ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೧೯೨೬ರ ಫೆಬ್ರುವರಿ ೭ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ, ಸ್ವರ್ಣಪದಕದೊಂದಿಗೆ ಎಂ.ಎ. ಪದವಿ ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ದುಡಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿದ್ದರು.

ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ, ದಾವಣಗೆರೆಯಲ್ಲಿ ನಡೆದ ೬೧ ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆಯೇ ಶ್ರೇಷ್ಠ ಬರಹಗಾರರೂ ಆಗಿದ್ದರು. ೨೦೧೩ರ ಡಿಸೆಂಬರ್ ೨೩ರಂದು ನಿಧನರಾದರು.

***

ನೆಲದ ಕರೆ

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ

ನಾಲ್ಕು ಹನಿಯ ಚೆಲ್ಲಿ.

ದಿನ ದಿನವು ಕಾದು ಬಾಯಾರಿ ಬೆಂದೆ

ಬೆಂಗದಿರ ತಾಪದಲ್ಲಿ

 

ನನ್ನೆದೆಯ ಹಸಿರ ಉಸಿರು ಕುಗ್ಗಿದರು

ಬರಲಿಲ್ಲ ನಿಮಗೆ ಕರುಣ.

ನನ್ನ ಹೃದಯದಲಿ ನೋವು ಮಿಡಿಯುತಿದೆ

ನಾನು ನಿಮಗೆ ಶರಣ.

 

ಬಡವಾದ ನನ್ನ ಒಡಲುರಿಯ ಬೇಗೆ

ನಿಮಗರಿವು ಆಗಲಹುದೆ?

ನೀಲಗಗನದಲಿ ತೇಲಿ ಹೋಗುತಿಹ

ನಿಮ್ಮನೆಳೆಯಬಹುದೆ?

 

ಬಾಯುಂಟು ನನಗೆ, ಕೂಗಬಲ್ಲಿ ನಾ

ನಿಮ್ಮೆದೆಯ ಪ್ರೇಮವನ್ನು -

ನೀವು ಕರುಣಿಸಲು ನನ್ನ ಹಸಿರೆದೆಯು

ಉಸಿರುವುದು ತೋಷವನ್ನು.

 

ಓ ಬನ್ನಿ, ಬನ್ನಿ, ಓ ಬನ್ನಿ, ಬನ್ನಿ,

ನನ್ನೆದೆಗೆ ತಂಪ ತನ್ನಿ.

ನೊಂದ ಜೀವರಿಗೆ ತಂಪನೀಯುವುದೆ

ಪರಮಪೂಜೆಯೆನ್ನಿ !

(ಗಾನ ವಿಜ್ಞಾನ ಚೇತನ ಸಂಕಲನದಿಂದ ಆಯ್ದ ಕವನ)