ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿರುವ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಲು ಆಗುವುದಿಲ್ಲ ಎಂದು ಸಾರುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಅಧಿಕಾರದ ಅತಿಕ್ರಮಣವಾಗದಂತೆ ಸಮತೋಲಿತ ತೀರ್ಪನ್ನು ನೀಡಿದೆ. ಇದೇ ವೇಳೆ, ರಾಜ್ಯಪಾಲರು ವಿಧೇಯಕಗಳಿಗೆ ಸಹಿ ಹಾಕದೆ ಅಥವಾ ಯಾವುದೇ ನಿರ್ಧಾರ ಕೈಗೊಳ್ಳದೆ ಅನಿರ್ದಿಷ್ಟಾವಧಿಗೆ ಅವನ್ನು ಇಟ್ಟುಕೊಳ್ಳುವಂತಿಲ್ಲ, ಹಾಗೆ ಮಾಡಿದರೆ ಕೋರ್ಟ್ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದೂ ಹೇಳಿರುವುದು ಮಹತ್ವದ್ದು. ತಮಿಳುನಾಡಿನಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಆರಂಭವಾದ ಕದನ ಈ ತೀರ್ಪಿಗೆ ಕಾರಣ. ಇವತ್ತಿಗೂ ಕರ್ನಾಟಕದ ೧೦ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳು ಆಳ್ವಿಕೆಯಲ್ಲಿರುವ ೪ ರಾಜ್ಯಗಳ ೩೩ ವಿಧೇಯಕಗಳು ಅಂಕಿತಕ್ಕಾಗಿ ಕಾಯುತ್ತಿವೆ ಎಂದು ವರದಿಗಳು ಹೇಳುತ್ತವೆ. ಹೀಗಾಗಿ ಈ ಮಸೂದೆಗಳ ಭವಿಷ್ಯ ತೀರ್ಪಿನ ಬಳಿಕ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಕೇಂದ್ರದಲ್ಲಿರುವ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ, ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೆ ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರ, ರಾಜ್ಯದಲ್ಲಿ ಮತ್ತೊಂದು ಪಕ್ಷದ ಸರ್ಕಾರ ಇದ್ದಾಗ, 'ಕ್ರಿಯಾಶೀಲ' ರಾಜ್ಯಪಾಲರು ನೇಮಕವಾದಾಗ ರಾಜ್ಯಪಾಲರು ವರ್ಸಸ್ ಸಿಎಂ ಎಂಬ ಸಂಘರ್ಷ ಭುಗಿಲೇಳುವುದು ಇದೇ ಮೊದಲಲ್ಲ.ಯಾವುದೇ ಮಸೂದೆಯನ್ನು ಸರ್ಕಾರಗಳು ವಿಧಾನಮಂಡಲದಲ್ಲಿ ಅಂಗೀಕರಿಸಿ ಕಳುಹಿಸಿದಾಗ, ಆ ಬಗ್ಗೆ ನಿರ್ಧಾರ ಕೈಗೊಳ್ಳಲು ರಾಜ್ಯಪಾಲರಿಗೆ ಮೊದಲಿನಿಂದಲೂ ಮೂರು ಆಯ್ಕೆಗಳು ಇವೆ. ಒಂದೋ ಅಂಗೀಕರಿಸಬೇಕು, ಇಲ್ಲವೇ ತಿರಸ್ಕರಿಸಬೇಕು, ಅದಾಗದಿದ್ದರೆ ರಾಷ್ಟ್ರಪತಿಗಳಿಗೆ ಕಳುಹಿಸಬೇಕು. ಆದರೆ ಕೆಲವು ರಾಜ್ಯಪಾಲರು ಮಸೂದೆಗಳನ್ನು ತಿರಸ್ಕರಿಸುವುದೂ ಇಲ್ಲ, ಅಂಗೀಕರಿಸುವುದೂ ಇಲ್ಲ. ಹೀಗಾಗಿ ಸರ್ಕಾರದ ಸುಧಾರಣೆ ಪ್ರಕ್ರಿಯೆಗಳಿಗೆ ಅಡ್ಡಿಯಾಗುತ್ತದೆ. ರಾಜ್ಯಪಾಲರು ರಾಜಕಾರಣಿಗಳ ಜತೆ ಸ್ಪರ್ಧೆಗೆ ಬಿದ್ದಾಗ ಉದ್ಭವವಾಗುವ ಇಂತಹ ಸನ್ನಿವೇಶವನ್ನು ದೇಶ ಹಲವು ಬಾರಿ ಕಂಡಿದೆ. ಆದರೆ ಆ ಪ್ರಕರಣ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ನ್ಯಾಯಾಧೀಶರು ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಮೂರು ತಿಂಗಳ ಕಾಲಮಿತಿ ಹೇರುವ ಹಂತಕ್ಕೆ ಹೋಗಿ ಬಿಕ್ಕಟ್ಟಿಗೆ ಕಾರಣವಾಗಿತ್ತು. ಅದಕ್ಕೆ ಈಗ ತೆರೆಬಿದ್ದಿದ್ದು, ಕಾಲಮಿತಿ ಹೇರಲು ಆಗದು ಸಾಂವಿಧಾನಿಕ ಪೀಠ ಸ್ಪಷ್ಟನೆ ನೀಡಿದೆ. ಈ ತೀರ್ಪಿನಿಂದ ರಾಜ್ಯಪಾಲರು-ಸರ್ಕಾರಗಳು ಸಂಘರ್ಷ ಕಡಿಮೆಯಾಗುತ್ತೆ ಎಂಬ ನಿರೀಕ್ಷೆ ಇಲ್ಲ. ಈ ವಿಚಾರದಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಗಳೇ ಸಂಘರ್ಷವನ್ನು ತಪ್ಪಿಸಿ ಮುಂದುವರಿಯಬೇಕಿದೆ. ಇಲ್ಲದಿದ್ದರೆ ಮತ್ತೆ ಕಾನೂನು ಹೋರಾಟ ಶತಃಸಿದ್ಧ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೨-೧೧-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ