ಮಾನವನು ಆರೋಗ್ಯಕರ ಮತ್ತು ಸಕ್ರೀಯ ಜೀವನ ನಡೆಸಲು ಪೋಷಕಾಂಶಗಳ ಅಗತ್ಯವಿದೆ. ಪೋಷಕಾಂಶಗಳ ಪ್ರಮಾಣವು ವ್ಯಕ್ತಿಯ ವಯಸ್ಸು, ತೂಕ, ದೈಹಿಕ ಸ್ಥಿತಿ ಮತ್ತು ಕಾರ್ಯಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಪ್ರಮುಖ ಪೋಷಕಾಂಶಗಳಾದ ಶರ್ಕರ ಪಿಷ್ಟ, ಪ್ರೋಟೀನ್ ಹಾಗೂ ಕೊಬ್ಬುಗಳು ಹೇಗೆ ಅಗತ್ಯವೋ ವಿಟಮಿನ್ (ಜೀವಸತ್ವ) ಮತ್ತು ಖನಿಜಾಂಶಗಳು ಕೂಡ ಅವಶ್ಯಕವಾಗಿವೆ. ಇವುಗಳು ಕಡಿಮೆ ಪ್ರಮಾಣದಲ್ಲಿ ದೇಹಕ್ಕೆ ಬೇಕಾಗಿದ್ದರೂ ಕೂಡ ಅವುಗಳ ಪಾತ್ರ ಬಹುಮುಖ್ಯವಾಗಿವೆ. 

ವಿಟಮಿನ್‌ಗಳು ಜೈವಿಕ ಸಂಯುಕ್ತಗಳಾಗಿದ್ದು ದೇಹದ ವಿವಿಧ ರಾಸಾಯನಿಕ ಕಾರ್ಯಚಟುವಟಿಕೆಗೆ  ಅತ್ಯವಶ್ಯಕವಾಗಿವೆ. ಮುಖ್ಯ ಪೋಷಕ ಸತ್ವಗಳನ್ನು ದೇಹಕ್ಕೆ ಒದಗಿಸುವುದರೊಂದಿಗೆ, ರೋಗಗಳು ಬರದಂತೆ ತಡೆಗಟ್ಟುವುದು ಮತ್ತು ರೋಗಗಳಿಂದ ರಕ್ಷಿಸುವ ಕೆಲಸಗಳನ್ನೂ ಕೂಡ ಮಾಡುತ್ತವೆ. ಪ್ರತಿಯೊಂದು ವಿಟಮಿನ್‌ಗೂ ತನ್ನದೇ ಆದ ವಿಶೇಷ ಕಾರ್ಯವಿರುತ್ತದೆ. ವಿಟಮಿನ್‌ಗಳ ಕೊರತೆಯು ಗಂಭೀರವಾದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಎಲ್ಲರ ಆರೈಕೆ ಮಾಡುವ ಮಹಿಳೆಗೆ ತನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅಗತ್ಯವಾಗಿದೆ. ವಿಟಮಿನ್‌ಗಳ ಪೊರೈಕೆಯು ಅವಳ ಕಾರ್ಯಚಟುವಟಿಕೆ ಮತ್ತು ಪರಿಪೂರ್ಣ ಆರೋಗ್ಯಕ್ಕೆ ತುಂಬಾ ಮಹತ್ವದ್ದಾಗಿದೆ. ಅದರಲ್ಲಿಯೂ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ತಮ್ಮ ಆರೋಗ್ಯದೊಂದಿಗೆ ಮಗುವಿನ  ಆರೋಗ್ಯವೂ ಅವರ ಮೇಲೆ ಅವಲಂಬಿತವಾಗಿರುವುದರಿಂದ ವಿಶೇಷ ಕಾಳಜಿವಹಿಸಬೇಕಾಗಿದೆ. ವಿಟಮಿನ್ ಭರಿತವಾದ ಆಹಾರಗಳನ್ನು ಸೇವಿಸುವುದರಿಂದ ಮಹಿಳೆಯರ ಹಾಗೂ ಮಕ್ಕಳ ಶ್ರೇಯೋಭಿವೃದ್ದಿಗೆ ಒಳ್ಳೆಯದು.  ಈ ಲೇಖನದಲ್ಲಿ ವಿಟಮಿನ್‌ಗಳ ಬಗ್ಗೆ ವಿವರಿಸಲಾಗಿದೆ.

ವಿಟಮಿನ್‌ಗಳನ್ನು ಎರಡು ಭಾಗಗಳಾಗಿ ವರ್ಗೀಕರಿಸಲಾಗಿದೆ. ಒಂದು ಕೊಭ್ಬಿನಲ್ಲಿ ಕರಗುವ ವಿಟಮಿನ್‌ಗಳು: ಎ, ಡಿ, ಇ ಮತ್ತು ಕೆ. ಇವುಗಳನ್ನು ದೇಹದಲ್ಲಿ ಸಂಗ್ರಹಿಸಬಹುದಾಗಿದ್ದು , ಅಗತ್ಯವಿದ್ದಾಗ ವಿನಿಯೋಗಿಸಬಹುದು. ಇವುಗಳನ್ನು ದೇಹದಲ್ಲಿ ಹೀರಿಕೊಳ್ಳಲು ಎಣ್ಣೆಯಂಶವು ಅಗತ್ಯವಾಗಿದೆ. 

ಎರಡನೆಯದ್ದು, ನೀರಿನಲ್ಲಿ ಕರಗುವ ವಿಟಮಿನ್‌ಗಳು: ಬಿ ಮತ್ತು ಸಿ. ಇವುಗಳನ್ನು ದೇಹದಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ ಹಾಗೂ ಹೆಚ್ಚಿನ ಪ್ರಮಾಣವು ದೇಹದಿಂದ (ಬೆವರು/ಮೂತ್ರ) ವಿಸರ್ಜನೆಯಾಗುತ್ತದೆ. ಇವು ಶಾಖದಿಂದ ನಶಿಸಿಹೋಗುತ್ತವೆ ಹಾಗಾಗಿ ಆಹಾರ ಸಂಸ್ಕರಣೆ ಮತ್ತು ಆಹಾರ ತಯಾರಿಕೆಯಿಂದ ಇವುಗಳ ಪ್ರಮಾಣ ಕಡಿಮೆಯಾಗುತ್ತದೆ.

ವಿಟಮಿನ್ ಎ: ಸಾಮಾನ್ಯ ದೃಷ್ಟಿಗೆ ವಿಟಮಿನ್ ಎ ಅಗತ್ಯವಾಗಿದ್ದು ಸದೃಡ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ವಿಟಮಿನ್ ಎ ರೋಗನಿರೋಧಕ ಶಕ್ತಿಯ(ಅಂಟಿ ಆಕ್ಸಿಡೆಂಟ್) ಗುಣ ಹೊಂದಿರುತ್ತದೆ. ದೀರ್ಘಕಾಲಿಕ ಅನಾರೋಗ್ಯದ ಅಪಾಯ ಕಡಿಮೆ ಮಾಡಿ, ವಯಸ್ಸಾಗುವ ಪ್ರಕ್ರಿಯೆಯನ್ನು ಕಡಿಮೆ ಮಾಡುವುದಲ್ಲದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಹಸಿರು ಸೊಪ್ಪುಗಳು, ಗಜ್ಜರಿ (ಕ್ಯಾರೆಟ್), ಕುಂಬಳಕಾಯಿ, ಅಪ್ರಿಕಾಟ್, ಪೇರಳೆ, ಬ್ರೊಕೋಲಿ, ಪಪ್ಪಾಯಿ, ಮಾವಿನಹಣ್ಣು, ಪೀಚ್, ಕೆಂಪು ಮೆಣಸು, ಮೊಟ್ಟೆಯ ಹಳದಿ ಭಾಗ, ಹಾಲು, ಬೆಣ್ಣೆ ಮತ್ತು ಧಾನ್ಯಗಳಲ್ಲಿ ವಿಟಮಿನ್ ಎ ಹೇರಳವಾಗಿರುತ್ತದೆ.

ವಿಟಮಿನ್ ಡಿ: ಮೂಳೆ ಹಾಗೂ ಹಲ್ಲುಗಳ ಬಲಿಷ್ಠತೆಗೆ ಬೇಕಾದ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಸಂಧಿವಾತ ಹಾಗೂ ಹಲವು ಬಗೆಯ ಕ್ಯಾನ್ಸರಗಳನ್ನು ತಡೆಗಟ್ಟಲು ಸಹಾಯಕಾರಿ. ಋತುಚಕ್ರಪೂರ್ವದ ರೋಗಲಕ್ಷಣಗಳನ್ನು ನಿಯಂತ್ರಿಸಿ, ದೃಷ್ಟಿಯನ್ನು ಉತ್ತಮವಾಗಿಸುತ್ತದೆ. ಇದರ ಕೊರತೆಯು ಮೂಳೆಗಳನ್ನು ದುರ್ಬಲವಾಗಿಸಿ ಆಸ್ಟಿಯೋಪೊರೋಸಿಸ್ (ಅಸ್ಥಿರಂಧ್ರತೆ, ಮೆದುಮೊಳೆರೋಗ) ಕಾರಣವಾಗುತ್ತದೆ. ಸೂರ್ಯನ ಬಿಸಿಲಿನಿಂದ ದೇಹಕ್ಕೆ ಬೇಕಾಗುವ ವಿಟಮಿನ್ ‘ಡಿ’ಯನ್ನು ಪಡೆಯಬಹುದು. ನಿತ್ಯ ೧೦-೧೫ ನಿಮಿಷ ಬಿಸಿಲಿಗೆ ತೆರೆದುಕೊಳ್ಳುವುದು ವಿಟಮಿನ್ ಡಿ ಉತ್ಪತ್ತಿಗೆ ಸಾಕು. ಇದರ ಜೊತೆಗೆ ಮೀನು, ಬೆಣ್ಣೆ, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಮೊಟ್ಟೆ ಮುಂತಾದ ವಿಟಮಿನ್ ಡಿ ಹೇರಳವಾಗಿರುವ ಪದಾರ್ಥಗಳನ್ನು ಮಹಿಳೆಯರು ಸೇವಿಸಬೇಕು.

ವಿಟಮಿನ್ ಇ: ಇದು ಪ್ರಮುಖ ಅಂಟಿ ಆಕ್ಸಿಡೆಂಟ್ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಶಕ್ತಿಹೊಂದಿದ್ದು, ಇದಕ್ಕೆ ಕಾರಣವಾಗುವ ಜೀವಕೋಶಗಳ ಹಾನಿಯನ್ನು ತಡೆಗಟ್ಟುತ್ತದೆ. ಕೆಂಪು ರಕ್ತಕಣಗಳ ಉತ್ಪತ್ತಿಗೆ ಶರ್ಕರಪಿಷ್ಟ ಮತ್ತು ಕೊಬ್ಬುಗಳಿಂದ ಶಕ್ತಿಯನ್ನು ಪಡೆಯಲು ಸಹಾಯಕವಾಗಿದೆ. ಚರ್ಮದ ಕಾಂತಿ ಹೆಚ್ಚಿಸಲು ಹಾಗೂ ಕೂದಲಿನ ಬೆಳವಣಿಗೆ ಮತ್ತು ಆರೋಗ್ಯಕ್ಕಾಗಿ ವಿಟಮಿನ್ ಇ ಅವಶ್ಯವಾಗಿದೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಸಸ್ಯಜನ್ಯ ಎಣ್ಣೆಗಳು ವಿಟಮಿನ್ ಇಯನ್ನು ಹೊಂದಿರುತ್ತವೆ. ಇವುಗಳಲ್ಲದೇ ಸಿಪ್ಪೆ ತಗೆಯದ ಸಂಪೂರ್ಣ ಕಾಳುಗಳು, ದಟ್ಟ ಹಸಿರು ಬಣ್ಣದ ಸೊಪ್ಪಿನ ತರಕಾರಿಗಳು, ಬಾದಾಮಿ, ಸೂರ್ಯಕಾಂತಿಯAತಹ  ಎಣ್ಣೆ ಕಾಳುಗಳು ವಿಟಮಿನ್ ಇಯು ಉತ್ತಮ ಮೂಲಗಳಾಗಿವೆ.

ವಿಟಮಿನ್ ಕೆ: ರಕ್ತಹೆಪ್ಪುಗಟ್ಟುವಿಕೆ ಹಾಗೂ ಸದೃಡ ಮೂಳೆಗೆ ಸಹಕಾರಿಯಾಗಿದ್ದು, ಹಲವು ಬಗೆಯ ಹೃದ್ರೋಗವನ್ನು ತಡೆಗಟ್ಟುತ್ತದೆ. ಪ್ರತಿ ರಕ್ಷಣಾ ಕಾರ್ಯಕ್ಕೆ ಈ ಮಿಟಮಿನ್ ಅವಶ್ಯಕ. ಪ್ರಮುಖ ಆಹಾರವೆಂದರೆ ಕಾಳಿನ ಆಹಾರ ಉತ್ಪನ್ನಗಳು. ಹಸಿರು ಸೊಪ್ಪು-ತರಕಾರಿ ಮತ್ತು ಮೀನೆಣ್ಣೆ. 

(ಇನ್ನೂ ಇದೆ)

ಮಾಹಿತಿ ಕೃಪೆ: ಈರಮ್ಮ ವಿ. ಗೌಡರ ಮತ್ತು ರೂಪಾ ಯು.ಕೃಷಿ ವಿಶ್ವ ವಿದ್ಯಾಲಯ, ಧಾರವಾಡ

ಚಿತ್ರ ಕೃಪೆ: ಅಂತರ್ಜಾಲ ತಾಣ