ಊರಲ್ಲಿ ಭಾರೀ ಸುದ್ದಿ. ಮುಂದಿನ ಭಾನುವಾರ ಮಹಾಜ್ಞಾನಿಗಳೂ, ಪ್ರಚಂಡ ವಾಗ್ನಿಗಳೂ ಹಿಮಾಲಯದಲ್ಲಿ ತಮ್ಮದೇ ಆದ ಭರ್ಜರಿ ಆಶ್ರಮ ಕಟ್ಟಿಕೊಂಡಿದ್ದ ಸಂತ ಸುಧಾಕರ ಗುರುಗಳು ಈ ಊರಿಗೆ ಬರಲಿದ್ದಾರೆ. ಕೇವಲ ಒಂದು ದಿನ ಮಾತ್ರ ಇಲ್ಲಿ ಪ್ರವಚನ ನೀಡಿ ಮತ್ತೊಂದು ಊರಿಗೆ ಹೋಗುತ್ತಾರೆ.

ಗುರುಗಳ ಶಿಷ್ಯರು ಊರೆಲ್ಲ ಟಾಂ ಟಾಂ ಮಾಡಿದರು. ಮನೆಮನೆಗೆ ಹೋಗಿ ಸುದ್ದಿ ಮುಟ್ಟಿಸಿ ಬಂದರು. ಎಲ್ಲರೂ ತಪ್ಪದೇ ಬರಬೇಕೆಂದು ಮನವಿ ಮಾಡಕೊಂಡರು. ಊರ ಹೊರಗೆ ಬಹುದೊಡ್ಡ ಮಂಟಪವನ್ನು ನಿರ್ಮಿಸಿ ಐದಾರು ನೂರು ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದರು.

ಭಾನುವಾರ ಬೆಳಿಗ್ಗೆಯೇ ಸಂತ ಸುಧಾಕರ ಗುರುಗಳು ಊರಿಗೆ ಬಂದರು. ಅಭಿಮಾನದಿಂದ ತಮ್ಮ ಶಿಷ್ಯ ವರ್ಗದವರನ್ನು ನೋಡಿ, “ಸಂಜೆಯ ಪ್ರವಚನದ ತಯಾರಿ ಹೇಗೆ ನಡೆದಿದೆ?" ಎಂದು ಕೇಳಿದರು. ತಮ್ಮೆಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆಂದು ಶಿಷ್ಯರು ನಮ್ರರಾಗಿ ಹೇಳಿದರು. ಆದರೆ ಅವರ ಮನಸ್ಸಿನಲ್ಲಿ ಭಯವಿತ್ತು, ಅದನ್ನು ಗುರುಗಳ ಮುಂದೆ ಹೇಳುವಂತಿರಲಿಲ್ಲ. ಊರಿನಲ್ಲಿ ಗುರುಗಳಿಗೆ ಆಗದವರ ಗುಂಪೊಂದು ಇತ್ತು. ಅವರು ಇವರ ವಿರುದ್ಧ ಪ್ರಚಾರವನ್ನು ಮಾಡಿದ್ದರು. ಅದಲ್ಲದೇ ಅಂದು ತಾಲ್ಲೂಕು ಪಂಚಾಯತಿ ಚುನಾವಣೆ ಬಂದು ಬಿಟ್ಟಿತ್ತು. ಅದೊಂದು ತುರುಸಿನ ಚುನಾವಣೆ. ಈ ಗಲಾಟೆಯಲ್ಲಿ ಪ್ರವಚನಕ್ಕೆ ಯಾರು ಬಂದಾರು ಎಂಬ ಭಯವೂ ಇತ್ತು.

ಸಂಜೆಯಾಯಿತು. ಗುರುಗಳು ಮಂಟಪಕ್ಕೆ ಬಂದರು. ಮಂಟಪ ಖಾಲಿ ಖಾಲಿ. ಒಬ್ಬರೂ ಇಲ್ಲ. ಅವರ ನಾಲ್ಕಾರು ಶಿಷ್ಯರು ಮುಖಗಳನ್ನು ಹುಳಿ ಮಾಡಿಕೊಂಡು ನಿಂತರು. ಗುರುಗಳ ಮುಖ ಕೆಂಪೇರಿತು, ಧ್ವನಿ ಗಡುಸಾಯಿತು. "ಏನಿದು ಅಪಮಾನ? ಹೀಗೆ ಖಾಲೀ ಮಂಟಪಕ್ಕೆ ಮಾತನಾಡಲೆಂದು ನನ್ನನ್ನು ಕರೆದು ತಂದಿರಾ? ನನ್ನ ಸಮಯಕ್ಕೆ ಅದೆಷ್ಟು ಬೆಲೆ ನಿಮಗೆ ಗೊತ್ತಿಲ್ಲವೇ? ನನ್ನ ಭಾಷಣಕ್ಕೆ ಲಕ್ಷ ಲಕ್ಷ ಜನ ತುದಿಗಾಲ ಮೇಲೆ ಕಾಯ್ದು ನಿಂತಿರುತ್ತಾರೆ". ಹೀಗೆ ಹೇಳಿ ತಮ್ಮ ಪುಸ್ತಕದ ಚೀಲವನ್ನು ಕಟ್ಟಲು ಪ್ರಾರಂಭಮಾಡಿದರು. “ನಾನಿಲ್ಲಿ ನಿಮ್ಮ ಮುಂದೆ ಕಂಠಶೋಷಣೆ ಮಾಡಿಕೊಳ್ಳುವುದಕ್ಕಿಂತ ಇಲ್ಲಿಂದ ಹೊರಡುವುದೇ ಲೇಸು" ಎಂದು ಹೊರಡಲು ಸಿದ್ಧರಾದರು.

ಆಗ ಮಂಟಪದಲ್ಲಿ ತೀರಾ ಹಿಂದಿನ ಸಾಲಿನ ಕುರ್ಚಿಯಲ್ಲಿ ಕುಳಿತ್ತಿದ್ದವನೊಬ್ಬ ಎದ್ದು ಮುಂದೆ ಬಂದು ಕೈ ಮುಗಿದ, "ಮಹಾರಾಜ್ ನಾನು ಬಂದಿದ್ದೇನೆ. ತಮ್ಮ ಪ್ರವಚನ ಕೇಳಲೆಂದೇ ಬಂದಿದ್ದೇನೆ. ದಯವಿಟ್ಟು ನನಗೆ ಉಪದೇಶ ಮಾಡಿ. ಇದರಿಂದ ನನ್ನ ಜೀವನವೇ ಬದಲಾಗಬಹುದು" ಎಂದ. "ಛೇ ಛೇ ಕೇವಲ ನಿನಗೆ ನಾನು ಪ್ರವಚನ ನೀಡಲೇ?” ಎಂದು ಗುಡುಗಿದರು ಕೋಪದಿಂದ. ಆತ ಮತ್ತೆ ಅತ್ಯಂತ ವಿನಯದಿಂದ ಕೈ ಮುಗಿದು ಹೇಳಿದ, “ಮಹಾಸ್ವಾಮಿ, ನಾನೊಬ್ಬ ಹಳ್ಳಿ ಮುಕ್ಕ. ನನಗೆ ಯಾವ ಜ್ಞಾನವೂ ಇಲ್ಲ. ನನ್ನ ಹತ್ತಿರ ನೂರು ಕುರಿಗಳು ಇವೆ ಸ್ವಾಮಿ. ನೂರರಲ್ಲಿ ಒಂದು ಕುರಿ ಹುಲ್ಲು ತಿನ್ನದಿದ್ದರೂ ನನಗೆ ತುಂಬ ನೋವಾಗುತ್ತದೆ. ಅದಕ್ಕೆ ಹುಲ್ಲು ಹಾಕಿ, ನೀರು ಕುಡಿಸಿಯೇ ಮಲಗುತ್ತೇನೆ ಸ್ವಾಮಿ".

ಈ ಮಾತು ಗುರುಗಳಿಗೆ ತಟ್ಟಿತು. ಒಬ್ಬನಿದ್ದರೂ ಪ್ರವಚನ ಮಾಡಬೇಕು. ತಮ್ಮ ಮಾತಿನ ಪ್ರಭಾವದಿಂದ ಈ ಅಜ್ಞಾನಿಯ ಜೀವನವಾದರೂ ಸುಧಾರಿಸೀತು ಎಂದುಕೊಂಡು ಅವನನ್ನು ಮುಂದೆ ಕೂಡ್ರಿಸಿ ತಮ್ಮ ಪಾಂಡಿತ್ಯ ಪೂರ್ಣವಾದ ಪ್ರವಚನವನ್ನು ಸುಮಾರು ಎರಡು ತಾಸು ನೀಡಿದರು. ನಂತರ ಸಂತೋಷದಿಂದ ಕೇಳಿದರು, "ಏನಪ್ಪಾ, ನಿನಗೆ ತೃಪ್ತಿಯಾಯಿತೋ? ನಿನ್ನ ಜೀವನ ಬದಲಾಗಿ ಹೋಗುತ್ತದೆ ಎನ್ನಿಸಿತಲ್ಲ?" ಆತ ಮತ್ತೆ ವಿನಯದಿಂದ ಹೇಳಿದ, “ಪ್ರಭೂ, ತಮ್ಮ ಕೃಪೆ ನನ್ನ ಮೇಲಿರಲಿ. ತಮ್ಮ ಭಾಷಣ ಪೂರ್ತಿ ತಿಳಿಯಿತೆಂದು ಹೇಳುವ ಯೋಗ್ಯತೆ ನನಗೆಲ್ಲಿ? ನನ್ನ ಅಜ್ಞಾನವನ್ನು ಕ್ಷಮಿಸಬೇಕು. ತಮಗೆ ನಾನು ಮೊದಲು ಹೇಳಿದ್ದೆ, ಒಂದು ಕುರಿ ಹಸಿದಿದ್ದರೂ ಅದಕ್ಕೆ ಹುಲ್ಲು ತಿನ್ನಿಸಲೇಬೇಕು ಎಂದು. ಆದರೆ ನೂರು ಕುರಿಗಳ ಹುಲ್ಲನ್ನು ಒಂದೇ ಕುರಿಗೆ ತಿನ್ನಿಸಬೇಕೆಂದು ಹೇಳಿರಲಿಲ್ಲ ಸ್ವಾಮಿ" ಗುರುಗಳ ಮುಖ ಕಪ್ಪಿಟ್ಟಿತು.

“ನಾವು ಭಾರೀ ಭಾರೀ ಮಾತುಗಳನ್ನಾಡುವಾಗ ಮುಂದೆ ಕುಳಿತು ಕೇಳುವವರ ಬಗ್ಗೆ ಕರುಣೆ ಇರಬೇಕು. ನಾವು ಮಾತನಾಡಿದ್ದು ಕೇಳುವವರ ತಿಳುವಳಿಕೆಯ ಮಟ್ಟಕ್ಕೆ ಸರಿಯಾಗಿದೆಯೋ ಎಂದು ವಿಚಾರಿಸಿ ಹೇಳಬೇಕು. ಇದು ಮಾತಿಗೂ, ವ್ಯವಹಾರಕ್ಕೂ ಸಮಾನವಾಗಿ ಅನ್ವಯಿಸುತ್ತದೆ.”

ಕೃಪೆ: ಕರುಣಾಳು ಬಾ ಬೆಳಕೆ... (ಭಾಗ 8)

ಸಂಗ್ರಹ: ಶಿವು ಕಾರ್ಕಳ, ಚಿತ್ರ ಕೃಪೆ: ಇಂಟರ್ನೆಟ್ ತಾಣ