ಬಸ್ ನಿಲ್ದಾಣ ಮೌನವಾಗಿದೆ. ಅದಕ್ಕೆ ಗೊತ್ತಿದೆ ಇಲ್ಲಿಂದ ಬದುಕು ಆರಂಭವಾಗುತ್ತೆ, ಇಲ್ಲಿಗೆ ಬದುಕು ಕೊನೆಗೊಳ್ಳುತ್ತೆ, ಇಲ್ಲಿಂದ ಹೋರಾಟಗಳು ಶುರುವಾಗುತ್ತೆ, ಇಲ್ಲಿ ಕಣ್ಣೀರಿಗೂ ಸ್ಥಳವಿದೆ, ನಗುವಿಗೂ ಸ್ಥಳವಿದೆ, ನೋವು ನಲಿವುಗಳು ಮಾರಾಟವಾಗುತ್ತೆ, ಮಾತು ಬದುಕಾಗುತ್ತೆ, ದೊಡ್ಡ ದೊಡ್ಡ ಹೊರೆಗಳು ಕಡಿಮೆಯಾಗುತ್ತವೆ ಮತ್ತೆ ಹೆಚ್ಚಾಗುತ್ತವೆ, ಮನಸು ಮೌಲ್ಯಗಳು ಕಳ್ಳತನವಾಗುತ್ತೆ, ಹೀಗೆ ಎಲ್ಲ ಬದುಕಿನ ಘಟನೆಗಳು ಈ ನಿಲ್ದಾಣದಲ್ಲಿ ಬಂದು ನಿಂತು ಹೊರಡುತ್ತವೆ. ಯಾವುದೂ ಇಲ್ಲೇ ಕೊನೆಯವರೆಗೂ ನಿಲ್ಲೋದಿಲ್ಲ . ಕೆಲವೊಂದು ಕ್ಷಣ ಈ ನಿಲ್ದಾಣದಲ್ಲಿ ನೋವಿನಿಂದ ಕಣ್ಣೀರಿಳಿಸಿಕೊಂಡವರನ್ನು ಕಂಡ ನಿಲ್ದಾಣಕ್ಕೆ ಅವರ ಕಣ್ಣೀರು ಒರೆಸುವ ಮನಸಾಗುತ್ತೆ, ಸಂಭ್ರಮವನ್ನು ಹಂಚಿಕೊಂಡಾಗ ಚಪ್ಪಾಳೆ ತಟ್ಟಬೇಕು ಎನಿಸುತ್ತದೆ, ಈ ನಿಲ್ದಾಣಕ್ಕೂ ಭಾವನೆಗಳಿದೆ ಇಲ್ಲಿ ಮೋಸ ವಂಚನೆಗಳಾದಾಗ ಪ್ರತಿರೋಧ ತೋರಿಸಬೇಕು ಅನ್ನಿಸುತ್ತದೆ ಆದರೆ ಅದಕ್ಕೆ ಬದುಕಿಲ್ಲ ಅಂದುಕೊಂಡು ಅದನ್ನು ಯಾರೂ ಗಮನಿಸುತ್ತಾನೆ ಇಲ್ಲ. ನಿಲ್ದಾಣ ಕಾಯುತ್ತಿದೆ ಎಲ್ಲ ಬದುಕುಗಳು ಬದಲಾಗಲಿ, ಹೊಸ ದಿಕ್ಕು ಕಾಣಲಿ ಎನ್ನುವ ಆಶಯವಷ್ಟೇ ನಿಲ್ದಾಣಕ್ಕಿದೆ. ಅದು ನಿಂತಿದ್ದರೂ ಎಲ್ಲರ ಬದುಕು ಚಲಿಸುವಂತೆ ಮಾಡುತ್ತಿದೆ. ನಿಲ್ದಾಣದ ಮಾತುಗಳಿಗೂ ಕಿವಿಯಾಗಿ ಬಿಡಿ ನಿಲ್ದಾಣ ಕಾಯುತ್ತಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ