಾ ಕಾದಂಬರಿಗಳು ಮುಂದಿನ ದಿನಗಳಲ್ಲೂ ನಮ್ಮ ನಡುವೆ ಇರಲಿದೆ. ನನಗೆ ಭೈರಪ್ಪವನರನ್ನು ಭೇಟಿಯಾಗಲು ಆಗದೇ ಇದ್ದರೂ ಅವರ ಕಾದಂಬರಿಗಳನ್ನು ಓದುವ ಅವಕಾಶ ಇನ್ನೂ ಇದೆ. ಯಾವುದಕ್ಕೂ ಸೋಮಾರಿತನ ಬಿಡಬೇಕು. ಈಗ ಅವರ ಮೊದಲ ಬರಹ ‘ಗತಜನ್ಮ ಮತ್ತೆರಡು ಕತೆಗಳು’ ಕೈಗೆತ್ತಿಕೊಂಡಿರುವೆ. ನನ್ನ ಓದಿನ ‘ಯಾನ’ ಮುಂದುವರೆಸಬೇಕಿದೆ.

ಈ ನಡುವೆ ಪತ್ರಿಕೆಯೊಂದರಲ್ಲಿ ಎಸ್ ಎಲ್ ಭೈರಪ್ಪನವರ ಆತ್ಮಕತೆ ‘ಭಿತ್ತಿ’ ಬಗ್ಗೆ ಬರೆದ ಒಂದು ಪುಟ್ಟ ಬರಹವನ್ನು ಕಂಡೆ. ಅದನ್ನು ಬರೆದದ್ದು ಗೊರೂರು ಶಿವೇಶ್. ಅದನ್ನು ಯಥಾವತ್ತಾಗಿ ಇಲ್ಲಿ ಬಳಸಿಕೊಂಡಿರುವೆ. 

ಭಿತ್ತಿ: ಅನುಭವ ಕಥನ

‘ಭಿತ್ತಿ' ಎಸ್.ಎಲ್. ಭೈರಪ್ಪನವರ ಆತ್ಮಕಥೆ. ಅವರ ಗೃಹಭಂಗ ಮತ್ತು ಅನ್ನೇಷಣ ಕಾದಂಬರಿಗಳನ್ನು ಓದಿದ್ದರೆ ಅವು ಅವರ ಆತ್ಮಕಥೆಯ ಬಾಲ್ಯ ಮತ್ತು ಯೌವನದ ಅನುಭವಗಳ ಆಧಾರಿತ ಕಾದಂಬರಿಗಳಾಗಿವೆ. ಭಿತ್ತಿ ಆತ್ಮಕತೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಅವರ ಹುಟ್ಟೂರು ಸಂತೇಶಿವರ ಹಾಗೂ ಸುತ್ತಲಿನ ಬಾಗೂರು, ನುಗ್ಗೆಹಳ್ಳಿ, ತಿಪಟೂರು ಮತ್ತು ಚನ್ನರಾಯಪಟ್ಟಣದ ಬಾಲ್ಯ ಜೀವನದ ಅನುಭವಗಳು ದಟ್ಟವಾಗಿ ಮೂಡಿದೆ. ಬಾಲ್ಯದಲ್ಲಿ ತಾಯಿ, ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ಪ್ಲೇಗ್‌ನಿಂದಾಗಿ ಸೋದರ ಸೋದರಿಯರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ, ಅಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಚಿಕ್ಕ ವಯಸ್ಸಿನ ಬಾಲಕ ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ, ಸಮಯಕ್ಕಾಗದ ಬಂಧುಗಳು, ನೆರವಿಗೆ ಬರುವ ಊರಿನ, ತಾಲೂಕಿನ ಜನ ಹೀಗೆ ಅನೇಕರನ್ನು ತಮ್ಮ ಕೃತಿಯಲ್ಲಿ ಪಡಿ ಮೂಡಿಸಿದ್ದಾರೆ. ಮುಂದೆ ಅವರ ವಿದ್ಯಾಭ್ಯಾಸ, ಸಂಗೀತದ ಅಭಿರುಚಿ ಬೆಳೆದ ಬಗ್ಗೆ ಅವರ ಆಧ್ಯಾಪಕ ವೃತ್ತಿ ಸೇರಿದಂತೆ ಅವರ ಅರವತ್ತರವರೆಗಿನ ಜೀವನದ ಚಿತ್ರಣವನ್ನು ಮತ್ತು ಅವರ ವಿವಿಧ ಕಾದಂಬರಿಗಳು ಮೂಡಿಬಂದ ಬಗೆಯನ್ನು ಭಿತ್ತಿಯಲ್ಲಿ ಕಾಣಬಹುದು.

ಹುಟ್ಟಿನಿಂದ ತಮ್ಮ ೬೦ರ ವರೆಗಿನ ಜೀವನದಲ್ಲಿ ತಾವು ಕಂಡುಂಡ ಅನುಭವಗಳು ಬದುಕಿನ ಭಾಗವಾಗಿ ಬಂದ ವ್ಯಕ್ತಿಗಳು ಜೀವನದ ಪಯಣದಲ್ಲಿ ಜೊತೆಯಾದವರು ಎಲ್ಲರನ್ನು ನಿರುದ್ವಿಗ್ನರಾಗಿ, ನಿರ್ವಿಕಲ್ಪ ಮನೋಭಾವದಲ್ಲಿ ನಿರೂಪಿಸಿರುವುದು ಕೃತಿಯ ಹೆಗ್ಗಳಿಕೆ. ತಮ್ಮ ವಿವಿಧ ಕಾದಂಬರಿಗಳು ಮೂಡಿ ಬಂದ ಬಗೆ,ಮೈಸೂರಿನ ಆರ್.ಐ.ಇ (ರೀಜನಲ್ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಶನ್) ಅಧ್ಯಾಪಕ ವೃತ್ತಿಯ ದಿನಗಳು ಹಾಗೂ ಇತರೆ ರಾಜ್ಯಗಳಲ್ಲಿ ವೃತ್ತಿ ಹಾಗೂ ಪ್ರವಾಸದ ಸಂದರ್ಭದ ಅಂಶಗಳನ್ನು ಕೃತಿ ಒಳಗೊಂಡಿವೆ.

ಎಸ್.ಎಲ್.ಭೈರಪ್ಪನವರು ಅಧ್ಯಾಪಕ ವೃತ್ತಿಯಲ್ಲಿ ಕೈಗೊಂಡ ಸಂದರ್ಭ ಕನ್ನಡದ ಪ್ರಮುಖ ಲೇಖಕರು ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಳನಳಿಸುತ್ತಿದ್ದ ಕಾಲಘಟ್ಟ. ನವ್ಯ ಸಾಹಿತ್ಯ ಪ್ರಭಾವ ದಟ್ಟವಾಗಿದ್ದ ಸಂದರ್ಭದಲ್ಲಿ ಅದರ ಮುಂಚೂಣಿ ಲೇಖಕರಾದ ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಪೂರ್ಣಚಂದ್ರ ತೇಜಸ್ವಿ ಜೊತೆಗೆ ನವೋದಯ ಸಾಹಿತ್ಯದ ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ ಮುಂತಾದ ಸಾಹಿತ್ಯ ದಿಗ್ಗಜರು ಮೈಸೂರಿನಲ್ಲಿ ಇದ್ದ ಸಂದರ್ಭದಲ್ಲಿ ಪ್ರಸಿದ್ಧ ಲೇಖಕರ ಅವರದೇ ಆದ ಸಿದ್ಧಾಂತಗಳು, ಬಣಗಳು ಇದ್ದು ಆ ಬಣಗಳ ನಡುವಿನ ಸಂಘರ್ಷವೂ ಕೃತಿಯಲ್ಲಿ ಮೂಡಿದೆ.

-ಗೊರೂರ್ ಶಿವೇಶ್

***

ಎಸ್ ಎಲ್ ಭೈರಪ್ಪನವರ ಕಾದಂಬರಿಗಳನ್ನು ನಾನು ನೇರವಾಗಿ ಓದದೇ ಇದ್ದರೂ ಅವರ ಕಾದಂಬರಿಗಳು ಬಿಡುಗಡೆಯಾದ ಸಂದರ್ಭ, ನಂತರದ ವಿಮರ್ಶೆಗಳು, ಚರ್ಚೆಗಳು, ಭಿನ್ನಾಭಿಪ್ರಾಯಗಳು, ಕಾದಂಬರಿಗಳ ದಾಖಲೆಯ ಮರು ಮುದ್ರಣ ಇವೆಲ್ಲಾ ಗಮನಿಸುತ್ತಾ ಬಂದಿರುವೆ. ತಮ್ಮ ಕೃತಿಗಳ ಪ್ರಥಮ ಮುದ್ರಣದಲ್ಲೇ ಐದು ಸಾವಿರ ಪ್ರತಿಗಳನ್ನು ಮುದ್ರಣ ಕಾಣುತ್ತಿದ್ದ ಕನ್ನಡದ ಏಕೈಕ ಬರಹಗಾರ ಎಸ್ ಎಲ್ ಭೈರಪ್ಪನವರೇ ಇರಬೇಕು ಎಂದು ನನ್ನ ಅಂದಾಜು. ಉಳಿದ ಯಾವ ಬರಹಗಾರರಿಗೂ, ಪ್ರಕಾಶಕರಿಗೂ ಆ ಧೈರ್ಯ ಇರಲಿಕ್ಕಿಲ್ಲ. ಭೈರಪ್ಪನವರ ಕಾದಂಬರಿಗಳ ಉದ್ದಕ್ಕೂ ಕಂಡು ಬರುವುದು ಅವರ ಅಧ್ಯಯನಶೀಲ ಪ್ರವೃತ್ತಿ. ಯಾವುದೇ ಕಾದಂಬರಿಯನ್ನು ಅವರು ಮನೆಯಲ್ಲಿ ಕುಳಿತು ಬರೆಯಲಿಲ್ಲ. ಆ ಕಾದಂಬರಿಗೆ ಸಂಬಂಧ ಪಟ್ಟ ಸ್ಥಳಕ್ಕೆ ತೆರಳಿ ಅಧ್ಯಯನ ಮಾಡಿದರು, ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಖುದ್ದು ಭೇಟಿ ಮಾಡಿ ಅರಿತುಕೊಂಡರು. ಮುಸ್ಲಿಂ ಧರ್ಮದ ಬಗ್ಗೆ ಅವರು ತಿಳಿದು ಕೊಳ್ಳಲು ಬಾನು ಮುಸ್ತಾಕ್ ಮನೆಯಲ್ಲೂ ಒಂದಿಷ್ಟು ದಿನ ತಂಗಿದ್ದರು. ಇವೆಲ್ಲಾ ಬೈರಪ್ಪನವರನ್ನು ಉಳಿದ ಲೇಖಕರಿಗಿಂತ ಭಿನ್ನರನ್ನಾಗಿ ಮಾಡುತ್ತದೆ.

ಭೈರಪ್ಪನವರು ತಮ್ಮ ಯಾವುದೇ ಬರಹಗಳ ಬಗ್ಗೆ ಯಾವುದೇ ಕಟು ವಿಮರ್ಶೆಗಳನ್ನು ಮಾಡಿದರೂ ಅವರು ಅದಕ್ಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗಿದ್ದ ದೊಡ್ಡ ಕನಸು ತಮ್ಮ ಊರಾದ ಸಂತೇಶಿವರಕ್ಕೆ ನೀರು ತರುವುದಾಗಿತ್ತು. ಅದನ್ನು ಅವರು ಭಗೀರಥನಂತೆ ಶ್ರಮ ವಹಿಸಿ ಮಾಡಿಕೊಟ್ಟರು. ಈ ಒಂದು ಅದ್ಭುತ ಕಾರ್ಯ ಹಾಗೂ ಎಂದೂ ಮರೆಯಲಾಗದ ತಮ್ಮ ಕಾದಂಬರಿಗಳ ಮೂಲಕ ಎಸ್ ಎಲ್ ಭೈರಪ್ಪ ಸದಾ ಕಾಲ ಜನ ಮನದಲ್ಲಿ ಜೀವಂತವಾಗಿರುತ್ತಾರೆ.  

ಚಿತ್ರ ಕೃಪೆ: ಅಂತರ್ಜಾಲ ತಾಣ