‘ಗಾನ ವಿಜ್ಞಾನ ಚೇತನ’ ಎನ್ನುವ ಕೃತಿಯಿಂದ ಈ ವಾರ ನಾವು ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ಆಯ್ದು ಕೊಂಡಿದ್ದೇವೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ ೧೯೦೪ರ ಡಿಸೆಂಬರ್ ೨೯ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ ಪಡೆದರು.
ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು. ಮೈಸೂರಿನಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಪದ್ಮವಿಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಿ.ಲಿಟ್. ನೀಡಿತ್ತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ದೊರೆತಿದ್ದವು..ಅ
ಶ್ರೀರಾಮಾಯಣ ದರ್ಶನಂ ಕೃತಿಗೆ ೧೯೬೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ. ೧೯೯೫ರಲ್ಲಿ ನಾಡೋಜ ಪ್ರಶಸ್ತಿಯನ್ನು ಮರಣೋತ್ತರ ನೀಡಲಾಯಿತು. ಕುವೆಂಪು ಅವರು ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು. ಕುವೆಂಪು ಅವರು ೧೯೯೪ರ ನವೆಂಬರ್ ೧೧ರಂದು ಮೈಸೂರಿನಲ್ಲಿ ನಿಧನರಾದರು.
***
ತರುಣರಿರಾ ಎದ್ದೇಳಿ
ಹೋಗುತಿದೆ ಹಳೆ ಕಾಲ, ಹೊಸ ಕಾಲ ಬರುತಲಿದೆ,
ಬರುತಲಿದೆ ಹೊಸ ದೃಷ್ಟಿ ಹೊಸ ಬಯಕೆಗಳಲಿ.
ಹೋಗುತಿದೆ ಹಳೆ ಬಾಳು, ಹೊಸ ಬಾಳು ಬರುತಲಿದೆ,
ಬರುತಲಿದೆ ಕುದಿಗೊಂಡು ತರುಣರೆದೆಗಳಲಿ.
ತರುಣರಿರ, ಎದ್ದೇಳಿ ! ಎಚ್ಚರಗೊಳ್ಳಿ ! ಕೇಳಿ !
ಹಳೆಮತದ ಹೊಳೆಯೆಲ್ಲ ಹೊಸ ಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ ; ಬರಲಿ ವಿಜ್ಞಾನ ಬುದ್ಧಿ
ವೇದ ಪ್ರಮಾಣತೆಯ ಮರು ಮರೀಚಿಕೆಯಲ್ಲಿ
ನೀರಡಿಸಿ ಕೆಡದಿರಲಿ ಸ್ವಾತಂತ್ರ್ಯ ಸಿದ್ಧಿ
ತರುಣರಿರ, ಎದ್ದೇಳಿ ! ಎಚ್ಚರಗೊಳ್ಳಿ ! ಕೇಳಿ !
ಹೊಸ ಬಾಳಗೀತೆಯನು ದಿಕ್ಕುದೆಸೆ ಬಿರಿವಂತೆ
ಕೊರಳೆತ್ತಿ ಕೈ ಎತ್ತಿ ದನಿಯೆತ್ತಿ ಹಾಡಿ.
ಸೇರಿ ನಡೆದರೆ ನಿಮ್ಮ ತಡೆಯುವವರಾರಿಲ್ಲ.
ಜಗವೆ ಹಿಂಜರಿಯುವುದು ನಿಡುದಾರಿ ನೀಡಿ
ತರುಣರಿರ, ಎದ್ದೇಳಿ ! ಎಚ್ಚರಗೊಳ್ಳಿ ! ಕೇಳಿ !
***
(ಗಾನ ವಿಜ್ಞಾನ ಚೇತನದಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!