ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ. ಅದೇ ಸಮಯದಲ್ಲಿ ಮನಸ್ಸು ಕೆಲವೊಮ್ಮೆ ತಟಸ್ಥವೂ ಆಗಬಲ್ಲದು. ಕಣ್ಣಳತೆಯ ದೂರಕ್ಕೂ ಚಲಿಸಲು ಕಷ್ಟ ಪಡುತ್ತದೆ. ಹುಟ್ಟಿದ ಕ್ಷಣದಿಂದ ತನ್ನ ದೇಹವೆಂಬ ಒಡೆಯನ ಅಂತ್ಯದವರೆಗೂ ನಿರಂತರವಾಗಿ ಚಲಿಸುತ್ತಲೇ ಇರುವ ಮನಸ್ಸಿನ ಪಯಣವೇ ಒಂದು ವಿಸ್ಮಯ ಲೋಕ.

ಸೃಷ್ಟಿಯ ಪ್ರತಿ ಜೀವಿಯ ಮನಸ್ಸು ಯೋಚಿಸುತ್ತಲೇ ಇರುತ್ತದೆ. ಆದರೆ ಮನುಷ್ಯನಷ್ಟು ಸಂಕೀರ್ಣ ಮನಸ್ಸು ಬೇರೆ ಯಾವುದೇ ಪ್ರಾಣಿಗೆ ಇರುವುದಿಲ್ಲ ಎಂದು ಸಹಜವಾಗಿ  ಊಹಿಸಬಹುದು. ಆದಿಯಿಂದ ಅಂತ್ಯದವರೆಗೆ ಮನಸ್ಸು ಚಲಿಸುವ ಹಾದಿ, ಅದರ ಅಗಾಧತೆ, ಅದರ ವಿಸ್ತಾರ, ಅದರ ತಿರುವುಗಳು, ಅದರ ಸೌಂದರ್ಯ, ಅದರ ವಿಕೃತಗಳು, ಅದರ ನೋವು ನಲಿವುಗಳು, ಅದು ಉಂಟುಮಾಡುವ ತಲ್ಲಣಗಳು, ಪ್ರತಿ ಕ್ಷಣ ಬದಲಾಗುವ ಪ್ರತಿಕ್ರಿಯೆಗಳು, ಅದರ ಪರಿಣಾಮವಾಗಿ ಮತ್ತಷ್ಟು ಕ್ರಿಯೆಗಳು, ತನ್ನದೇ ಮನಸ್ಸಿನ ಹಾದಿಯ ಮುಖಾಮುಖಿ, ಅದಕ್ಕೆ ಎದುರಾಗವ ಮತ್ತು ಪಲಾಯನ ಮಾಡುವ ಮುಖವಾಡಗಳು, ತಪ್ಪು ಕಲ್ಪನೆಗಳು, ಆಕಸ್ಮಿಕಗಳು,  ಮನಸ್ಸು ಕಲಿಸಿಕೊಡುವ ಪಾಠಗಳು, ನಾವು ಅರ್ಥ ಮಾಡಿಕೊಳ್ಳುವ ಅಥವಾ ಅಪಾರ್ಥ ಮಾಡಿಕೊಳ್ಳುವ ಮನಸ್ಸಿನ ಪಾಠಗಳು ಹೀಗೆ ಬಳಕೆಯಲ್ಲಿರುವ ಭಾಷೆಯ ಅಕ್ಷರಗಳಿಗೆ ಅದರ ಹಾದಿಗಳನ್ನು ದಾಖಲಿಸುವ ಸಾಮರ್ಥ್ಯವೂ ಇಲ್ಲ.

ಮನಸ್ಸಿನ ಹಾದಿ ದಿಢೀರನೇ ಮೇಲಕ್ಕೆ ಸಾಗುತ್ತದೆ, ಪ್ರಪಾತಕ್ಕೂ ಕುಸಿಯುತ್ತದೆ, ಒಮ್ಮೊಮ್ಮೆ ಜ್ವಾಲಾಮುಖಿಯಾಗುತ್ತದೆ, ಇನ್ನೊಮ್ಮೆ ತಣ್ಣನೆಯ ನೀರವ ಮೌನ, ಮಗದೊಮ್ಮೆ ವಿಷಾಧನೀಯ ಜಿಗುಪ್ಸೆ, ಜೀವನೋತ್ಸಾಹದ ನಡುವೆಯೇ ಏಕಾಂತದ ಆತಂಕ, ಸೋಲಿನ ಕನವರಿಕೆ, ಸಾವಿನ ಭಯ ಭಾವನೆಗಳಿಗೂ ನಿಲುಕದಷ್ಟು ಗೊಂದಲ. ಆ ಮನಸ್ಸಿನ ಹಾದಿಯ ನಿಯಂತ್ರಣವೇ ಒಂದು ಸವಾಲು ಮತ್ತು ಬದುಕಿನ ಬಹುತೇಕ ಸಾರ್ಥಕತೆ ಅಡಗಿರುವುದೇ ಈ ಮನಸ್ಸಿನ ನಿಯಂತ್ರಣದಲ್ಲಿ. ಆ ನಿಯಂತ್ರಣಕ್ಕೆ ಅಸಾಮಾನ್ಯ ಸಾಧನೆ ಬೇಕು. ಆದರೆ ಆ ಸಾಧನೆಯ ಮಾರ್ಗಗಳು ಮಾತ್ರ ಅತ್ಯಂತ ಕಠಿಣ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಬಹುತೇಕ ಅದು ಅಸಾಧ್ಯ ಎಂದೇ ಭಾವಿಸಲಾಗಿದೆ. ಅದನ್ನು ಸಾಧ್ಯವಾಗಿಸದೇ ಬದುಕು ಅಪೂರ್ಣ ಮತ್ತು ಬದುಕಿನ ಗುಣಮಟ್ಟ‌ ಖಂಡಿತ ನಮಗರಿವಿಲ್ಲದೇ ಕುಸಿದಿರುತ್ತದೆ. ಅದರ ಕೊರತೆಯಲ್ಲಿಯೇ ಬಹುತೇಕರು ನಿರ್ಗಮಿಸಿರುತ್ತಾರೆ. ಮತ್ತೆ ಕೆಲವರು ಗುರಿ ತಲುಪದೇ ಮಧ್ಯದಲ್ಲಿಯೇ ನಿರಾಶರಾಗುತ್ತಾರೆ. ಅಪರೂಪದಲ್ಲಿ ಅಪರೂಪಕ್ಕೆ ಒಬ್ಬರು ಯಶಸ್ವಿಯಾಗುತ್ತಾರೆ. ಅದು ಅವರ ಸ್ವಂತ ಅನುಭವವಾಗಿಯೇ ಉಳಿದು ಸಾರ್ವತ್ರಿಕವಾಗುವುದೇ ಇಲ್ಲ. ಅದು ಕೇವಲ ಪುಸ್ತಕಗಳಲ್ಲಿ ಮತ್ತು ಉಪನ್ಯಾಸಗಳಲ್ಲಿ ಮಾತ್ರ ಉಳಿಯುತ್ತದೆ.

ಸಾಮಾನ್ಯ ಮನುಷ್ಯರು ಇದನ್ನು ಸಾಧಿಸಲು ಆ ಮಾರ್ಗದಲ್ಲಿ ಮನಸಿನೊಳಗೊಂದು ಪಯಣ. ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು.

ಹೊರಗೆಲ್ಲೋ ಪ್ರವಾಸ,

ಇನ್ನೊಬ್ಬರ ವಿಮರ್ಶೆ,

ಬದುಕಿನ ಜಂಜಾಟ,

ಅಜ್ಞಾನ ಅಸಹನೆ ಅಹಂಕಾರ ಮುಂತಾದ ಕಾರಣಗಳಿಗಾಗಿ ನಮ್ಮೊಳಗಿನ ಬೇಡಿಕೆಗಳ ಪೂರೈಕೆಯಲ್ಲಿ ನಮ್ಮ ಒಳಗಿನ ಪ್ರಯಾಣಕ್ಕೆ ಸಮಯವೇ ಇರುವುದಿಲ್ಲ. ಕೆಲವೊಮ್ಮೆ ಸಮಯವಿದ್ದರು ಅದರ ಆಗಾಧತೆಗೆ ಅಂಜಿ ಅದರೊಳಗೆ ಪ್ರವೇಶಿಸಲು ಭಯ ಮತ್ತು ನಿರಾಸಕ್ತಿ ಮೂಡುತ್ತದೆ. ನಮ್ಮೊಳಗೆ ನಾವು ಪ್ರವೇಶಿಸದ ಬದುಕು ಒಂದು ರೀತಿಯಲ್ಲಿ ಅಪೂರ್ಣ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ