ಉಡುಪಿಯ "ಜನಪರ ರಾಜಕೀಯ"

ಪತ್ರಕರ್ತ ಮತ್ತು ಜನಪರ ಹೋರಾಟಗಾರ ಶ್ರೀರಾಮ ದಿವಾಣ ಅವರು ಸಂಪಾದಕ, ಪ್ರಕಾಶಕ, ಮುದ್ರಕ ಮತ್ತು ಮಾಲಕರಾಗಿ ಉಡುಪಿಯಲ್ಲಿ ನಾಲ್ಕು ವರ್ಷಗಳ ಕಾಲ ಪ್ರಕಟಿಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಜನಪರ ರಾಜಕೀಯ".

೨೦೧೦, ಜುಲೈ ಒಂದರ ಪತ್ರಿಕಾ ದಿನಾಚರಣೆಯಂದು ಜನಪರ ರಾಜಕೀಯದ ಮೊದಲ ಸಂಚಿಕೆ ಹೊರಗೆ ಬಂತು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು  ಉಡುಪಿಯ ಕಿದಿಯೂರು ಹೋಟೇಲ್ ರೂಫ್ ಟಾಪ್ ನಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ  ಆಯೋಜಿಸಿದ ಕಾರ್ಯಕ್ರಮದಲ್ಲಿ ಮೈಸೂರಿನ "ಆಂದೋಲನ" ದಿನಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಅವರು ಜನಪರ ರಾಜಕೀಯವನ್ನು ಬಿಡುಗಡೆಗೊಳಿಸಿದರು. ಖ್ಯಾತ ಮನೋವೈದ್ಯರಾದ ಡಾ. ಪಿ. ವಿ. ಭಂಡಾರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖರಾದ ಗೋಕುಲದಾಸ್ ಪೈ, ಅಲೆವೂರು ದಿನೇಶ್ ಕಿಣಿ, ಕಿರಣ ಮಂಜನಬೈಲು  ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

೨೦೧೪ರ ವರೆಗೆ ನಿರಂತರವಾಗಿ ಪ್ರಕಟಗೊಂಡ ಜನಪರ ರಾಜಕೀಯ ನಂತರ ಸ್ಥಗಿತಗೊಂಡಿತು. ಆರಂಭದ ಎರಡು ವರ್ಷ ಕಾಲ ದಿನ ಪತ್ರಿಕೆ ಆಕಾರದಲ್ಲಿ ನಾಲ್ಕು ಪುಟಗಳೊಂದಿಗೆ ಪ್ರಕಟಗೊಳ್ಳುತ್ತಿತ್ತು. ನಂತರದ ಎರಡು ವರ್ಷ ಟ್ಯಾಬ್ಲಾಯ್ಡ್ ಆಕಾರದಲ್ಲಿ ಎಂಟು ಪುಟಗಳೊಂದಿಗೆ ಪ್ರಕಟಗೊಂಡಿತು.

ಬಿಡಿ ಸಂಚಿಕೆಯ ಬೆಲೆ ಮೂರು ರೂಪಾಯಿಗಳಾಗಿತ್ತು. ಆರಂಭದಲ್ಲಿ ಉಮೇಶ್ ಪೂಜಾರಿ ಕುಕ್ಕುಪಲ್ಕೆ ಅವರ "ಚಿಲಿಪಿಲಿ" ಮತ್ತು ಬಾಲಕೃಷ್ಣ ಶಿಬಾರ್ಲ ಅವರ "ಜಗದಡಿ" ಎಂಬ ಅಂಕಣ ಬರಹ ಪ್ರಕಟವಾಗುತ್ತಿತ್ತು.  ಸಂಪಾದಕೀಯ, ಸಂಪಾದಕ ಶ್ರೀರಾಮ ದಿವಾಣರ ಅಂಕಣ ಬರಹ "ಆಶಯ", " ಕ್ರೈಂ ಫೈಲ್", "ಪಾಲಿಟ್ರಿಕ್ಸ್", " ವಿಚಾರ", "ವಿವಾದ", ಓದುಗರ ಬಹಿರಂಗ ಪತ್ರ, ಪುಸ್ತಕ ಲೋಕ ಇತ್ಯಾದಿ ಶೀರ್ಷಿಕೆಯಡಿಯಲ್ಲಿ ಖಾಯಂ ಲೇಖನಗಳಿದ್ದವು.

ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಅಪರಾಧ ಲೋಕದ ವಿಶೇಷ ವರದಿಗಳು, ತನಿಖಾ ವರದಿಗಳು, ಪ್ರಚಲಿತ ವಿದ್ಯಾಮಾನಗಳ, ಕಾರ್ಯಕ್ರಮಗಳ ವರದಿಗಳು, ವಿಶ್ಲೇಷಣೆಗಳು, ವೈವಿಧ್ಯಮಯ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.

ಉಡುಪಿ ಜಿಲ್ಲೆಯಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಪತ್ರಿಕೆ ಮಾರಾಟವಾಗುತ್ತಿತ್ತು. ರವಿ ನವಣಗೇರಿ ಎಂಬವರು ಶಿರಸಿ ತಾಲೂಕು ವರದಿಗಾರರಾಗಿದ್ದರು. ಮಂಗಳೂರು ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಪತ್ರಿಕೆ ಪ್ರಕಟವಾಗುತ್ತಿತ್ತು. ಉಡುಪಿ ಮಿಷನ್ ಕಂಪೌಂಡ್ ಕರ್ಕಡ ಕಂಪೌಂಡ್ ನಲ್ಲಿ ಪತ್ರಿಕಾ ಕಚೇರಿಯಿತ್ತು.

~ ಶ್ರೀರಾಮ ದಿವಾಣ