ಜಾರಿಕೊಳ್ಳುವವರ ನಡುವೆ ಏನನ್ನೂ ಹೇಳಬೇಡ

ಮತ್ತೆ ಜನರೆದುರಲ್ಲಿ ಮರ್ಯಾದೆ ಕಳಕೊಳ್ಳಬೇಡ

 

ಮಾತು ಬದಲಾಯಿಸುವ ಜನರನ್ನು ದೂರವಿಡು

ಅಂಥವರ ಸಹವಾಸ ಬೇಡವೆಂದು ಮರೆತುಬಿಡು

 

ಜೀವನದ ಕತೆಗಳಲ್ಲೇ ನೂರಾರು ಸಮಸ್ಯೆಗಳಿವೆ

ಪರಿಹಾರ ಕಂಡುಕೊಂಡರೆ ಬಾಳಿಗೆ ನೆಮ್ಮದಿಗಳಿವೆ

***

ಒಂದು ಗಝಲ್

ದೂರುವುದೇ ಅವರ ಚಟವಾದರೆ ದೂರ ಇದ್ದು ಬಿಡು

ಬೈಯುವುದೇ ಹಲವರ ಕೆಲಸವಾದರೆ ದೂರ ಇದ್ದು ಬಿಡು

 

ಕನಸಿಲ್ಲದವರ ಜೊತೆಗೇ ಹಾಗೆ ಹೀಗೆ ಸಾಗುವುದು ಯಾಕೊ

ತಾವೆನ್ನುವುದೇ ಅಂತಿಮ ದಿಟವಾದರೆ ದೂರ ಇದ್ದು ಬಿಡು

 

ಯಾತ್ರೆಗಳು ಜನರಿಗೆ ಏನನ್ನು ತಿಳಿಸಿ ಕೊಡುವುದೋ  ತಿಳಿಯೆ

ಹುಳಿಹಿಂಡಿದ್ದೇ ಮನದಾಳದಿ ಗೆಲುವಾದರೆ ದೂರ ಇದ್ದು ಬಿಡು

 

ತನ್ನ ನುಡಿಯೇ ವೇದವಾಕ್ಯವು ಎನ್ನುವವರಿಗೆ ನಾನು ಏನನ್ನಲಿ 

ನನ್ನಿಂದಲೇ ಎಲ್ಲಾ ಎನ್ನುವರದ್ದೇ ಹಟವಾದರೆ ದೂರ ಇದ್ದು ಬಿಡು

 

ನೆಮ್ಮದಿ ಹುಡುಕಿ ಹೋಗುವವರ ಕಡೆಗೊಮ್ಮೆ ನೋಡುತಿರು ಈಶಾ

ದ್ವೇಷದ ನೋವೇ ಬೇರೆಯವರಿಗೆ ಫಲವಾದರೆ ದೂರ ಇದ್ದು ಬಿಡು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ