ನಮಗೆ ನಿಮ್ಮ ಆಶ್ವಾಸನೆಗಳು ಬೇಡ, ನಿಮ್ಮಲ್ಲಿ ದೊಡ್ಡ ದೊಡ್ಡ ಕನಸುಗಳಿವೆ ಅವುಗಳ ಬಗ್ಗೆ ದೊಡ್ಡ ದೊಡ್ಡ ಕರಪತ್ರಗಳನ್ನ ಹಂಚುವುದು ಬೇಡ, ಸಾಮಾಜಿಕ ಮಾಧ್ಯಮಗಳಲ್ಲಿ ಈ ದೇಶವನ್ನು ಈ ರಾಜ್ಯವನ್ನ ಏನೇನೋ ಮಾಡಿಬಿಡುತ್ತೇವೆ ಅನ್ನುವ ನಿಮ್ಮ ಅಬ್ಬರದ ಭಾಷಣಗಳು ಬೇಡ, ಇದೆಲ್ಲವನ್ನ ಕೇಳಿ ಕೇಳಿ ಸಾಕಾಗಿದೆ. ಅರ್ಥವಿಲ್ಲದ ನಿಮ್ಮ ಕೆಲವೊಂದು ಯೋಜನೆಗಳು ಆ ಕ್ಷಣಕ್ಕೆ ನಮಗೆ ಹೌದೇನಿಸಿದ್ದು ನಿಜ, ಆದರೆ ಅದರಲ್ಲಿ ನಾವು ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಪ್ರತಿ ತಿಂಗಳು ನಿಮ್ಮ ಮುಂದೆ ಕೈಯೊಡ್ಡಿ ನಿಲ್ಲುವ ಮನಸ್ಥಿತಿ ನಮಗೆ ಬೇಕಾಗಿಲ್ಲ, ನಾವು ಓದಿದ್ದಕ್ಕೆ ಕೆಲಸ ಬೇಕು ಹಲವು ವರ್ಷಗಳಿಂದ ಪಟ್ಟ ಪರಿಶ್ರಮಕ್ಕೆ ಬೆಲೆ ಬೇಕು ಊರಲ್ಲಿ ಅಪ್ಪ ಅಮ್ಮ ನಮ್ಮ ನಂಬಿಕೆಯಲ್ಲಿ ಬದುಕುತ್ತಿದ್ದಾರೆ ನಾವು ಅವರ ಹಣದಲ್ಲಿ ಜೀವಿಸುವಂತಹ ದುಸ್ಥಿತಿಯನ್ನು ದಯವಿಟ್ಟು ಸೃಷ್ಟಿಸಬೇಡಿ ಊರಿನಲ್ಲಿ ಇದ್ದ ಮನೆಯ ನೆಲವನ್ನು ಮಾರಿಕೊಂಡು ನಮಗೊಂದು ದೊಡ್ಡ ಹುದ್ದೆ ಸಿಗುತ್ತೆ ಅನ್ನುವ ಭರವಸೆಯಲ್ಲಿ ಅವರು ಕಾಯುತ್ತಿದ್ದಾರೆ. ನೀವಿನ್ನು ಯಾವುದೇ ಸರಕಾರಿ ಕೆಲಸ ತೆರೆಯುವ ಸೂಚನೆ ನಮಗೆ ಕಾಣುತ್ತಿಲ್ಲ ವಯಸ್ಸು ದಾಟುತ್ತಿದೆ ಜವಾಬ್ದಾರಿ ಹೆಚ್ಚಾಗಿದೆ, ನೀವು ನಿಮ್ಮ ಮನೆ ನಿಮ್ಮ ಮಕ್ಕಳು ಖಂಡಿತವಾಗಿಯೂ ಉದ್ದಾರ ಆಗ್ತೀರಿ ದೊಡ್ಡ ದೊಡ್ಡ ಹುದ್ದೆಗಳಿಗೆ ತಲುಪ್ತೀರಿ ದುಡ್ಡು ಸಂಪಾದಿಸುತ್ತೀರಿ ನಿಮ್ಮನಲ್ಲಿಗೆ ಏರಿಸಿದ ನಮ್ಮ ಬಗ್ಗೆಯೂ ಗಮನ ಕೊಡಿ ನಾವು ನಮ್ಮ ಮನೆಯ ಜವಾಬ್ದಾರಿಯನ್ನ ಹೇಗಲ ಮೇಲೆ ಹೊತ್ತು ಮುನ್ನಡೆಯಬೇಕು ದಯವಿಟ್ಟು ಈ ಸಲವಾದರೂ ಖಾಲಿ ಇರುವ ಕೆಲಸದ ಸ್ಥಳಗಳ ಪರೀಕ್ಷೆಗಳನ್ನ ನಿಗದಿಪಡಿಸಿ ನಮಗೊಂದು ಕೆಲಸ ನೀಡಿ ಬಿಡಿ. ಹೀಗೆ ಹಲವು ವರ್ಷಗಳಿಂದ ಉದ್ಯೋಗಕ್ಕೆ ಶ್ರಮಪಟ್ಟು ಇನ್ನೂ ಕೆಲಸ ದೊರಕದೆ ಕಾಯುತ್ತಿದ್ದ ರಮೇಶ ದೀರ್ಘ ಪತ್ರವನ್ನು ಬರೆದು ಮುಂದಿನ ಬದುಕೇನು ಅನ್ನುವುದನ್ನು ಯೋಚಿಸುತ್ತಾ ಕುಳಿತುಬಿಟ್ಟಿದ್ದ. ಪತ್ರ ಅಂಚೆಯ ಮೂಲಕ ಸಾಗಿತ್ತು ಆದರೆ ತಲುಪಿದವರು ಏನು ಮಾಡ್ತಾರೋ ಗೊತ್ತಿಲ್ಲ.

-ಧೀರಜ್ ಬೆಳ್ಳಾರೆ                                 

ಚಿತ್ರ ಕೃಪೆ: ಇಂಟರ್ನೆಟ್ ತಾಣ