ಯಾವ ಕಡೆಯವರು?
ಸಮಾರಂಭ ಒಂದರಲ್ಲಿ ಭೋಜನಾಲಯದ ಮೇಲ್ವಿಚಾರಕರು ಅಂದಿನ ಭೋಜನದ ವ್ಯವಸ್ಥೆಯನ್ನು ವೀಕ್ಷಿಸುತ್ತಿದ್ದರು. ಪಂಕ್ತಿಯಲ್ಲಿ ಕುಳಿತ ಇಬ್ಬರು ವ್ಯಕ್ತಿಗಳ ಸಂಭಾಷಣೆ ಅವರ ಕಿವಿಗೆ ಬಿತ್ತು. ಒಬ್ಬರು ಇನ್ನೊಬ್ಬರಿಗೆ ಕೇಳುತ್ತಿದ್ದರು.
'ಏನ್ಸಾರ್? ನೀವು ಯಾವ ಕಡೆಯವರು?' ಎಂದ ಒಬ್ಬ-ಇನ್ನೊಬ್ಬ, 'ನಾನೇ? ನಾನು ಗಂಡಿನ ಕಡೆಯವನು... ನೀವು?' ಎಂದ. ಆ ಮತ್ತೊಬ್ಬ ಸ್ವಲ್ಪವೂ ಯೋಚಿಸದೆ. 'ಮದುಮಗಳು ನನ್ನ ಸೋದರಮಾವನ ಬೀಗರ ಕಡೆಯವಳು' ಎಂದ. ಇದನ್ನ ಆಲಿಸಿದ ಮೇಲ್ವಿಚಾರಕ, 'ಸ್ವಾಮೀ, ಇದು ನಾಮಕರಣ ಸಮಾರಂಭ' ಎಂದ.
-ಜಯಮಾಲಾ ಪೈ
***
ಒಂದೇ ಬೆಕ್ಕು
ಒಂದನೇ ತರಗತಿ ಓದುತ್ತಿರುವ ಸುಪರ್ಣಿ ನಮ್ಮ - ಮನೆ ಪಕ್ಕದ ಮುದ್ದು ಹುಡುಗಿ. ಅವತ್ತು ಟೀಚರ್ ಮೇಲೆ ಸಿಟ್ಟು ಮಾಡಿಕೊಂಡು ಬಂದಿದ್ದಳು. ಏನಾಯ್ತು ಎಂದು ಕೇಳಿದೆ. ''ಆಂಟಿ, ಮೇಡಂ ಒಂದು ಪ್ರಶ್ನೆ ಕೇಳಿದ್ರು, 'ನಿನಗೆ ಮೊನ್ನೆ ಎರಡು ಬೆಕ್ಕು, ನಿನ್ನೆ ಎರಡು ಬೆಕ್ಕು ಕೊಟ್ಟಿದ್ದೆ. ಇವತ್ತು ಮತ್ತೆ ಎರಡು ಬೆಕ್ಕು ಕೊಡ್ತೀನಿ, ಹಾಗಾದ್ರೆ ನಿನ್ನ ಬಳಿ ಒಟ್ಟು ಎಷ್ಟು ಬೆಕ್ಕು ಆದವು?' ಅಂತ. ನಾನು ಒಂದು ಅಂದೆ''. 'ನೀನು ಗಣಿತದಲ್ಲಿ ಜಾಣೆ ಅಲ್ಲವೆ? ಅದ್ದೇಗೆ ತಪ್ಪು ಉತ್ತರ ಕೊಟ್ಟೆ?' ಅಂದೆ. 'ಇಲ್ಲ ಆಂಟಿ, ನಾನು ತಪ್ಪು ಹೇಳಿಲ್ಲ, ಸುಳ್ಳು ಹೇಳಿದ್ದು ಅವರೇ. ಮೊನ್ನೆ ಎರಡು, ನಿನ್ನೆ ಎರಡು ಬೆಕ್ಕು ಕೊಟ್ಟೆ ಅಂತ ಹೇಳಿದ್ದ ಸುಳ್ಳು, ಇವತ್ತು ಎರಡು ಬೆಕ್ಕು ಕೊಡೋಕಂತೂ ಸಾಧ್ಯ ಇಲ್ಲ. ಹೀಗಾಗಿ, ನಮ್ಮನೆಯಲ್ಲಿ ಇರೊ ಒಂದು ಬೆಕ್ಕು ಮಾತ್ರ ಸತ್ಯ. ಅದಕ್ಕೇ ನಾನು ಒಂದು ಎಂದೆ'.
-ಅನುಪಮಾ ವಿ.ಎಸ್.
***
ಇಲ್ಲೇ ನೆಗೆದು ಬಿದ್ರೆ ಸಿಗುತ್ತೆ
ವಿದೇಶದಲ್ಲಿಯೇ ಹುಟ್ಟಿ ಬೆಳೆದ ಮಧು ಇತ್ತೀಚೆಗೆ ಅಜ್ಜಿಯ ಮನೆಗೆ ಬಂದು, ಕನ್ನಡ ಕಲಿತು ಮಾತಾಡ್ತಿದ್ದಳು. ಅದೊಂದು ದಿನ ಅಪ್ಪ, ಅಮ್ಮನಿಗೆ ಬಹಳ ಪರಿಚಿತರಾಗಿದ್ದ ದಂಪತಿ ಮನೆಗೆ ಬಂದಿದ್ದರು. "ಕೆಲ ಹೊತ್ತು ಮಾತುಕತೆ, ತಿಂಡಿ, ಉಪಚಾರ ಎಲ್ಲಾ ಮುಗಿದ ಮೇಲೆ ವಾಪಸ್ಸು ಮನೆಗೆ ಹೊರಡಲು ನಿಂತರು. ಸ್ವಲ್ಪ ಸಂಜೆಯಾಗಿದ್ದರಿಂದ ಹೋಗುವುದು ಹೇಗೆ ಎನ್ನುವ ಬಗ್ಗೆ ಮಾತುಕತೆ ನಡೆದಿತ್ತು.
'ಆಟೋರಿಕ್ಷಾ ಎಲ್ಲಿ ಸಿಗುತ್ತೆ?' ಎಂದು ಕೇಳಿದಳು. ಇನ್ನೂ ಅಮ್ಮ ಉತ್ತರಿಸುವುದರೊಳಗೆ ಮಧು, 'ಅಯ್ಯ, ಅದಕ್ಕೇನು ಅಂಟಿ, ಇಲ್ಲೇ ಎರಡು ಹೆಜ್ಜೆ ನೆಗೆದು ಬಿದ್ರೆ ಸಾಕು... ಬೇಕಾದಷ್ಟು ಆಟೋರಿಕ್ಷಾ ಸಿಗುತ್ತೆ...' ಅಂದಿದ್ದೇ ತಡ ನೆಂಟರು ಗಾಬರಿಯಾದರು. ಕೂಡಲೇ ಅವರಮ್ಮ, 'ಮಿಸ್ಟೇಕ್ ಮಾಡ್ಕೊಬೇಡಿ, ಇಲ್ಲೇ ಎರಡ್ಡೆಜ್ಜೆ ಎಡವಿ ಬಿದ್ರೆ... ಅನ್ನೋಕೆ ಹೋಗಿ, ಹಾಗೆ ಅಂದಿದ್ದಾಳೆ. ಕನ್ನಡ ಇನ್ನೂ ಪೂರ್ತಿ ಬರಲ್ಲ ಅಲ್ವಾ? ಏನೊ ಪ್ರಯತ್ನ ಮಾಡ್ತಾ ಇದ್ದಾಳೆ' ಎಂದು ಸಮಾಧಾನ ಮಾಡಿದಳು. ದಂಪತಿ ಪೆಚ್ಚು ನಗೆ ನಗುತ್ತಾ, 'ಪಾಪ, ಕನ್ನಡ ಮಾತಾಡಬೇಕು ಅನ್ನೊ ಮನಸಿದೆಯಲ್ಲ ಅದು ಮುಖ್ಯ. ಇಲ್ಲೇ ಇದ್ದುಕೊಂಡು ಕನ್ನಡ ಮರೀತಾ ಇರೋರು ಎಷ್ಟೊಂದು ಜನ ಇದ್ದಾರೆ ಅಲ್ವಾ?' ಎನ್ನುತ್ತ ಆಚೆ ನಡೆದರು.
-ಸುಮನಾ
***
ನಂಬಿಕೆ...
ಪರಮೇಶಿಗೆ ಅರ್ಜೆಂಟಾಗಿ ಖರ್ಚಿಗೆ ದುಡ್ಡು. ಬೇಕಾಗಿತ್ತು. ಆ ದಿನ ಭಗವಂತನಿಗೆ, 'ಹೇ ಭಗವಂತಾ... ನಿನ್ನ ಕೃಪೆಯಿಂದ ನನಗೆ ಒಂದು ಸಾವಿರ ರೂಪಾಯಿ ದೊರೆತರೆ ಅದರಲ್ಲಿ ಅರ್ಧ ಪಾಲು, ಅಂದರೆ ಐನೂರು ರೂಪಾಯಿ ನಿನಗೇ ಅರ್ಪಿಸುವೆ' ಎಂದು ಕಳಕಳಿಯಿಂದ ಕೇಳಿಕೊಂಡ. ಕಾಕತಾಳೀಯ ಎಂಬಂತೆ ಕೆಲ ನಿಮಿಷಗಳ ತರುವಾಯ ಆತ ಹೋಗುತ್ತಿದ್ದ ದಾರಿಯಲ್ಲಿ ಐನೂರು ರೂಪಾಯಿಯ ಹೊಸ ನೋಟು ಬಿದ್ದಿರುವುದನ್ನು ಕಂಡವ ಫಕ್ಕನೆ ಎತ್ತಿಕೊಳ್ಳುತ್ತ ಮತ್ತೆ ಭಗವಂತನಿಗೆ 'ಇದೇನು ಭಗವಂತಾ... ನಾನೇನು ಅಷ್ಟು ನಂಬಿಕೆಗೆ ಅನರ್ಹನಾದೆನೆ? ನಿನ್ನ ಪಾಲನ್ನೂ ಮುರಿದುಕೊಂಡು ದಯಪಾಲಿಸಿರುವೆಯಲ್ಲಾ' ಎನ್ನುತ್ತಲೇ ಜೇಬಿಗಿಳಿಸಿ ಮುಂದೆ ಸಾಗಿದ.
-ಅರವಿಂದ ಜಿ. ಜೋಷಿ
***
ಕಲೆ: ಗಣೇಶ ಆಚಾರ್ಯ
(ಜನವರಿ ೨೦೨೪ರ ‘ಮಯೂರ’ ಸಂಗ್ರಹ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!