ಸಂಪದದಲ್ಲಿ ಕಳೆದ ವಾರದ ತನಕ ನೀವು ವಿವಿದೆಡೆಯಿಂದ ಸಂಗ್ರಹಿತ ಹಾಸ್ಯತುಣುಕುಗಳ ಸವಿಯನ್ನು ಉಂಡಿರುವಿರಿ. ಈಗ ಮತ್ತೊಮ್ಮೆ ಹಳೆಯ ‘ಮಯೂರ’ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಪ್ರಸಂಗಗಳನ್ನು ಓದುವ ಸಮಯ ಬಂದಿದೆ. ಇನ್ನು ಕೆಲವು ವಾರ ‘ಮಯೂರ’ ಹಾಸ್ಯ ಪ್ರಕಟವಾಗಲಿದೆ. ಓದಿ ನಕ್ಕು ಆನಂದ ಪಡಿ…
ಬಲಗಾಲಿಟ್ಟು ಒಳಗೆ ಬಾ
ನನ್ನ ತಂಗಿ ಹೊಸದಾಗಿ ಗಂಡನ ಮನೆಗೆ ಹೋದಾಗಿನ ಅನುಭವ. ಅವಳಿಗೆ ಎಡ-ಅನ್ನುವುದು ಯಾವಾಗಲೂ ಗೊಂದಲದ ವಿಷಯ. ಅವರದು ಪ್ರೇಮ ವಿವಾಹವಾದ್ದರಿಂದ ಅವಳ ಈ ಸಂಕಷ್ಟ ಅವಳ ಗಂಡನಿಗೂ ಗೊತ್ತಿತ್ತು. ಮದುವೆಯ ನಂತರ ಗಂಡನ ಮನೆಗೆ ಕಾಲಿಡುವಾಗ ಅಕ್ಕಿಯ ಸೇರನ್ನು ಬಲಗಾಲಿನಿಂದ ಒದ್ದು ಒಳಗೆ ಕಾಲಿಡುವುದು ಸಂಪ್ರದಾಯ. ಅವಳತ್ತೆ 'ಬಲಗಾಲಿಟ್ಟು ಒಳಗೆ ಬಾರಮ್ಮ' ಅಂದಾಗ, ಇವಳು ಯಾವುದು ಬಲಗಾಲು ಎನ್ನುವ ಗೊಂದಲಕ್ಕೆ ಬಿದ್ದಳು. ಕೂಡಲೇ ಗಂಡ, 'ಈ ಕಾಲು ಕಣೆ ಮಾರಾಯ್ತಿ' ಎಂದು ಅವಳ ತೊಡೆ ಮುಟ್ಟಿ ತೋರಿಸಿ, ಎಚ್ಚರಿಸಿದ್ದಕ್ಕೆ ಅದೇ ಕಾಲು ಎತ್ತಿಟ್ಟಿದ್ದಳು.
-ಸುವರ್ಣ ಮಠ
***
ಮುದುಕ್ಯಾರ ಅಂಗಡಿ
ಲಿಂಗಸಗೂರಿನ ಪ್ರಮುಖ ಬೀದಿಯಲ್ಲಿರುವ ಚಹಾದ ಅಂಗಡಿಯಲ್ಲಿ ಸಂಜೆ ನನ್ನ ಗೆಳೆಯರೊಂದಿಗೆ ಬಿಸಿಬಿಸಿಯಾದ ಬೆಲ್ಲದ ಚಹಾ ಕುಡಿಯುವುದು ನಿತ್ಯದ ರೂಢಿ. ಅವತ್ತು ಎಂದಿನಂತೆ ಸಂಜೆ ಚಹಾ ಕುಡಿಯುತ್ತ, ಹರಟೆ ಹೊಡೆಯುತ್ತಾ ಕುಳಿತಿದ್ದಾಗ ಹಳ್ಳಿಯ ಹೆಂಗಸೊಬ್ಬಳು ಬಂದು, 'ಅಣ್ಣ ಇಲ್ಲಿ ಮುದುಕ್ಯಾರ ಅಂಗಡಿ ಎಲ್ಲಿ ಆದ?' ಎಂದಳು.
ತಬ್ಬಿಬ್ಬಾದ ನಾವು ಇದೇನಪ್ಪಾ ಹೊಸ ಅಂಗಡಿ ಎಂದುಕೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಆಕೆ, 'ಅದೇ ಕಣಣ್ಣ, ಮುದುಕ್ಯಾರ ಅಂಗಡಿ... ಸಬ್ಬು (ಸಾಬೂನು), ಹಲ್ಲು ಮಲಾಮು(ಪೇಸ್ಟ್). ಪೋಡಾರು(ಪೌಡರ್) ಇಂಥವೆಲ್ಲ ಸಿಗ್ತಾವ ನೋಡ್ರಿ' ಅಂದಳಾಕೆ. ಆಕೆ ಹುಡುಕುತ್ತಿರುವುದು ಪಕ್ಕದಲ್ಲಿರುವ ಮೋದಿಕೇರ್ ಹೆಸರಿನ ವಸ್ತು ಸಿಗುವ
ಅಂಗಡಿ ಎಂಬುದು ತಿಳಿಯಿತು. ಮುಸಿಮುಸಿ ನಗುತ್ತಾ ನಾವು ಆಕೆಗೆ ದಾರಿ ತೋರಿದೆವು.
-ಗಿರೀಶ ಸೊಲ್ಲಾಪುರ
***
ಶಬ್ದ ರಹಿತ...
ನನಗೊಂದು ಹೊಸ ಮಿಕ್ಸರ್ ಕೊಳ್ಳಬೇಕಾಗಿತ್ತು. ಖರೀದಿಸಲು ಮಾಲ್ ಗೆ ಹೋದೆ. ತರಹೇವಾರಿ ಮಿಕ್ಸರ್ ಕಮ್ ಗ್ರೈಂಡರ್ ಗಳನ್ನು ಅಲ್ಲಿ ಪೇರಿಸಿಟ್ಟಿದ್ದರು. 'ಶಬ್ಬ ರಹಿತ ಮಿಕ್ಸರ್' ಎಂದು ಬರೆದ ಪೆಟ್ಟಿಗೆ ನನ್ನನ್ನು ತುಂಬಾ ಆಕರ್ಷಿಸಿತು. ಪೆಟ್ಟಿಗೆ ಬಿಚ್ಚಿಸಿ ನೋಡಿದೆ. ಮಿಕ್ಸರ್ ನೋಡಲು ಚಂದವಾಗಿತ್ತು. ಅದನ್ನೇ ಆಯ್ಕೆ ಮಾಡಿ ಹಚ್ಚಿ ತೋರಿಸುವಂತೆ ಅಂಗಡಿಯವನಿಗೆ ವಿನಂತಿಸಿದೆ. ಅದರ ಶಬ್ದವೇನೂ ಇತರ ಕಂಪನಿಗಳ ಮಿಕ್ಸರ್ ಗಿಂತ ಕಡಿಮೆ ಇರಲಿಲ್ಲ. 'ಇದೇನ್ರೀ ಶಬ್ದ ರಹಿತ ಯಂತ್ರ ಅಂತೀರಿ. ಇದೂ ಕೂಡ ಸಾಕಷ್ಟು ಶಬ್ದ ಮಾಡುತ್ತಿಲ್ಲ?' ಎಂದೆ. 'ಸರ್. ಆನ್ ಮಾಡಿದಾಗ ಮಾತ್ರ ಶಬ್ದ ಬರುತ್ತೆ ಸರ್' ಎನ್ನಬೇಕೇ?
ಸುರೇಶ ಹೆಗಡೆ
***
ಚಿತ್ರ ಕಲೆ: ಗಣೇಶ ಆಚಾರ್ಯ
(ಮಯೂರ ಜನವರಿ ೨೦೨೪ರ ಸಂಚಿಕೆಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!