ಮಂಗಳೂರಿನಿಂದ ಪ್ರಕಟವಾಗುತ್ತಿದ್ದ "ಕರಾವಳಿ ರಿಪೋರ್ಟರ್"
ಮಂಗಳೂರಿನಿಂದ ಪ್ರಕಟವಾಗುತ್ತಿದ್ದ, ಒಂದು ವರ್ಷ ಕಾಲ ಪ್ರಕಟಗೊಂಡು ನಂತರ ಸ್ಥಗಿತಗೊಂಡ ವಾರಪತ್ರಿಕೆಯಾಗಿದೆ "ಕರಾವಳಿ ರಿಪೋರ್ಟರ್". ಕಡಲ ಕೇಸರಿ, ಹೊಸಸಂಜೆ, ಮಂಗಳೂರು ಮಿತ್ರ, ಕ್ರೈಂ ವಾರ್ತೆ, ಕರಾವಳಿ ಅಲೆ, ಕನ್ನಡ ಜನಾಂತರಂಗ ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ಕಾರ್ಯನಿರತರಾಗಿದ್ದ ಶ್ರೀರಾಮ ದಿವಾಣ ಅವರು, ಕರಾವಳಿ ಮಾರುತಕ್ಕೆ ಸೇರ್ಪಡೆಗೊಳ್ಳುವ ಮೊದಲು ಸಂಪಾದಕ, ಪ್ರಕಾಶಕ, ಮುದ್ರಕ ಮತ್ತು ಮಾಲಕರಾಗಿ ಹೊರತರುತ್ತಿದ್ದ ಪತ್ರಿಕೆಯಾಗಿದೆ ಕರಾವಳಿ ರಿಪೋರ್ಟರ್.
ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಎಂಟು ಪುಟಗಳೊಂದಿಗೆ ಬರುತ್ತಿದ್ದ ಪತ್ರಿಕೆಯಲ್ಲಿ ಕ್ರೈಂ ಮತ್ತು ರಾಜಕೀಯ ಸಂಬಂಧದ ವಿಶೇಷ ವರದಿಗಳು, ತನಿಖಾ ವರದಿಗಳು, ಸಾಮಾಜಿಕ, ವಿಮರ್ಶಾತ್ಮಕ ಲೇಖನಗಳು ಪ್ರಕಟವಾಗುತ್ತಿದ್ದುವು.
೨೦೦೦ನೇ ಇಸವಿ ಜೂನ್ ೨೧ರಂದು ಮಂಗಳೂರು ನಗರದ ವುಡ್ ಲ್ಯಾಂಡ್ಸ್ ಹೊಟೇಲ್ ಸಭಾಂಗಣದಲ್ಲಿ ಪತ್ರಿಕೆಯ ಬಿಡುಗಡೆ ಸಮಾರಂಭ ನಡೆದಿತ್ತು. ಅಂದಿನ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಕಮಲ್ ಪಂತ್ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಖ್ಯಾತ ನ್ಯಾಯವಾದಿ ಆರ್. ರಾಮಪ್ರಸಾದ್ ಮುಖ್ಯ ಅತಿಥಿಯಾಗಿದ್ದರು. ೨೦೦೧ರಲ್ಲಿ ಪತ್ರಿಕೆ ಸ್ಥಗಿತಗೊಂಡಿತು.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!