ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ೧೯೩೭ ಜನವರಿ ೨ ರಂದು. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ, ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ ಶಾಲೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಪ್ಪತ್ತೈದು ನಾಟಕಗಳು, ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಮೂರು ಕಾದಂಬರಿಗಳು, ಹತ್ತಕ್ಕೂ ಹೆಚ್ಚು ಜಾನಪದ ಕೃತಿ ರಚಿಸಿದ್ದಾರೆ.
ಕಂಬಾರರ ಐದು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಂಬಾರರ ‘ಜೋಕುಮಾರಸ್ವಾಮಿ’ ಭಾರತದ ಅತ್ಯುತ್ತಮ ನಾಟಕವೆಂದು ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದಿದೆ. ‘ಜೈ ಸಿದ್ಧ ನಾಯಕ’ ವರ್ಧಮಾನ್ ಪ್ರಶಸ್ತಿ ಪಡೆದಿದೆ. ‘ಸಾವಿರ ನೆರಳು’ ಕವನ ಸಂಕಲನ ಕೇರಳ ರಾಜ್ಯದ ‘ಆಶಾನ್’ ಪ್ರಶಸ್ತಿ ಪಡೆಯಿತು. ಭಾರತ ನಾಟಕ ಆಕಡೆಮಿಯ ‘ಶ್ರೇಷ್ಠ ನಾಟಕಕಾರ’ ಪ್ರಶಸ್ತಿ, ಆಂಧ್ರ ಸರ್ಕಾರದ ‘ಅತ್ಯುತ್ತಮ ಕವಿ’ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕಂಬಾರರಿಗೆ ದೊರೆತಿದೆ. ಇವೆಲ್ಲಕ್ಕೂ ಮಿಗಿಲಾಗಿ ಅವರಿಗೆ ಸಾಹಿತ್ಯದ ಮೇರುಪ್ರಶಸ್ತಿಯಾದ ‘ಜ್ಞಾನಪೀಠ’ ಸಂದಿದೆ.
ಕಂಬಾರರು ಸಿನಿಮಾದಲ್ಲಿಯೂ ಸಾಧನೆ ಮಾಡಿದ್ದಾರೆ ಕಂಬಾರರು. ಇವರು 5 ಚಲನಚಿತ್ರಗಳನ್ನೂ, 8 ಸಾಕ್ಷಗಳನ್ನೂ ತಯಾರಿಸಿದ್ದಾರೆ. ಅನೇಕ ಚಲನಚಿತ್ರಗಳಿಗೆ ಹಾಗೂ ಸಾಕ್ಷಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರ ‘ಕಾಡುಕುದುರೆ’ ಭಾರತೀಯ ಪನೋರಮ ಪ್ರವೇಶಿಸಿತು ಹಾಗೂ ಉತ್ತಮ ಹಿನ್ನಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು. 1981ರಲ್ಲಿ ‘ಸಂಗೀತಾ’ ಚಿತ್ರ ರಾಜ್ಯಪ್ರಶಸ್ತಿ ಪಡೆಯಿತು. ಸಂಭಾಷಣೆ, ನಿರ್ದೇಶನ, ಸಂಗೀತ ನಿರ್ದೇಶನ, ಉತ್ತಮ ಚಿತ್ರಕತೆ ಈ ಎಲ್ಲ ಪ್ರಶಸ್ತಿಗಳನ್ನೂ ಕಂಬಾರರು ಪಡೆದಿದ್ದಾರೆ.
ಕೆಲವು ಪ್ರಮುಖ ಕೃತಿಗಳು : ಹೇಳತೆನೆ ಕೇಳ, ತಕರಾರಿನವರು, ಬೆಳ್ಳಿಮೀನು,ಅಕ್ಕಕ್ಕು ಹಾಡುಗಳೇ, ಎಲ್ಲಿದೆ ಶಿವಾಪುರ, ಮತ್ತೆ ಮತ್ತೆ ಶಿವಾಪುರ(ಕವನ ಸಂಗ್ರಹಗಳು), ಋಷ್ಯಶೃಂಗ, ಜೋಕುಮಾರ ಸ್ವಾಮಿ, ಜೈಸಿದ್ದನಾಯಕ, ಕಾಡುಕುದುರೆ, ಸಿರಿಸಂಪಿಗೆ, ತುಕ್ರನ ಕನಸು, ಮಹಾಮಾಯಿ,ಶಿವರಾತ್ರಿ, ಮಹಮೂದ್ ಗವಾನ್ (ನಾಟಕಗಳು), ಕರಿಮಾಯಿ, ಸಿಂಗಾರೆವ್ವ ಮತ್ತು ಅರಮನೆ, ಶಿಖರ ಸೂರ್ಯ, ಶಿವನ ಡಂಗುರ, ಚಾಂದಬೀ ಸರಕಾರ (ಕಾದಂಬರಿಗಳು)
***
ನೀರು ನೀರೇ ನೀರು
ನೀರನಳೆಯುವುದಕ್ಕೆ ನನ್ನಲ್ಲಿ
ಮಾನದಂಡಗಳಿಲ್ಲ.
ಅಳೆಯುವ ಪಾತ್ರೆಯಾಕಾರವಾಗುವ ನೀರು
ಬಿಟ್ಟರೆ ಹರಿದು, ಇಂಗಿದರೆ ಪಾತಾಳಗಂಗೆ-
ಒಣಗಿದರೆ - ಉಗಿಯಾಗಿ, ಹಾರಿ ಸ್ಪೇಸಾಗಿ,
ಸ್ಪೇಸು ಮಡುಕೊಂಡು ತೇಲಾಡುವ
ಮೋಡವಾಗಿ
ಹರಿವ ನದಿ ಹಾವನ್ನ ಹಾರೈಸುವ ಹದ್ದಾಗಿ.
ಜಡೆಯೇರಿದ ಗಂಗೆ
ತೊಡೆಯ ಮಡುವಾಗಿ
ಸುರಿದು ಸೂರ್ಯನಾರಾಯಣನ ವೀರ್ಯವಾಗಿ
ಹಾಡಿ ಹಸಿರಾಗಿ
ಮಿಡಿವ ಕಣ್ಣೀರಾಗಿ
ನಾನಾಗಿ ನೀನಾಗಿ
ಎರಡೊಂದಾಗಿ
ಹಲವಾಗಿ ಅಂದರೆ -
ಅದೇ ಹೇಳಿದೆನಲ್ಲ,
ನೀರನಳೆಯುವುದಕ್ಕೆ ನನ್ನಲ್ಲಿ ಮಾನ
ದಂಡಗಳಿಲ್ಲ.
ಪಾತ್ರೆಯೂ ಇಲ್ಲ.
(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!