ಮಾರ್ಗದರ್ಶನ
ಒಬ್ಬ ಗೌರವಾನ್ವಿತ ಸರ್ಕಾರಿ ಶಿಕ್ಷಕರು ನಿವೃತ್ತರಾದರು. ಅವರು ಮತ್ತು ಅವರ ಪತ್ನಿ ಒಂದು ಕಟ್ಟಡದ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದರು. ದೀಪಾವಳಿಯ ಪ್ರಯುಕ್ತ ತಮ್ಮ ಊರಿಗೆ ಹೋಗುವ ಯೋಜನೆ ಹಾಕಿಕೊಂಡರು. ಹೋಗುವ ಮುನ್ನ ನಿವೃತ್ತ ಗುರುಜೀ ಯೋಚಿಸಿದರು.
“ನಾವು ಇಲ್ಲಿರದ ಸಮಯದಲ್ಲಿ ಕಳ್ಳನು ಮನೆಗೆ ನುಗ್ಗಿದರೆ, ಅವನು ಕಪಾಟುಗಳನ್ನು ಒಡೆದು ದೊಡ್ಡ ಅವ್ಯವಸ್ಥೆ ಮಾಡುತ್ತಾನೆ, ಆದರೆ ಮನೆಯಲ್ಲಿ ಹಣವೇ ಇಲ್ಲ!” ಆದಕ್ಕಾಗಿ ಅವರು ಮನೆಯ ಹಾನಿ ತಪ್ಪಿಸಲು ಮೇಜಿನ ಮೇಲೆ ₹1000 ಇಟ್ಟರು.
ಆ ಹಣದ ಜೊತೆ ಒಂದು ಚೀಟಿಯನ್ನು ಬರೆದರು, “ಪ್ರಿಯ ಅನಾಮಧೇಯ ಕಳ್ಳರೇ, ನನ್ನ ಮನೆಯನ್ನು ಒಡೆದು ಒಳಬರುವಷ್ಟು ಪ್ರಯತ್ನ ಮಾಡಿದ ನಿಮಗೆ ಅಭಿನಂದನೆಗಳು! ಆದರೆ ವಿಷಾದದಿಂದ ಹೇಳಬೇಕಾಗಿದೆ — ನಾನು ನಿವೃತ್ತ, ಪ್ರಾಮಾಣಿಕ ಶಿಕ್ಷಕನು, ಪಿಂಚಣಿ ಹಣದಲ್ಲೇ ಜೀವನ ಸಾಗಿಸುತ್ತೇನೆ. ಆದ್ದರಿಂದ ಇಲ್ಲಿ ಹೆಚ್ಚು ಏನೂ ಇಲ್ಲ. ನಿಮ್ಮ ಶ್ರಮ ಮತ್ತು ಅಮೂಲ್ಯ ಸಮಯ ವ್ಯರ್ಥವಾಯಿತು ಎಂಬುದಕ್ಕೆ ವಿಷಾದವಾಗಿದೆ. ಆ ಪ್ರಯತ್ನಕ್ಕೆ ಗೌರವ ಸೂಚಕವಾಗಿ ಈ ₹1000/- ಸ್ವೀಕರಿಸಿ. ಇದಲ್ಲದೆ ನಿಮ್ಮಈ ‘ವ್ಯಾಪಾರ-ಉದ್ಯೋಗ’ ಯಶಸ್ವಿಯಾಗಲು ಕೆಲವು ಸಲಹೆಗಳು, “ಸೂಚನೆಗಳು” ಇಂತಿವೆ:
8ನೇ ಮಹಡಿಯಲ್ಲಿ ಒಬ್ಬ ಭ್ರಷ್ಟ ರಾಜಕೀಯ ಸಚಿವ, 7ನೇ ಮಹಡಿಯಲ್ಲಿ ಪ್ರಸಿದ್ಧ ಸರಕಾರಿ ಗುತ್ತಿಗೆದಾರ, 6ನೇ ಮಹಡಿಯಲ್ಲಿ ಸಹಕಾರಿ ಬ್ಯಾಂಕ್ ಅಧ್ಯಕ್ಷ, 5ನೇ ಮಹಡಿಯಲ್ಲಿ ದೊಡ್ಡ ಉದ್ಯಮಿ, 4ನೇ ಮಹಡಿಯಲ್ಲಿ ಪ್ರಸಿದ್ಧ ವಕೀಲ
3ನೇ ಮಹಡಿಯಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿ ಇದ್ದಾನೆ .
“ಅವರ ಬಳಿ ಬಂಗಾರ ಮತ್ತು ನಗದು ಬೆಟ್ಟದಷ್ಟಿದೆ..! ನಿಮ್ಮ ಈ ಉದ್ಯೋಗ ವ್ಯವಹಾರದ ಯಶಸ್ಸು’ ಅವರಿಗೆ ತೊಂದರೆ ಆಗುವುದಿಲ್ಲ, ಯಾಕೆಂದರೆ ಅವರು ಪೊಲೀಸರಿಗೆ ದೂರು ಕೊಡುವುದಿಲ್ಲ.!”
ದಸರಾ ಮುಗಿದು ಗುರುಜಿ ಮನೆಗೆ ಹಿಂತಿರುಗಿದಾಗ, ಮೇಜಿನ ಮೇಲೆ ದೊಡ್ಡ ಚೀಲವಿತ್ತು.! ಅದರೊಳಗೆ ₹10 ಲಕ್ಷ ನಗದು.! ಮತ್ತು ಒಂದು ಚೀಟಿ “ಗುರುಜೀ , ನಿಮ್ಮ ಮಾರ್ಗದರ್ಶನ ಮತ್ತು ಉಪದೇಶಗಳಿಗೆ ಅನಂತ ಧನ್ಯವಾದಗಳು.
ನೀವು ಕೊಟ್ಟ ಸಲಹೆಯಂತೆ ಕಾರ್ಯನಿರ್ವಹಿಸಿ, ನನ್ನ ‘ಮಿಷನ್’ ಯಶಸ್ವಿಯಾಯಿತು.! ಈ ಚಿಕ್ಕ ಮೊತ್ತವನ್ನು ಕೃತಜ್ಞತೆಯ ಸಂಕೇತವಾಗಿ ಬಿಡುತ್ತಿದ್ದೇನೆ. ಮುಂದೆಯೂ ನಿಮ್ಮ ಆಶೀರ್ವಾದ, ಗುರುಬೋಧನೆ ಮತ್ತು ಸಲಹೆ ಸಿಗಲಿ ಎಂದು ಬಯಸುತ್ತೇನೆ.
ನಿಮ್ಮ ಶಿಷ್ಯ, ಕಳ್ಳ ಶಿಷ್ಯ
ಗುರುಜೀ ಚೀಟಿ ಓದಿ ನಗುತ ಹೇಳಿದರು “ಅಯ್ಯೋ, ನಾನು ನಿವೃತ್ತನಾಗಿದ್ದೇನೆ ಎಂದುಕೊಂಡೆ, ಆದರೆ ಇನ್ನೂ ಬೋಧನೆ ಮಾಡ್ತಾ ಇದ್ದೇನೆ!”
***
ಕಾರಣ
ಪೊಲೀಸ್: ನಿನ್ನೆ ರಾತ್ರಿ ನೀನು ಬ್ಯಾಂಕಿನಿಂದ ಹಣ ಕಳವು ಮಾಡಿದ ಬಳಿಕ ಸ್ವಲ್ಪ ಸಮಯದಲ್ಲೇ ಏಕೆ ಅಲ್ಲಿಗೇ ಮರಳಿದೆ?
ಕಳ್ಳ ಸೂರಿ: ನಾನು ಕಳವು ಮಾಡಿದ ಹಣ ಎಷ್ಟಿದೆ ಗೊತ್ತು ಮಾಡಲು ಹಣ ಎಣಿಸುವ ಮಶೀನು ಬೇಕಿತ್ತು. ಅದನ್ನು ಕದಿಯಲೆಂದು ಪುನಃ ಬ್ಯಾಂಕಿಗೆ ಹೋದಾಗ ನಿಮ್ಮ ಕೈಗೆ ಸಿಕ್ಕಿ ಬಿದ್ದೆ.
***
ಕಳವು
ತನ್ನ ಮನೆಯಲ್ಲಿ ಪ್ಯಾಂಟಿನ ಜೇಬಿನಿಂದ ಇಪ್ಪತ್ತು ಸಾವಿರ ಕಳವಾಗಿದೆ ಎಂದು ದೂರು ದಾಖಲಿಸಲು ಸೂರಿ ಪೋಲೀಸ್ ಸ್ಟೇಷನ್ಗೆ ಹೋದ. ಅಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ಮತ್ತು ಸೂರಿಯ ನಡುವೆ ನಡೆದ ಸಂಭಾಷಣೆ ಹೀಗಿತ್ತು:
“ನಿಮಗೆ ನಿಮ್ಮ ಮನೆ ಕೆಲಸದವಳ ಮೇಲೆ ಅನುಮಾನ ಉಂಟೇ?''
"ಇಲ್ಲ ಇಲ್ಲ ಅವಳು ತುಂಬಾ ಪ್ರಾಮಾಣಿಕಳು, ಅಂತಹ ಕೆಲಸ ಮಾಡಲಾರಳು"
'' ಹಾಗಾದರೆ ನೆರೆಮನೆಯವರ ಮೇಲೆ ?"
"ಅವರು ತುಂಬಾ ಒಳ್ಳೆಯವರು. ಅವರ ಮೇಲೆ ಸಂಶಯಪಡುವಂತಿಲ್ಲ''
" ಹಾಗಾದರೆ ಬೇರೆ ಯಾರ ಮೇಲೆ ನಿಮಗೆ ಶಂಕೆ ಇದೆ?''
"ನನ್ನ ಹೆಂಡತಿಯ ಮೇಲೆ ಬಲವಾದ ಶಂಕೆ ಇದೆ. ಅವಳೇ ಈ ಕಳ್ಳತನ ಮಾಡಿರಬಹುದು''
'ಹಾಗಾದರೆ ಇದು ಕಳ್ಳತನವಲ್ಲ''
'ಕಳ್ಳತನವಲ್ಲದಿದ್ದರೆ ಮತ್ತೇನು ಸರ್?''
" ಇದು ಆರ್.ಟಿ.ಜಿ.ಎಸ್, ಎನ್ ಇ ಎಫ್ ಟಿ, ಪೇಟಿಯಮ್ ನಂತೆ. ಮನೀ ಟ್ರಾನ್ಸ್ಪರ್. ಹಣ ನಿಮ್ಮ ಕಿಸೆಯಿಂದ ಪತ್ನಿಯ ಪರ್ಸಿಗೆ ಟ್ರಾನ್ಸ್ಫರ್ ಆಗಿದೆ ಅಷ್ಟೆ ಹಾಗಾಗಿ ನಿಮ್ಮ ದೂರು ಸ್ವೀಕರಿಸಲು ಸಾಧ್ಯವಿಲ್ಲ. ನೀವು ಹೋಗಬಹುದು' ಎಂದು ಇನ್ಸ್ ಪೆಕ್ಟರ್ ಕಡ್ಡಿಮುರಿದಂತೆ ಅಂದಾಗ ಸೂರಿಗೆ ಮರು ಮಾಡನಾಡುವ ಅವಕಾಶವೇ ಇರಲಿಲ್ಲ.
***
ಚಿಕಿತ್ಸೆ
ಡಾ. ಸೂರಿಯ ದವಾಖಾನೆಯ ಎದುರು ತೂಗುಹಾಕಲಾದ ಸೂಚನಾ ಫಲಕ: "ಡಾಕ್ಟರರ ಮನೆಯಲ್ಲಿ ಶುಭ ಕಾರ್ಯ ನಡೆಯಲಿರುವ ಕಾರಣ ಏಳು ದಿನಗಳ ಮಟ್ಟಿಗೆ ಈ ದವಾಖಾನೆಯು ಮುಚ್ಚಿರುತ್ತದೆ. ಈ ಕಾಲಾವಧಿಯಲ್ಲಿ ರೋಗಿಗಳು ಇತರ ಡಾಕ್ಟರರಿಂದ ಚಿಕಿತ್ಸೆ ಪಡೆಯಬಾರದಾಗಿ ವಿನಂತಿ.''
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!