ಪ್ರಸಿದ್ಧ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಈ ಕಥಾಸಂಕಲನ ಮೊದಲು ಪ್ರಕಟವಾದದ್ದು 1946ರಲ್ಲಿ. ಇಲ್ಲಿನ ಕತೆಗಳಲ್ಲಿ 80 ವರುಷದ ಹಿಂದಿನ ದಕ್ಷಿಣ ಭಾರತದ ಬದುಕಿನ ಹಲವು ಮುಖಗಳನ್ನು ಕಾಣಬಹುದು.
ರಾಮಸ್ವಾಮಿ ಅಯ್ಯಂಗಾರ್ ಅವರು ಕತೆ ಹೇಳುವ ಶೈಲಿ ಬಹಳ ಸರಳ. ನದಿಯ ನೀರು ಜುಳುಜುಳು ಹರಿಯುವಂತೆ ಅವರ ನಿರೂಪಣೆ ಮುಂದುವರಿಯುತ್ತದೆ. ಅವರ ಕತೆಗಳ ಸಂದೇಶ ಓದುಗರ ಮನದಲ್ಲಿ ಅಚ್ಚೊತ್ತುತ್ತದೆ.
“ಇಬ್ಬರು ಹೆಂಡಿರು” ಎಂಬ ಮೊದಲ ಕತೆ ಹೆಸರೇ ಸೂಚಿಸುವಂತೆ ಇಬ್ಬರು ಹೆಂಡಿರ ತಾಕಲಾಟದಲ್ಲಿ ಬದುಕು ನರಕ ಮಾಡಿಕೊಂಡ ಪಿಲ್ಲಯ್ಯನ ಕತೆ. ತನಗಿರುವ ಹತ್ತು ಗುಂಟೆ ಜಾಗದಲ್ಲಿ ವೀಳ್ಯದೆಲೆ, ಬಾಳೆ ಬೆಳೆಸುತ್ತಾ ನೆಮ್ಮದಿಯ ಬಾಳು ಸಾಗಿಸುತ್ತಿದ್ದ ಆತ. ಸುಮಾರು ಇಪ್ಪತ್ತು ವರುಷಗಳ ನಂತರ ಅವನ ಕೈಯಲ್ಲಿ ಚೆನ್ನಾಗಿ ದುಡ್ಡು ಓಡಾಡಿತು. ಇನ್ನಷ್ಟು ಜಮೀನ ಖರೀದಿಸಿದ. ಆಗ ಅವನಲ್ಲೊಂದು ಆಸೆ ಹೆಡೆಯಾಡಿತು. ಪತ್ನಿ ಭಾಗ್ಯಮ್ಮಳಿಂದ ಮಗು ಆಗಿರಲಿಲ್ಲ. ಇನ್ನೊಂದು ಮದುವೆ ಆಗಿ ಮಗು ಪಡೆಯೋಣ ಅನಿಸಿತು. ಎರಡನೇ ಮದುವೆಯಿಂದ ಅವನಿಗೆ ದಕ್ಕಿದ್ದು ನಿರಂತರ ಸಂಕಟ.
ಎರಡನೆಯ ಕತೆ ‘ಸಹಧರ್ಮಿಣಿ”ಇಲ್ಲಿ ರಂಗಸ್ವಾಮಿ ಎಂಬಾತ ತನ್ನ ಹೆಂಡತಿಯನ್ನು ಹೀನಾಯವಾಗಿ ಬಯ್ಯುತ್ತಾ ಪ್ರಾಣಿಯಂತೆ ನಡೆಸಿಕೊಳ್ಳುವುದನ್ನು ಚಿತ್ರಿಸಿದ್ದಾರೆ. ಕತೆಯ ಕೊನೆಯಲ್ಲಿ ನಿರೂಪಕನಿಗೆ ನೆನಪಾಗುತ್ತದೆ: ಇದೇ ರಂಗಸ್ವಾಮಿ ಬಿ.ಎ. ಓದುತ್ತಿದ್ದಾಗ ಒಂದು ಉಪನ್ಯಾಸದಲ್ಲಿ ಹೀಗೆಲ್ಲ ಘೋಷಿಸಿದ್ದ: “ಹೆಂಡತಿ ಗಂಡನ ಅಳಲ್ಲ. ಆಕೆ ಆತನ ಸಹಧರ್ಮಿಣಿ, ಅರ್ಧಾಂಗಿ. ಅವಳಿಗೆ ಪೂರ್ಣ ಸ್ವಾತಂತ್ರ್ಯ ಕೊಡಬೇಕು…”
“ವಿಮೆ ಯಮನನ್ನೇ ಹೆದರಿಸಿತು” ಮೂರನೆಯ ಕತೆ. ಜೀವವಿಮೆಯ ಪ್ರಚಾರ ನಮ್ಮ ದೇಶದಲ್ಲಿ ಶುರುವಾಗಿದ್ದ ಸಮಯದಲ್ಲಿ ಏನೆಲ್ಲ ಅಧ್ವಾನಗಳು ಜರಗುತ್ತಿದ್ದವು ಎಂಬುದನ್ನು ಲಹರಿಯಲ್ಲಿ ವಿವರಿಸುವ ಕತೆ.
ನಾಲ್ಕನೆಯ ಕತೆಯಾದ “ಕವಿತೆ” ಗಂಡ-ಹೆಂಡತಿಯರ ನಡುವಣ ಪತ್ರಗಳ ಮೂಲಕ ಮುಂದುವರಿಯುತ್ತದೆ. ಗಂಡ ಶ್ರೀನಿವಾಸನಿಗೆ ಕವಿತೆ ಬರೆಯುವ ಅಭ್ಯಾಸ. ಹೆಂಡತಿ ಪದ್ಮಾ ಕವಿತೆ ಆಸ್ವಾದಿಸುವ, ವಿಮರ್ಶಿಸುವ ಹಂತಕ್ಕೆ ಏರಬೇಕೆಂಬುದು ಅವನ ಬಯಕೆ. ಅದಕ್ಕಾಗಿ ಅವಳನ್ನು ಕವಿತಾ ವಾಚನ-ವಿಮರ್ಶೆಯ ತರಬೇತಿ ಶಿಬಿರಕ್ಕೆ ಬೆಂಗಳೂರಿಗೆ ಕಳುಹಿಸಿದ. ಇವನು ಪದ್ಮಾಳಿಗೆ ಬರೆಯುವ ಪತ್ರಗಳನ್ನು ಅವಳು ಮತ್ತೆಮತ್ತೆ ಅಪಾರ್ಥ ಮಾಡಿಕೊಳ್ಳುವುದನ್ನು ಕತೆ ನವಿರಾಗಿ ತಿಳಿಸುತ್ತದೆ.
ನಂತರದ ಕೆಲವು ಕತೆಗಳ ಹಂದರ ಇಲ್ಲಿದೆ. “ಬಿಸಿಲು ಕುದುರೆ” ಎಂಬುದು ಬಾಲ್ಯವಿವಾಹದ ಬಗೆಗಿನ ಕತೆ. ತನ್ನ ವೃದ್ಧೆ ತಾಯಿಯ ಹಠದಿಂದಾಗಿ ಶ್ರೀನಿವಾಸ ಮಗಳು ಕರುಣಾಳಿಗೆ ಅವಳ ಹತ್ತನೆಯ ವಯಸ್ಸಿನಲ್ಲಿಯೇ ಮದುವೆ ಮಾಡಿದ. ಆದರೆ ಪ್ಲೇಗಿನಿಂದಾಗಿ ಅವಳ ಗಂಡ ತೀರಿಕೊಂಡು ಕರುಣಾ ವಿಧವೆಯಾದಳು. ಈಗಲೂ ಆ ಅಜ್ಜಿಯ ಒತ್ತಾಯ: ಕರುಣಾಳ ತಲೆ ಬೋಳಿಸಬೇಕೆಂದು. ಆದರೆ ಈಗ ಶ್ರೀನಿವಾಸನಿಗೆ ತನ್ನ ತಪ್ಪಿನ ಅರಿವಾಗಿತ್ತು. ಅವಳನ್ನು ಆಗಿನ ಮದ್ರಾಸಿಗೆ ಕಳಿಸಿದ. ಅಲ್ಲಿ ಪದವೀಧರಳಾದ ಕರುಣಾ ತನ್ನೂರು ಮಲ್ಲಿಗೆಹಳ್ಳಿಗೆ ಮರಳುತ್ತಾಳೆ. ದಂತದ ಗೊಂಬೆಯಂತಿದ್ದ ಕರುಣಾಳನ್ನು ಕಂಡು ಹಳ್ಳಿಯ ಯುವಕರೆಲ್ಲಾ ಅವಳ ಬೆನ್ನು ಬಿದ್ದರು. ಖಾದಿ ಉಡುಪು, ಊರಿನ ಸ್ವಚ್ಛತೆ ಬಗ್ಗೆ ಕರುಣಾಳನ್ನು ಅನುಸರಿಸಲು ಶುರು ಮಾಡಿದರು. ಕೊನೆಗೆ ಕರುಣಾ ತನ್ನ ಭವಿಷ್ಯ ನಿರ್ಧರಿಸಿ ಊರು ಬಿಡುತ್ತಾಳೆ.
“ರೋಡ್ ಎಂಜಿನ್” ಕತೆ ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮ ಎಳೆಗಳನ್ನು ಕಾಣಿಸುತ್ತದೆ. ಕಥಾನಾಯಕ ಬಿ.ಇ. ಪಾಸಾಗಿ, ಅಸಿಸ್ಟೆಂಟ್ ಇಂಜಿನಿಯರ್ ಆಗಿದ್ದವನು. ಅವನಿಗೆ ಮದುವೆಯಾಯಿತು. ಅವನ ಪತ್ನಿ ಮಹಾ ಸಂಶಯ ಪಿಶಾಚಿ. ಅದರಿಂದಾಗಿ ಇವನ ಬಾಳು ನರಕವಾಯಿತು. ಕೊನೆಗೆ ಮನೆ ಬಿಟ್ಟು ಹೊರಟ. ಊರೂರು ಅಲೆದ. ಸಿಕ್ಕಸಿಕ್ಕ ಕೆಲಸ ಮಾಡಿ ಹೊಟ್ಟೆ ಹೊರೆದುಕೊಂಡ. ಈಗ ಒಂದು ರೋಡ್ ಎಂಜಿನ್ ಓಡಿಸುತ್ತಾ ಗಳಿಸುತ್ತಾನೆ. ಅವನಿಗೊಬ್ಬಳು ಸಂಗಾತಿ - ಕುಮುದ. ಇವನ ರೋಡ್ ಎಂಜಿನಿಗೆ ತಗಲಿಸಿದ ಒಂದು ಗಾಡಿಯನ್ನೇ ಅಡುಗೆಕೋಣೆ ಮಾಡಿಕೊಂಡು ಜೊತೆಯಾಗಿ ಬಾಳುತ್ತಿದ್ದಾಳೆ.
ಮುಂದಿನ ಕತೆ “ಪ್ರಾಯಶ್ಚಿತ್ತ”. ಸ್ವಾತಂತ್ರ್ಯ ಹೋರಾಟದ ಸಮಯದ ಒಂದು ಪ್ರೇಮಕತೆ. ತಾನು ಪ್ರೀತಿಸಿದ ಜಾನಕಿಯನ್ನು ಮದುವೆಯಾಗಲೇ ಬೇಕೆಂಬ ಹಂಬಲದಿಂದ ಕೃಷ್ಣರಾಯ ಪೊಲೀಸ್ ಇನ್-ಸ್ಪೆಕ್ಟರ್ ಆಗುತ್ತಾನೆ. ಹಾಗಿದ್ದರೆ ಮಾತ್ರ ನಿವೃತ್ತ ಪೊಲೀಸ್ ಇನ್-ಸ್ಪೆಕ್ಟರನ ಮಗಳಾದ ಜಾನಕಿಯ ಕೈಹಿಡಿಯಲು ಸಾಧ್ಯ ಎಂಬುದು ಅವನಿಗೆ ತಿಳಿದಿತ್ತು. ಅಂತೂ ಅವರ ವಿವಾಹ ನಿಶ್ಚಯವಾಯಿತು. ಆಗಲೇ ಅವನ ಊರಿನಲ್ಲಿಯೂ “ಬ್ರಿಟಿಷರೇ, ಭಾರತದಿಂದ ತೊಲಗಿ” ಹೋರಾಟ ಭುಗಿಲೆದ್ದಿತು. ಪೊಲೀಸ್ ಸೂಪರಿಂಟೆಂಡೆಂಟರ ಆದೇಶದಂತೆ ಕೃಷ್ಣರಾಯನು ಲಾಠಿ ಬೀಸಿದ. ಅದು ತಗಲಿದ್ದು ಜಾನಕಿಗೆ! ಆಕೆಯ ತಲೆಗೆ ಏಟಾಗಿ ಆಸ್ಪತ್ರೆ ಸೇರುತ್ತಾಳೆ. ಹತಾಶನಾದ ಕೃಷ್ಣರಾಯ, ಖಾಕಿ ಉಡುಪು ಕಿತ್ತೆಸೆದು, ಖಾದಿ ಬಟ್ಟೆ ಧರಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾನೆ. ಅವನನ್ನು ಬಂಧಿಸಿ ಜೈಲಿಗೆ ಅಟ್ಟಲಾಯಿತು. ಅಲ್ಲಿಗೆ ಅವನನ್ನು ಕಾಣಲು ಬರುತ್ತಾಳೆ ಜಾನಕಿ.
ದೀರ್ಘ ಕತೆ “ಕನ್ಯಾಕುಮಾರಿ” ಮನಕಲಕುವ ಪ್ರೇಮ-ವಿರಹದ ಕತೆ. “ಸಾವಿರದ ಎರಡನೆಯ ಕತೆ” ಎಂಬುದು ಸಾವಿರದ ಒಂದು ಕತೆಗಳ ಸರಣಿ “ಅರೇಬಿಯನ್ ನೈಟ್ಸ್”ನ (ಯಾವನ ಯಾಮಿನಿ ಕತೆಗಳು) ಮುಂದುವರಿದ ಕತೆ. ಷಹರಿಯಾರ್ ಎಂಬ ಸುಲ್ತಾನ ದಿನಕ್ಕೊಬ್ಬಳು ಕನ್ನಿಕೆಯನ್ನು ಮದುವೆಯಾಗಿ, ಮರುದಿನ ಬೆಳಗ್ಗೆ ಅವಳ ತಲೆ ಕಡಿಸುತ್ತೇನೆ ಎಂಬ ಆದೇಶ ಹೊರಡಿಸುತ್ತಾನೆ. ಅವನ ಮಂತ್ರಿಯ ಮಗಳಾದ ಷಹರಾಜಾದ್ ಎಂಬಾಕೆ ಈ ಸವಾಲನ್ನು ಸ್ವೀಕರಿಸುತ್ತಾಳೆ. ಮೊದಲ ರಾತ್ರಿ ಸುಲ್ತಾನನಿಗೆ ಕತೆ ಹೇಳಲು ಶುರು ಮಾಡುತ್ತಾಳೆ. ನಂತರ ಪ್ರತಿ ದಿನ ರಾತ್ರಿ ಸುಲ್ತಾನನಿಗೆ ಕತೆ ಹೇಳುತ್ತಾ ಅವನ ಮನ ಗೆಲ್ಲುತ್ತಾಳೆ. ಹೀಗೆ 1001 ರಾತ್ರಿ ಕತೆ ಹೇಳಿದ್ದು ನಮಗೆ ಗೊತ್ತಿದೆ. ನಂತರ 1002ನೇ ರಾತ್ರಿ ಏನಾಯಿತು ಎಂಬ ಕತೆ ಇದು.
“ಯಾಗಭಂಗ” ಪುರಾಣ ಕಾಲದ ಕತೆ. ಅಗ್ನಿಗರ್ಭ ಮುನಿಗಳಿಗೆ ಯಾಗ ಮಾಡಬೇಕೆಂಬ ಮಹದಾಸೆ. ಅವರು ಭರದ್ವಾಜ ಮುನಿಗಳೊಂದಿಗೆ ಸಮಾಲೋಚಿಸಿ, ಯಾಗಕ್ಕೆ ಸರ್ವ ಸಿದ್ಧತೆ ಮಾಡುತ್ತಾರೆ. ಹತ್ತಿರದ ಕಾಡಿನಲ್ಲಿ ಪತ್ನಿ ಜಾಂಬಲ ಜೊತೆ ವಾಸವಿದ್ದ ವಿರೂಪಾಕ್ಷನೆಂಬ ರಾಕ್ಷಸನದು ಹೇಗಾದರೂ ಮಾಡಿ ಯಾಗಭಂಗ ಮಾಡಿ ರಾಕ್ಷಸರ ದೊರೆ ರಾವಣನನ್ನು ಮೆಚ್ಚಿಸುವ ಹುನ್ನಾರ. ಅಗ್ನಿಗರ್ಭರ ಯಾಗ ಮುಗಿಯುವ ಹೊತ್ತಿಗೆ ಅವನು ಧಾವಿಸಿ ಬರುತ್ತಾನೆ. ಆದರೆ ಯಾಗ ಪೂರ್ಣವಾಗುತ್ತದೆ. ಅದು ಹೇಗೆಂಬುದರ ಸುತ್ತ ಹೆಣೆದ ಹಾಸ್ಯಭರಿತ ಕತೆ ಇದು.
ಕೊನೆಯ ಕತೆ “ಶಿವರಾತ್ರಿ”. ಕುರೂಪಿಯಾದ ಮಲ್ಲಮ್ಮ ಹನುಮನ ಹಳ್ಳಿಯ ಶಿವ ದೇವಸ್ಥಾನದಲ್ಲಿ ಹತ್ತು ವರುಷ ಶಿವರಾತ್ರಿಯಂದು ರಾತ್ರಿಯುದ್ದಕ್ಕೂ ಹಾಡುತ್ತಾಳೆ. ಅವಳದು ಮಂತ್ರಮುಗ್ಧಗೊಳಿಸುವ ಸ್ವರ. ಅದರಿಂದಾಗಿ ಅವಳು ಹಾಡುವ ವಚನಗಳು ಹೊಸ ಬೆಳಕಿನಲ್ಲಿ ಕೇಳುಗರ ಮನಮುಟ್ಟುತ್ತಿದ್ದವು. ಸುತ್ತಲಿನ ಹತ್ತೂರಿನ ಜನರು ಅವಳ ಅಮೋಘ ಸಂಗೀತ ಸೇವೆಯಲ್ಲಿ ಜಮಾಯಿಸುತ್ತಿದ್ದರು. ಆದರೆ ಮಲ್ಲಮ್ಮ ಹಠಾತ್ ವಿಧಿವಶ ಆಗುತ್ತಾಳೆ. ಇದರಿಂದಾಗಿ ಆ ಹತ್ತೂರಿನ ನಡುವೆ ಬೆಳೆದಿದ್ದ ಬಾಂಧವ್ಯದ ಎಳೆಗಳು ಹೇಗೆ ಕಳಚಿ ಬಿದ್ದವು ಎಂಬುದೇ ಕತೆಯ ಹೂರಣ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!