ಗಾನ ವಿಜ್ಞಾನ ಚೇತನ ಕವನ ಸಂಕಲನದಿಂದ ನಾವು ಆಯ್ದ ಕವಿ ದ ರಾ ಬೇಂದ್ರೆ ಅಥವಾ ಅಂಬಿಕಾತನಯದತ್ತ. ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ ೧೮೯೬ರ ಜನವರಿ ೩೧ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪೂರ್ಣಗೊಳಿಸಿದರು.

ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಒಪ್ಪೊತ್ತಿನ ಶಿಕ್ಷಕರಾದರು. ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ನೇಮಕಗೊಂಡರು. ನಿವೃತ್ತರಾದ ಮೇಲೆ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸಲಹೆಗಾರ ಆಗಿ ಕೆಲಸ ಮಾಡಿದರು.

ಮುಂಬಯಿಯಲ್ಲಿ ನಡೆದ ೨೧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದ ಅವರು ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಠಿಯನ್ನು ನಿರ್ವಹಿಸಿದರು. ಕೆಲವು ಕಾಲ ‘ಜೀವನ’ ಮಾಸಪತ್ರಿಕೆ ಮತ್ತು ‘ಜಯಕರ್ನಾಟಕ’ ಪತ್ರಿಕೆ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಬೇಂದ್ರೆ ಅವರಿಗೆ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ , ಕಾಶಿಯ ವಿದ್ಯಾಪೀಠ ಗೌರವ ಡಾಕ್ಟರೇಟ್ ನೀಡಿದವು. ಕೇಂದ್ರ ಸರ್ಕಾರ ಪದ್ಮಶ್ರೀಪ್ರಶಸ್ತಿ ನೀಡಿತು. ಕೇಂದ್ರದ ಸಾಹಿತ್ಯ ಅಕಾಡೆಮಿ ಫೆಲೋ ಗೌರವಕ್ಕೆ ಪಾತ್ರರಾಗಿದ್ದ ಬೇಂದ್ರೆ ಅವರಿಗೆ ಅದಮಾರು ಮಠದವರು ಕರ್ನಾಟಕ ಕವಿಕುಲತಿಲಕ ಬಿರುದು ನೀಡಿದ್ದರು. ಶಿವಮೊಗ್ಗದಲ್ಲಿ ೧೯೪೩ರಲ್ಲಿ ನಡೆದ ೨೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಹಾಗೂ ೧೯೭೪ರಲ್ಲಿ ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದವು. ಬೇಂದ್ರೆಯವರು ೧೯೮೧ರ ಅಕ್ಟೋಬರ್ ೨೬ರಂದು ಮುಂಬಯಿಯಲ್ಲಿ ನಿಧನರಾದರು.

ಕೆಲವು ಕೃತಿಗಳು: ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ಗರಿ, ನಾದಲೀಲೆ, ಅರುಳುಮರುಳು ಇತ್ಯಾದಿ ೨೫ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ, ಕಾವ್ಯೋದ್ಯೋಗ, ಸಾಹಿತ್ಯ ವಿರಾಟ ಸ್ವರೂಪ, ನಾಕುತಂತಿ, ನಿರಾಭರಣ ಸುಂದರಿ, ಶಾಂತಲಾ (ಅನುವಾದ) ಇತ್ಯಾದಿ

***

ಹಕ್ಕಿ ಹಾರುತಿದೆ ನೋಡಿದಿರಾ?

ಇರುಳಿರುಳಳಿದು ದಿನ ದಿನ ಬೆಳಗೆ

ಸುತ್ತಮುತ್ತಲೂ ಮೇಲಕೆ ಕೆಳಗೆ

ಗಾವುದ ಗಾವುದ ಗಾವುದ ಮುಂದೆ

ಎವೆತೆರೆದಿಕ್ಕುವ ಹೊತ್ತಿನ ಒಳಗೆ

ಹಕ್ಕಿ ಹಾರುತಿದೆ ನೋಡಿದಿರಾ?

 

ಕರಿನರೆ ಬಣ್ಣದ ಪುಚ್ಚಗಳುಂಟು

ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು

ಕೆನ್ನನ ಹೊನ್ನನ ಬಣ್ಣ - ಬಣ್ಣಗಳ

ರೆಕ್ಕೆಗಳೆರಡೂ ಪಕ್ಕದಲುಂಟು

ಹಕ್ಕಿ ಹಾರುತಿದೆ ನೋಡಿದಿರಾ?

 

ನೀಲ ಮೇಘ ಮಂಡಲ -ಸಮ ಬಣ್ಣ !

ಮುಗಿಲಿಗೆರೆಕ್ಕೆಗಳೊಡೆದವೊ ಅಣ್ಣಾ !

ಚಿಕ್ಕೆಯ ಮಾಲೆಯ ಸಿಕ್ಕಿಸಿಕೊಂಡು

ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ

ಹಕ್ಕಿ ಹಾರುತಿದೆ ನೋಡಿದಿರಾ?

 

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ

ಮಂಡಲ - ಗಿಂಡಲಗಳ ಗಡ ಮುಕ್ಕಿ 

ತೇಲಿಸಿ ಮುಳುಗಿಸಿ ಖಂಡ- ಖಂಡಗಳ

ಸಾರ್ವಭೌಮರಾ ನೆತ್ತಿಯ ಕುಕ್ಕಿ

ಹಕ್ಕಿ ಹಾರುತಿದೆ ನೋಡಿದಿರಾ?

(ಗಾನ ವಿಜ್ಞಾನ ಚೇತನ ಸಂಕಲನದಿಂದ ಸಂಗ್ರಹಿತ)