ವಿಟಮಿನ್ ಬಿ೧ (ಥಯಾಮಿನ್): ವಿಟಮಿನ್ ಬಿ೧ ಅನ್ನು ಥಯಾಮಿನ್ ಎಂದೂ ಕರೆಯಲಾಗುತ್ತದೆ. ಇದು ಶರ್ಕರ ಪಿಷ್ಟಗಳ ಜೀರ್ಣಕ್ರಿಯೆಯಲ್ಲಿ ಮುಖ್ಯ ಕಾರ್ಯ ನಿರ್ವಹಿಸುತ್ತದೆ. ಹೃದಯ ನಾಳ, ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸಲು ಇದು ಬಹು ಮುಖ್ಯವಾಗಿದೆ. ಮೆದುಳಿನ ಕಾರ್ಯ ನಿರ್ವಹಣೆಗೂ ಸಹಿತ ಈ ವಿಟಾಮಿನ್ ಅಗತ್ಯವಾಗಿದೆ. ತೂಕ ನಷ್ಟ, ಹೃದಯ ವ್ಯಾದಿ, ತೀವ್ರ ಬಳಲಿಕೆ, ನರಹಾನಿ, ಮಾನಸಿಕ ಮತ್ತು ಸ್ನಾಯು ದೌರ್ಬಲ್ಯಗಳು ಥಯಾಮಿನ್ ಕೊರತೆಯಿಂದ ಉಂಟಾಗುತ್ತವೆ. ಸಿಪ್ಪೆ ತಗೆಯದ ಸಂಪೂರ್ಣ ಕಾಳುಗಳು, ಬೇಳೆಕಾಳು, ಎಣ್ಣೆ ಕಾಳುಗಳು ಪ್ರಮುಖವಾಗಿ ಶೇಂಗಾ, ಯೀಸ್ಟ , ಓಟ್ಸ್ ಮತ್ತು ಬಾರ್ಲಿಗಳಲ್ಲಿ ಥಯಾಮಿನ್ ಹೇರಳವಾಗಿರುತ್ತವೆ.

ವಿಟಮಿನ್ ಬಿ೨ (ರೈಬೋಪ್ಲೇವಿನ್): ಶರ್ಕರ ಪಿಷ್ಟ, ಪ್ರೋಟೀನ್ ಹಾಗೂ ಕೊಬ್ಬುಗಳಿಂದ ಶಕ್ತಿಯನ್ನು ಪಡೆಯಲು ಸಹಕಾರಿಯಾಗಿದೆ. ಸಾಮಾನ್ಯ ಬೆಳವಣಿಗೆಗೆ ಚಯಾಪಚಯ, ಉತ್ತಮ ಆರೋಗ್ಯಕ್ಕೆ ವಿಟಮಿನ್ ಬಿ೨ ಪೂರಕ. ಶಕ್ತಿವರ್ಧಕವಾಗಿದ್ದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಜುಮ್ಮೆನಿಸುವಿಕೆ, ಜೋಮು, ಆತಂಕ, ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಬಿ೨ ಕೊರತೆಯು ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರಿ, ಪ್ರತಿರಕ್ಷಣ ಹಾಗೂ ನರವ್ಯೂಹದ ಕಾರ್ಯವೈಖರಿಯಲ್ಲಿ ವ್ಯತ್ಯಾಸವುಂಟುಮಾಡುತ್ತದೆ. ಇದರಿಂದ ನಿಸ್ತೇಜ ಕಣ್ಣು-ನಾಲಿಗೆ, ಗಂಟಲು ಕೆರೆತ, ಬಾಯಿಹುಣ್ಣು, ತುಟಿ ಬಿರುಕು, ಶುಷ್ಕ ಕೂದಲು, ಚರ್ಮದ ತುರಿಕೆ ಮತ್ತು ಸುಕ್ಕು ಉಂಟಾಗುತ್ತದೆ. 

ವಿಟಮಿನ್ ಬಿ೨ : ಯೀಸ್ಟ, ಹಾಲು, ಮೊಸರು, ಮಾಂಸ, ಮೊಟ್ಟೆ, ಹಸಿರು ಸೊಪ್ಪುಗಳಲ್ಲಿ ಹೇರಳವಾಗಿರುತ್ತವೆ. ಕಾಳುಗಳಲ್ಲಿ ಕಡಿಮೆ ವಿಟಮಿನ್ ಬಿ೨ ಇದ್ದರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಸೇವಿಸುವುದರಿಂದ ಕಾಳುಗಳು ಪ್ರಮುಖ ಮೂಲಗಳಾಗಿವೆ. 

ವಿಟಮಿನ್ ಬಿ೩ (ನಯಾಸಿನ್): ಪ್ರಮುಖ ಪೋಷಕಾಂಶಗಳಾದ ಶರ್ಕರ ಪಿಷ್ಟ, ಪ್ರೋಟೀನ್ ಹಾಗೂ ಕೊಬ್ಬುಗಳಿಂದ ಶಕ್ತಿಯನ್ನು ಪಡೆಯಲು ಮುಖ್ಯಪಾತ್ರವಹಿಸುತ್ತದೆ. ಚರ್ಮ, ಅನ್ನನಾಳ ಹಾಗೂ ನರಮಂಡಲದ ಕಾರ್ಯನಿರ್ವಹಣೆಗೂ ಸಹಿತ ಈ ವಿಟಮಿನ್ ಅತ್ಯಗತ್ಯವಾಗಿದೆ. ಮಾಂಸ, ಮೀನು ಹಾಗೂ ಶೇಂಗಾ ಅತ್ಯುತ್ತಮ ಮೂಲಗಳಾಗಿವೆ. ಸಿಪ್ಪೆ ತಗೆಯದ ಸಂಪೂರ್ಣ ಧಾನ್ಯಗಳಲ್ಲಿ ವಿಟಮಿನ್ ಬಿ೩ ತಕ್ಕಮಟ್ಟಿಗೆ ಇರುತ್ತದೆ.ಮೊಳಕೆ ಬರಿಸುವುದರಿಂದ ಹಾಗೂ ಹುದುಗುವಿಕೆಯಿಂದ ನಯಾಸಿನ್ ಪ್ರಮಾಣ ಹೆಚ್ಚಳವಾಗುತ್ತದೆ.

ವಿಟಮಿನ್ ಬಿ೬ (ಪಿರಿಡೊಕ್ಸಿನ್) : ಇದು ಅಮೈನೋ ಆಮ್ಲಗಳ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಆರೋಗ್ಯ ಪ್ರತಿರಕ್ಷಣಾ ವ್ಯವಸ್ಥೆಗೆ ಅಗತ್ಯ. ಖಿನ್ನತೆ, ಹೃದ್ರೋಗ, ನೆನಪಿನ ಶಕ್ತಿ  ಕುಂದುವಿಕೆಯನ್ನು ತಡೆಗಟ್ಟುವ ಹಾರ್ಮೋನ್ ಉತ್ಪತ್ತಿ ಮತ್ತು ಮೆದುಳಿನ ರಾಸಾಯನಿಕಗಳ ಉತ್ಪಾದನೆಗೆ ಪೂರಕವಾಗಿರುತ್ತದೆ. ರಕ್ತದ ಸಕ್ಕರೆ ಮಟ್ಟವನ್ನೂ ನಿಯಂತ್ರಿಸುತ್ತದೆ. ಗರ್ಭಿಣಿಯರಿಗೆ ಉಂಟಾಗುವ ಬೆಳಗಿನ ಕಾಯಿಲೆ ನಿಯಂತ್ರಣಕ್ಕೆ ವಿಟಮಿನ್ ಬಿ೬ ಇರುವ ಆಹಾರ ಸೇವಿಸಬೇಕು. ಇದರ ಕೊರತೆಯಿಂದಾಗಿ ರಕ್ತಹೀನತೆ ಉಂಟಾಗುತ್ತದೆ. ಮಾಂಸ, ಬೇಳೆಕಾಳುಗಳು, ಗೋದಿ, ಬಾಳೆಹಣ್ಣು, ಬೀನ್ಸ್, ಮೀನು, ಒಟ್ ಮೀಲ್, ಎಣ್ಣೆ ಕಾಳುಗಳು ಮತ್ತು ಒಣಹಣ್ಣುಗಳಲ್ಲಿ ಬಿ೬ ಹೇರಳವಾಗಿರುತ್ತದೆ.

ವಿಟಮಿನ್ ಬಿ೭(ಬಯೊಟಿನ್): ಬಯೊಟಿನ್ (ಬಿ೭) ಜೀವಕೋಶ ಬೆಳವಣಿಗೆ ಹಾಗೂ ಕೊಬ್ಬಿನ ಆಮ್ಲಗಳ ಸಂಶ್ಲೇಷಣೆಗೆ ಅವಶ್ಯಕ. ಇದು ಬೆವರು ಗ್ರಂಥಿಗಳು, ಚರ್ಮವನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಕೂದಲ ಬೆಳವಣಿಗೆ ಹಾಗೂ ಉಗುರುಗಳ ಆರೋಗ್ಯಕ್ಕೆ ನೆರವಾಗುತ್ತದೆ. ಮೂಳೆ ಬೆಳವಣಿಗೆ, ಮೂಳೆ  ಮಜ್ಜೆ ಮತ್ತು ಸಾಮಾನ್ಯ ಕೊಲೆಸ್ಟರಾಲ್ ಪ್ರಮಾಣ ಕಾಯ್ದುಕೊಳ್ಳಲು ಸಹಾಯಕ.ವಿಟಮಿನ್ ಬಿ೭ ಕೊರತೆಯುಂಟಾಗುವುದು ಅಪರೂಪವಾದರೂ, ಕೊರತೆಯಿಂದ ಸೀಳು ಕೂದಲು, ದದ್ದು, ಹೃದಯ ಕಾರ್ಯದಲ್ಲಿ ಏರುಪೇರು, ಆಲಸ್ಯ, ರಕ್ತ ಹೀನತೆ, ಸಣ್ಣಪ್ರಮಾಣದ ಖಿನ್ನತೆ ಉಂಟಾಗುತ್ತದೆ. 

ಮೀನು, ಗೆಣಸು, ಬಾದಾಮಿ, ಗಜ್ಜರಿ, ಬಾಳೆಹಣ್ಣು, ಹಳದಿಹಣ್ಣುಗಳು, ಹಸಿರು ಸೊಪ್ಪು, ಅವರೆಕಾಳು, ಕೆಂಪು ಅಕ್ಕಿ, ಮೆಣಸು, ಮೊಟ್ಟೆ,, ಸೊಯಾಬೀನ್, ಹಾಲು, ಗಿಣ್ಣು, ಮೊಸರು, ನಟ್ಸ್ ಮುಂತಾದವುಗಳಲ್ಲಿ ಬಿ೭ ಇದೆ. 

ವಿಟಮಿನ್ ಬಿ ೯(ಫೊಲಿಕ್ ಅಸಿಡ್): ಇದು ಹಲವಾರು ಚಯಾಪಚಯ ಕ್ರಿಯೆಗಳಲ್ಲಿ ಮತ್ತು ಡಿ.ಎನ್.ಎ ಮತ್ತು ಆರ್.ಎನ್.ಎ ಉತ್ಪಾದನೆಯಲ್ಲಿ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಬಿ೧೨ ನೊಂದಿಗೊಡಗೂಡಿ ಕೆಂಪು ರಕ್ತ ಕಣಗಳ ಉತ್ಪಾದನಾ ಕಾರ್ಯದಲ್ಲಿ ಅಗತ್ಯವಾಗಿದೆ. ಗರ್ಭಿಣಿಯರಲ್ಲಿ ಇದರ ಅವಶ್ಯಕತೆ ಹೆಚ್ಚಾಗಿದ್ದು ವಿಟಮಿನ್ ಬಿ ೯ ಕೊರತೆಯಿಂದ ಮಗುವಿನಲ್ಲಿ ನರವ್ಯೂಹಗಳ ತೊಂದರೆಯುಂಟಾಗುತ್ತದೆ. ಹೃದ್ರೋಗ, ರಕ್ತದ ಏರೊತ್ತಡ. ಅಲ್ಜಿಮರ್, ಖಿನ್ನತೆ, ಕ್ಯಾನ್ಸರ್, ನೆನಪು ಕ್ಷೀಣಿಸುವಿಕೆಯನ್ನು ತಡೆಯುವ ಪ್ರಯುಖ ಮೂಲವಾಗಿದ್ದು, ಎಲ್ಲ ಮಹಿಳೆಯರಿಗೂ ಅತ್ಯವಶ್ಯ. ಮೆದುಳಿನ ಕಾರ್ಯಕ್ಷಮತೆ, ಜೀವಕೋಶಗಳ ಕಾರ್ಯನಿರ್ವಹಣಿ ಹೆಚ್ಚಿಸಿ, ಫಲವತ್ತತೆ ಹಾಗೂ ಭ್ರೂಣ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ. ದಟ್ಟ ಹಸಿರು ಎಲೆಗಳ ತರಕಾರಿಗಳು, ಕಿತ್ತಳೆ ರಸ, ಕಲ್ಲಂಗಡಿ, ಸ್ಟಾçಬೆರಿ, ದ್ವಿದಳ ಧಾನ್ಯ, ಬೀನ್ಸ, ಯೀಸ್ಟ್ ಮತ್ತು ಮೊಟ್ಟೆಯಲ್ಲಿ ಬಿ೯ ಹೇರಳವಾಗಿರುತ್ತದೆ.

ವಿಟಮಿನ್ ಬಿ೧೨ (ಕೊಬಲಾಮಿನ್): ಮಹಿಳೆಯರಲ್ಲಿ ರಕ್ತಹೀನತೆಯನ್ನು ತಡೆಗಟ್ಟುವುದಲ್ಲದೇ ಚಯಾಪಚಯ, ಸಾಮಾನ್ಯ ಜೀವಕೋಶ ವಿಭಜನೆಗೆ ಮುಖ್ಯ. ಹೃದ್ರೋಗ, ನೆನಪು ಕ್ಷೀಣಿಸುವಿಕೆಯನ್ನು ತಡೆಗಟ್ಟುತ್ತದೆ. ಖಿನ್ನತೆ ನಿವಾರಣೆ, ಆರೋಗ್ಯಕರ ನರವ್ಯವಸ್ಥೆ ಮತ್ತು ಮೆದುಳಿನ ಕಾರ್ಯಕ್ಷಮತೆ ವೃದ್ಧಿಗೆ ಅವಶ್ಯಕ. ಇದರ ಕೊರತೆಯಿಂದ ಸಿಡುಕುತನ, ಖಿನ್ನತೆ ಮತ್ತು ಗೊಂದಲದ ಸ್ಥಿತಿ ಉಂಟಾಗುತ್ತದೆ. ನಾಲಿಗೆ ಮತ್ತು ಬಾಯಿ ಉರಿಯೂತವುಂಟಾಗುತ್ತದೆ. ಇದು ಪ್ರಾಣಿಜನ್ಯ ಆಹಾರಗಳಲ್ಲಿ ಮಾತ್ರ ದೊರೆಯುವುದು. ಗಿಣ್ಣು, ಮೊಟ್ಟೆ, ಮೀನು, ಮಾಂಸ, ಹಾಲು, ಮೊಸರು, ಉಪಹಾರ ಧಾನ್ಯಗಳಲ್ಲಿ ಬಿ೧೨ ಹೇರಳವಾಗಿರುತ್ತದೆ.

ವಿಟಮಿನ್ ಸಿ (ಅಸ್ಕರ‍್ಬಿಕ್ ಅಸಿಡ್): ಇದನ್ನು ಶಕ್ತಿವರ್ಧಕ ಜೀವಸತ್ವವೆನ್ನುತ್ತಾರೆ. ಮಹಿಳೆಯರಿಗಂತೂ ಹಲವಾರು ಆರೋಗ್ಯಲಾಭಗಳಿವೆ, ಶೀಘ್ರ ಶಮನಕಾರಿಯಾಗಿದ್ದು, ಅಂಗಾಂಶ ಬೆಳವಣಿಗೆಯನ್ನು ಉತ್ತೇಜಿಸಿ ಹಲವು ಬಗೆಯ ಕ್ಯಾನ್ಸರ್ ಮತ್ತು ಹೃದ್ರೋಗ ಮತ್ತು ಅಂಗಾಂಶ ಹಾನಿಯನ್ನು ತಡೆಗಟ್ಟುತ್ತದೆ. ಕಬ್ಬಿಣಾಂಶದ ಹೀರುವಿಕೆಗೆ ಸಹಕಾರಿಯಾಗಿರುವುದರಿಂದ ಕೆಂಪು ರಕ್ತಕಣಗಳ ರಚನೆಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಬೆಟ್ಟದ ನೆಲ್ಲಿ, ತಾಜಾ ಕಾಯಿಪಲ್ಲೆ, ಮೊಳಕೆಕಾಳು, ಪೇರಲ, ಬ್ರೊಕೊಲಿ, ದ್ರಾಕ್ಷಿ, ಕಿವಿ, ಕಿತ್ತಳೆ, ಮೆಣಸಿನಕಾಯಿ, ಬಟಾಟೆ, ಸ್ಟ್ರಾಬೆರಿ ಹಾಗೂ ಟೊಮ್ಯಾಟೊದಲ್ಲಿ ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿ ಲಭ್ಯವಿರುತ್ತದೆ. ಮಾಂಸಹಾರದಲ್ಲಿ ವಿಟಮಿನ್ ಸಿ ಇರುವುದಿಲ್ಲ.

ನಮ್ಮ ದಿನನಿತ್ಯದ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಹಣ್ಣು, ಹಸಿರು ಸೊಪ್ಪು ಮತ್ತು ತರಕಾರಿ ಸೇವಿಸುವುದರಿಂದ ಎಲ್ಲ ಬಗೆಯ ಅವಶ್ಯಕ ವಿಟಮಿನ್‌ಗಳು ದೊರೆಯುತ್ತವೆ. ಆಹಾರದಲ್ಲಿ ಸಾಕಷ್ಟು ವಿಟಮಿನ್ ಸಿ ದೊರೆಯುತ್ತಿಲ್ಲವಾದರೆ ವಿಟಮಿನ್ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಬಹುದಾಗಿದ್ದು, ವೈದ್ಯರ ಸಲಹೆ ಪಡೆಯುವದು ಅಗತ್ಯ.

ಇಂದಿನ ಜನಾಂಗ ಆರೋಗ್ಯದತ್ತ ಹೆಚ್ಚಿನ ಕಾಳಜಿಯುಳ್ಳವರಾಗಿದ್ದು, ಆರೋಗ್ಯಕರ ಆಹಾರ ಯೋಜನೆಯನ್ನು ಅನುಸರಿಸುತ್ತಾರೆ. ಎಲ್ಲಾ ಜೀವಸತ್ವಗಳನ್ನೊಳಗೊಂಡ ಉತ್ತಮ ಆಹಾರವೇ ಆರೋಗ್ಯಕ್ಕೆ ಪೂರಕ. ಯಾವುದೇ ವಯಸ್ಸಿನವರಾಗಿರಲಿ ಅವರ ತೂಕ, ಚಟುವಟಿಕೆಗಳಿಗೆ ಅನುಗುಣವಾಗಿ ಸಾಕಷ್ಟು ಪ್ರಮಾಣ ಹಾಗೂ ವೈವಿದ್ಯಮಯ ಜೀವಸತ್ವಗಳನ್ನು ಸೇವಿಸುವುದು ಅತ್ಯವಶ್ಯ. ಈ ಅಭ್ಯಾಸವು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುತ್ತವೆ. ಆದ್ದರಿಂದ ಉತ್ತಮ ಆರೋಗ್ಯಕ್ಕೆ ಹಾಗೂ ಬೆಳವಣಿಗೆಗೆ ಹಣ್ಣು, ತರಕಾರಿ ಹಾಗೂ ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ.

ಮಾಹಿತಿ ಕೃಪೆ: ಈರಮ್ಮ ವಿ. ಗೌಡರ ಮತ್ತು ರೂಪಾ ಯು.ಕೃಷಿ ವಿಶ್ವ ವಿದ್ಯಾಲಯ, ಧಾರವಾಡ

ಚಿತ್ರ ಕೃಪೆ: ಅಂತರ್ಜಾಲ ತಾಣ