ರಾಜಕೀಯ ಪಕ್ಷಗಳು ಹಿಂದೆಲ್ಲಾ ಚುನಾವಣೆ ವೇಳೆ ನೀಡುತ್ತಿದ್ದ ಭರವಸೆಗಳು ದೂರಾಲೋಚನೆಯ, ದೇಶಕಟ್ಟುವ, ಉದ್ಯೋಗಸೃಷ್ಟಿಯ, ಮೂಲಸೌಕರ್ಯ ಅಭಿವೃದ್ಧಿ ಮೊದಲಾದ ಅಭಿವೃದ್ಧಿ ಪೂರಕ ಅಂಶ ಒಳಗೊಂಡಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಪಕ್ಷಗಳು ನೀಡುತ್ತಿರುವ ಭರವಸೆ ಆತಂಕ ಹುಟ್ಟಿಸುವಂತಿವೆ. ಅಧಿಕಾರ ಹಿಡಿಯಲು ಏನು ಬೇಕಾದರೂ ಘೋಷಣೆಗೆ ಸಿದ್ದ ಎಂಬ ಮನಸ್ಥಿತಿ ಪಕ್ಷಗಳನ್ನು ಆವರಿಸಿರುವುದು ಆತಂಕಕಾರಿ ಬೆಳವಣಿಗೆ. ರಾಜ್ಯಗಳ ಸಂಪನ್ಮೂಲವನ್ನೇ ಬರಿದು ಮಾಡುವ, ಅಭಿವೃದ್ಧಿಗೆ ಹಣವನ್ನೇ ಉಳಿಸದ ಯೋಜನೆಗಳನ್ನು ಘೋಷಿಸುವ ಇಂಥ ಕ್ರಮಗಳು ದೇಶದ ಭವಿಷ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ. ಬಿಹಾರದಲ್ಲಿ ವಿಪಕ್ಷವೊಂದು ಗುರುವಾರ ಮಾಡಿದ ಘೋಷಣೆ ಇದಕ್ಕೊಂದು ಉದಾಹರಣೆ. ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ ನೀಡುವ ರಾಷ್ಟ್ರೀಯ ಜನತಾ ದಳ ಪಕ್ಷ ಭರವಸೆ ಮೇಲ್ನೋಟಕ್ಕೆ ಕಾರ್ಯ ಸಾಧುವಲ್ಲ ಎಂದು ಕಂಡುಬರುತ್ತದೆ.
ಅನ್ಯ ರಾಜ್ಯಗಳ ತೆರಿಗೆ ಕೊಡುಗೆಯನ್ನೇ ನಂಬಿರುವ ಬಿಹಾರ, ಆ ಹಣಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಭರವಸೆ ನೀಡಬೇಕು. ಅಂದಾಜು ೧೩ ಕೋಟಿ ಜನಸಂಖ್ಯೆಯ ಬಿಹಾರ ದಲ್ಲಿ ಕುಟುಂಬಗಳ ಸಂಖ್ಯೆ ೩ ಕೋಟಿಯಷ್ಟಿದೆ. ಪ್ರತಿ ಕುಟುಂಬಕ್ಕೆ ಒಂದು ಖಾತರಿ ಸರ್ಕಾರಿ ಉದ್ಯೋಗವೆಂದರೆ ಕನಿಷ್ಠ ೨ ಕೋಟಿ ಗಿಂತ ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕು. ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲದ ಮಾತು. ಬಿಹಾರದ ೩ ಕೋಟಿ ಕುಟುಂಬಗಳ ಪೈಕಿ ೧ ಕೋಟಿ ಕುಟುಂಬಗಳ ಮಾಸಿಕ ಆದಾಯ ಐದು ಸಾವಿರ ರು.ಗಿಂತಲೂ ಕಡಿಮೆ ಇದೆ. ರಾಜ್ಯದ ಸರಾಸರಿ ತಲಾದಾಯ ೬೫,೦೦೦ರು. ಇದು ರಾಷ್ಟ್ರೀಯ ಸರಾಸರಿಗಿಂತ ಬಹಳ ಕಡಿಮೆ. ಹಲವು ದಶಕಗಳಿಂದ ರಾಜ್ಯದಲ್ಲಿ ಹೊಸ ಉದ್ಯೋಗ ಸೃಷ್ಟಿಯ ಯಾವುದೇ ಯತ್ನ ನಡೆದಿಲ್ಲ. ಬಿಮಾರು ರಾಜ್ಯ ಎಂಬ ಹಣೆಪಟ್ಟಿ ಕಳಚಲು ಅಲ್ಲಿನ ಪಕ್ಷಗಳು, ನೇತಾರರು ಯಾವುದೇ ಗಂಭೀರ ಪ್ರಯತ್ನ ನಡೆಸಿಲ್ಲ. ಹಿಂಸಾಚಾರ, ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದ್ದ ರಾಜ್ಯದಲ್ಲಿ ಹಿಂಸೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂಬುದನ್ನು ಬಿಟ್ಟರೆ ಬೇರೇನೂ ಬೆಳವಣಿಗೆ ಕಂಡುಬಂದಿಲ್ಲ. ಕಟ್ಟುತ್ತಲೇ ಕುಸಿಯುವ ಸೇತುವೆಗಳು, ರಾಜಕಾರಣಿಗಳ ಸಾಲು ಸಾಲು ಹಗರಣವೇ ಈಗಲೂ ಬಿಹಾರದಿಂದ ನಿತ್ಯವೂ ಕೇಳಿಬರುವ ಸುದ್ದಿ. ಆದಾಯ ವಿಷಯದಲ್ಲೂ ಬಿಹಾರ ರಾಜ್ಯ ದೇಶದಲ್ಲಿ ಅತ್ಯಂತ ಹಿಂದುಳಿದಿದೆ. ಕೇಂದ್ರ ಸರ್ಕಾರಕ್ಕೆ ಬಿಹಾರ ಕಟ್ಟುವ ೧ ರು.ತೆರಿಗೆಗೆ ಬದಲಾಗಿ ಕೇಂದ್ರದಿಂದ ೭ ರು. ಪಡೆಯುತ್ತದೆ. ನೀತಿ ಆಯೋಗದ ದಶಕಗಳ ಹಿಂದಿನ ನಿಯಮದ ಅನ್ವಯ ಬಡ ರಾಜ್ಯಗಳನ್ನು ಮೇಲೆತ್ತಲು ಕೇಂದ್ರ ಸರ್ಕಾರದಶಕಗಳಿಂದಲೂ ಆರ್ಥಿಕವಾಗಿ ಶ್ರೀಮಂತವಾದಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆದಾಯದ ಪಾಲನ್ನು ಹಂಚುತ್ತಲೇ ಬರುತ್ತಿದೆ. ಅನ್ನ ರಾಜ್ಯಗಳ ತೆರಿಗೆ ಹಣವನ್ನು ಹೀಗೆ ಸ್ವೀಕರಿಸುವ ಬಿಹಾರ, ದೂರಾಲೋಚನೆಯ ಕ್ರಮಗಳ ಮೂಲಕ ರಾಜ್ಯ ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ಕಾರ್ಯಸಾಧುವಲ್ಲದ ಭರವಸೆಗಳ ಮೂಲಕ ಜನರ ದಿಕ್ಕುತಪಿಸಬಾರದು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೧-೧೦-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!