“ಗಾನ ವಿಜ್ಞಾನ ಚೇತನ” ನಮ್ಮೊಳಗಿನ ಅಜ್ಞಾನವನ್ನು ತೊಡೆದು ಹಾಕುವ ಪ್ರಬುದ್ಧ ಗುಚ್ಛ. ಮೌಢ್ಯ ತುಂಬಿದ ಈ ಸಮಾಜಕ್ಕೆ ವಿಜ್ಞಾನ ಮತ್ತು ವೈಚಾರಿಕ ಮನೋಧರ್ಮಗಳ ಶಸ್ತ್ರಚಿಕಿತ್ಸೆ ಇಂದು ಅತ್ಯಗತ್ಯ. ಮೌಢ್ಯದ ಕಪ್ಪು ಮೋಡ ಕರಗಲೇ ಬೇಕು, ಕಂದಾಚಾರದ ಸಂಕೋಲೆ ಕತ್ತರಿಸಿ ಬೀಲಬೇಕು. ಸುಜ್ಞಾನದ ಹೊಂಗಿರಣ ಸುತ್ತ ಹರಡಿ ಬೆಳಕು ಕಾಣಿಸಬೇಕು. ಹೊಸ ದಿಕ್ಕಿಗೆ ಹೊರಟ ಹಕ್ಕಿನ ಹೋರಾಟಗಾರರೇ, ಹಾಡುಗಾರರೇ ನಿಲ್ಲಿ? ಹಾಡಿನ ಗಟ್ಟಿ ದನಿಯ ಮೂಲಕ ಈ ಚೇತನದ ಸಂದೇಶ ಎಲ್ಲೆಡೆ ಚೆಲ್ಲಿ” ಎಂದು ಈ ಕೃತಿಯ ಸಂಪಾದಕರಾದ ಡಾ. ಶೇಖರ ಗೌಳೇರ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಕೃತಿಯಲ್ಲಿ ವಿವಿಧ ಕವಿಗಳ ನೂರು ಕವನಗಳು ಮುದ್ರಿತವಾಗಿವೆ. ಅವುಗಳಿಂದ ಕೆಲವು ಕವನಗಳನ್ನು ಆಯ್ದು ‘ಸಂಪದ’ದಲ್ಲಿ ಪ್ರಕಟಿಸಲಾಗುವುದು. ಮೊದಲವಾರ ನಾವು ಆಯ್ದು ಕೊಂಡ ಕವಯತ್ರಿ ಜಯದೇವಿ ತಾಯಿ ಲಿಗಾಡೆ. ಅವರ ಒಂದು ಕವನವನ್ನು ಆಯ್ದು ಪ್ರಕಟಿಸಲಾಗಿದೆ.

*** 

ಜಯದೇವಿ ತಾಯಿ ಲಿಗಾಡೆ: ಜಾನಪದದ ಸೊಗಡಿನಿಂದ ಕೂಡಿದ ಕವಿತೆ-ಕಾವ್ಯ ರಚಿಸಿರುವ ಜಯದೇವಿ ತಾಯಿ ಲಿಗಾಡೆ ಅವರ ಬರವಣಿಗೆಯಲ್ಲಿ ಸ್ತ್ರೀ ಹೃದಯದ ರಸಾನುಭವದ ಸಂಪತ್ತಿನ ಅಭಿವ್ಯಕ್ತಿಯನ್ನು ಕಾಣಬಹುದು. ಏಕೀಕರಣ ಹೋರಾಟ ನಡೆಸಿದ ಜಯದೇವಿ ಅವರು ನಂತರ ಗಡಿಗಳ ಆಚೆಗಿನ ಕನ್ನಡಿಗರ ರಕ್ಷಣೆಗಾಗಿ ಶ್ರಮಿಸಿದರು. ಈ ದಿವ್ಯಚೇತನ ಜನಿಸಿದ್ದು ೧೯೧೨ರ ಜೂನ್ ೨೩ರಂದು ಸೊಲ್ಲಾಪುರದಲ್ಲಿ. ತಂದೆ ಚೆನ್ನಬಸಪ್ಪ ಮಡಕಿ, ತಾಯಿ ಸಂಗವ್ವ. ಸೊಲ್ಲಾಪುರದಲ್ಲಿ ಮರಾಠಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಇವರು ತಮ್ಮ ೧೪ನೇ ವಯಸ್ಸಿನಲ್ಲಿ ವಿವಾಹವಾದ ನಂತರವಷ್ಟೇ ಕನ್ನಡ ಕಲಿತಿದ್ದರು.

ಇವರು ರಚಿಸಿದ ಮೊದಲ ಕೃತಿ ಜಯಗೀತ (೧೯೫೨). ಇದರಲ್ಲಿನ ‘ಹಿಗ್ಗುತಿದೆ ವಿಶ್ವ’ ಕವನವು ಅಕಾಡಮಿಯ ನೆರವಿನಿಂದ ಇತರ ೧೪ ಭಾಷೆಗಳಿಗೆ ತರ್ಜುಮೆಯಾಗಿದೆ. ನಂತರ ‘ತಾಯಿಯ ಪದಗಳು, ಸಿದ್ಧರಾಮೇಶ್ವರ ಪುರಾಣ, ಬಂದೇವು ಕಲ್ಯಾಣಕೆ, ಸಾವಿರ ಪದಗಳು, ಸಿದ್ಧವಾಣಿ, ಬಸವದರ್ಶನ, ಸಮೃದ್ಧ ಕರ್ನಾಟಕಾಂಚಿ ರೂಪ-ರೇಷಾ, ಮಹಾಯೋಗಿನಿ, ಸಿದ್ಧರಾಂ ಚಿತ್ರಿವಧಿ, ಬಸವವಚನಾಮೃತ, ಶೂನ್ಯ ಸಂಪಾದನೆ’ - ಅವರ ಪ್ರಮುಖ ಕೃತಿಗಳು. 

ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತಿನ ಅಧ್ಯಕ್ಷತೆ ವಹಿಸಿದ್ದು ಅವರ ಹಿರಿಮೆ. ಬೇಲೂರಿನಲ್ಲಿ ನಡೆದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನ (೧೯೫೨)ದಲ್ಲಿ ಭಾಗವಹಿಸಿ ದಿಟ್ಟತನದಿಂದ ಮಾತಾಡಿದ್ದ ಅವರು ಅದಕ್ಕೂ ಮುನ್ನ ಮುಂಬಯಿಯಲ್ಲಿ ನಡೆದ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನ (೧೯೫೦)ದಲ್ಲಿ ಮಹಿಳಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯದಲ್ಲಿ ನಡೆದ ೪೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ.

ಜಯದೇವಿ ತಾಯಿ ಲಿಗಾಡೆ ಅವರ ಸಿದ್ಧರಾಮೇಶ್ವರ ಪುರಾಣ ಕಾವ್ಯಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ದೇವರಾಜ ಬಹಾದ್ದೂರ್ ಬಹುಮಾನ ಬಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ೧೯೮೬ರ ಜುಲೈ ೨೪ರಂದು ಬಸವ ಕಲ್ಯಾಣದಲ್ಲಿ ನಿಧನರಾದರು.

***

ಹಿಗ್ಗುತ್ತಿದೆ ವಿಶ್ವ

ತಿಂಗಳಿನ ಬೆಳಗಿನಲಿ

ಮಂಗಳದ ಗಳಿಗೆಯಲಿ

ಕುಟಿತೊಂದು ಚೆಲ್ವರಾತ್ರಿ

ಉರುಳುವುದು ಉಲ್ಲಾಸ ಉನ್ಮಾದದೆಡೆಗೆ.

 

ಅವ ಅಂತರ ಮೇಲೆ

ಯಾವ ತಂತರದಿ ತಿರು-

ತಿರುಗಿ ನಿಂತಿರುವಿ ಓ… !

ರಾತ್ರಿ ಭಾನು ನಿನ್ನ ಸೌಭಾಗ್ಯ ಸೊಬಗು ಏನು ?

 

ಎನ್ನೆಯ ಕಿಚ್ಚುಂಡು 

ಭಾವದಲಿ ಮೂಡುತಿಹ

ಮೇಘಮಂಡಲಕೆ ಶೀತಳವ

ಸಿಂಪಡಿಸಿ ; ಸುರಿಸುವಿ ಎನ್ನ ಅಮರಧಾರೆ

 

ನೋಡು ನೋಡುತ ನಿನ್ನ 

ಉರುಳುವುದು ಇರುಳೆಲ್ಲ

ವಿಲೀನಗೊಳ್ವುದು ಮನವು

ಎಂದಿಗೂ ಹಿಗ್ಗುತಿಹ ಈ ವಿಶ್ವದಲ್ಲಿ.

 

ಕೃಪೆ: ಗಾನ ವಿಜ್ಞಾನ ಚೇತನ ಕೃತಿ

ಚಿತ್ರ : ಅಂತರ್ಜಾಲ ತಾಣ