ಮನೆಯಂಗಳಕ್ಕೆ

ನಿತ್ಯ ಬಂದು ಹೋಗುವ

ಕಾಗೆಗಳ ಗೂಡು

ಬದಲಾಗಲೇ ಇಲ್ಲ

ಅಜ್ಜನ ಕಾಲಕ್ಕೂ ಹಾಗೆಯೇ ಇತ್ತು

ಈಗಲೂ ಹಾಗೆಯೇ ಇದೆ.

 

ಪಕ್ಕದ ಮನೆ ಕೊಗ್ಗನ ಕೋಳಿ

ಕೂಗುವ ಸಮಯ ಬದಲಾಗಲೇ ಇಲ್ಲ

ಅಜ್ಜನ ಕಾಲದಲ್ಲೂ

ನಸುಕಿನ ಹೊತ್ತು ಕೂಗುತ್ತಿತ್ತು

ಈಗಲೂ ಅದೇ ಹೊತ್ತಲ್ಲಿ ಕೂಗುತ್ತಿದೆ.

 

ನಮ್ಮ ಪ್ರೀತಿಯ ಬೆಕ್ಕು

ಮನೆಯಿಂದ ಹೊರಗ್ಹೋಗಿ

ನೆಲದಲ್ಲಿ ಸಣ್ಣ ಗುಂಡಿ ತೋಡಿ

ಮಲ ವಿಸರ್ಜಿಸಿದ ನಂತರ

ಮಣ್ಣಿನಿಂದ ಮುಚ್ಚಿತು !

ಅಜ್ಜನ ಕಾಲದಲ್ಲೂ 

ಹೀಗೆ ಮಾಡುವುದನ್ನು 

ನೋಡುತ್ತಾ ನಿಂತ

ಬಾಲ್ಯದ ನೆನಪು

ಅಚ್ಚಳಿಯದೇ ಉಳಿದಿದೆ.

 

ಮನೆಯ ಕಾವಲುಗಾರ

ಸಾಕು ನಾಯಿಯ

ಯಜಮಾನ ನಿಷ್ಠೆ

ಒಂದಿಷ್ಟೂ ಬದಲಾಗಲೇ ಇಲ್ಲ...

 

ಸ್ವಾರ್ಥಕ್ಕಾಗಿ ಲಾಭಕ್ಕಾಗಿ

ಹಣವಂತರ ಅಧಿಕಾರಸ್ಥರ

ಇಂದ್ರ ಚಂದ್ರರೆನ್ನುವ

ಕವಿಗಳು ಆಸ್ಥಾನ ವಿದ್ವಾಂಸರು

ಅಂದೂ ಇದ್ದರು

ಇಂದೂ ಇದ್ದಾರೆ

ಭ್ರಷ್ಟಾಚಾರದ ಹಾಗೆ

ಬದಲಾಗಲೇ ಇಲ್ಲ.

 

ಮನುಷ್ಯ ಪ್ರಾಣಿಯ ಮನೆಗಳು 

ಮುಳಿಯಿಂದ ಮಹಡಿಯಾಗಿದೆ

"ಗುಡ್ಡೆ" "ಗದ್ದೆ"ಗಳು ಮನೆಯೊಳಗಿನ

ಅಡುಗೆ ಕೋಣೆಯ ಪಕ್ಕಕ್ಕೇ ಬಂದಿದೆ

ಮನಗಳ ವಿಕಾರವೂ ವಿಶಾಲವಾಗಿದೆ

ಕ್ರೌರ್ಯವೂ ಬೀದಿನಾಯಿಗಳಂತಾಗಿದೆ

ಸುಧಾರಣೆ ಸ್ಥಗಿತಗೊಂಡಿದೆ.

~ ಶ್ರೀರಾಮ ದಿವಾಣ, ಉಡುಪಿ