ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . ೧೯೩೫ ಡಿಸೆಂಬರ್ ೧೨, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.
ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ಹಿಪ್ಪೇಮರ, ರಮ್ಮಿಯಾಟ, ಸೇರಿದಂತೆ ಹಲವು ಕಾವ್ಯಸಂಕಲನಗಳನ್ನು ಪ್ರಕಟಿಸಿದ್ದಾರೆ.
ನಾಟಕಕಾರರಾಗಿಯೂ ಗುರುತಿಸಿಕೊಂಡಿರುವ ಅಣತಿ ಅವರು ‘ಚಾರ್ವಾಕ’ ೧೯೭೯ (ಎರಡನೇ ಆವೃತ್ತಿ: ೨೦೦೮), ಭೂಮಿ ಹುಣ್ಣಿಮೆ ಹಾಡ (ನಾಟಕ ಅಕಾಡೆಮಿ, ತೀರ್ಪುಗಾರರ ಮೆಚ್ಚುಗೆ ಪಡೆದಿದೆ), ಜೇತವನ ( ಹಿಂದಿಗೆ ಭಾಷಾಂತರವಾಗಿದೆ), ಸೂರ್ಯಸಖಿಯ ಒಕ್ಕಲು, ಹಡೆ ಏರಿಸಿದ ಸೂರ್ಯನ ಕುದುರೆ( ಯು.ಆರ್.ಅನಂತಮೂರ್ತಿಯವರ ಕಥೆಯ ರಂಗರೂಪ), ಕರ್ಪಾಲ್ ಕರ್ಪಾಲ್ (ಪ್ರಹಸನ), ಪರಿಸಾರಕ, ಹೂವಿನ ಸುಗ್ಗಿ( ಮಕ್ಕಳ ನಾಟಕ), ಕೊಳಲ ನ್ಯಾಯ( ಮಕ್ಕಳ ನಾಟಕ), ಶಾಂಪೂ ರಾಜಕುಮಾರಿ( ಮಕ್ಕಳ ನಾಟಕ) ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ. ಕೆಲವು ಕವಿತೆಗಳು ಇಂಗ್ಲೀಷ್, ಹಿಂದಿಗೆ ಅನುವಾದಗೊಂಡಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಅಣತಿ ಅವರು ಶಿವಮೊಗ್ಗದಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಪರಂಪರೆ ಸಾಹಿತ್ಯ ಸಂಸ್ಕೃತಿ ಸಂಪುಟದ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದು, ಚನ್ನರಾಯಪಟ್ಟಣ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಕ್ಕೆ ಪಾತ್ರರಾಗಿದ್ದಾರೆ.
***
ವಲಸೆ ಬರುವ ಹಕ್ಕಿಗಳು
ವಲಸೆ ಬರುವ ಹಕ್ಕಿಗಳು
ನೆಲಸ ಬರುವುದಿಲ್ಲ
ಮರೆಯದೇ ಮುಗಿಲ ಜಾಡು ಹಿಡಿದು
ಬಿಳಿಯೊ ಕರಿಯೊ ರೆಕ್ಕೆ ಹರಡಿ
ಹಳದಿ ಕೆಂಪೊ ಕೊಕ್ಕನು ಚಾಚುತ
ರವಿ ಶಶಿ ತಾರೆ ಕಣ್ಣಲಿ ತುಂಬಿ
ವಾರಿಧಿ ಹಾರಿ ಬೆಟ್ಟವ ಮೀರಿ ಮರವನೇರಿ
ನೊಚ್ಚನೆ ಬದುಕಿನ ಹಚ್ಚನೆ ತಾಣಕೆ
ವಲಸೆ ಬರುತ್ತವೆ ನೆಲಸ ಬರುವುದಿಲ್ಲ
ಪ್ರೀತಿಗೊಂದು ಗೂಡು ಕಟ್ಟಿ
ಕಚ್ಚಿ ಹುಳಿ ಸಿಹಿ ಹಣ್ಣನು’
ಸುರತದ ಋತು ರಾಗದ ಜೋಡಿ
ಹಸಿ ಬಿಸಿ ಭಾವದ ಹದ ಬೆದೆಗೂಡಿ
ಚಿತ್ತೋತ್ಕರ್ಷಕ ಕಲರವದಲ್ಲಿ
ಚೀ ಪೀ ಚಿಲಿಗೆ ಜೋಗುಳ ಹಾಡಲು
ವಲಸೆ ಬರುತ್ತವೆ ನೆಲೆಸ ಬರುವುದಿಲ್ಲ
ತಿಟ್ಟು ತಿರುವಿನ ಮಳೆ ಚಳಿಯಲ್ಲಿ
ಹಾಲ್ದುಂಬಿದ ಕಾಳೂಟದ ಭೂಸಂಗಕೆ
ತಿಳಿ ನೀರಲಿ ಚಿಕ್ಕೆಗಳೋಡನಾಡಲು
ತಾಯಿ ಕಾವೇರಿ ರಂಗ ಧಾಮಕೆ
ಸಂಘಾರಾಮಕೆ ವಲಸೆ ಬರುತ್ತವೆ
ಹಕ್ಕಿಗಳು ನೆಲಸ ಬರುವುದಿಲ್ಲ.
(‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!