ರವೆಯ ಮಹಿಮೆ

ರವೀಶ ಬೈಕ್ ರೇಸ್‌ನಲ್ಲಿ ಮೊದಲನೇ ಸ್ಥಾನ ಗಳಿಸಿದ. ಮಾಧ್ಯಮದವರೆಲ್ಲ ನಾ ಮುಂದೆ ತಾ ಮುಂದೆ ಎಂದು ರವೀಶನ ವಿಜಯದ ಗುಟ್ಟು ಕೇಳಲು ದಾವಿಸಿದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರವೀಶ. 'ಮನೆಯಿಂದ ಹೊರಡುವಾಗ ನನ್ನ ಹೆಂಡತಿ 2 ಕೆಜಿ ಉಪ್ಪಿಟ್ಟು ರವೆ ತರಲು ಹೇಳಿದ್ದಳು. ರೇಸ್‌ನ ಗದ್ದಲದಲ್ಲಿ ನಾನು ಮರೆತು ಬಿಟ್ಟಿದ್ದೆ. ರೇಸ್ ಶುರುವಾಗುವ ಹೊತ್ತಿಗೆ ಅವಳು ಹೇಳಿದ್ದು ನೆನಪಾಯ್ತು... ಅಷ್ಟೇ'.

-ಮಯೂರ ಮಸೂತಿ

***

ಚೆಕ್ ಲೀಫ್

ಅಜ್ಜಿಯೊಂದಿಗೆ ಬ್ಯಾಂಕಿಗೆ ಬಂದ ಮೊಮ್ಮಗ ಆಕೆಗೆ, 'ನೀನಿಲ್ಲಿಯೇ ಕೂತಿರು, ನಾನು ಹೋಗಿ ಚೆಕ್ ಲೀಫ್ ತರ್ತೀನಿ' ಎಂದು ಹೇಳಿ ಹೋಗಿ ಒಂದು ಚೆಕ್ ತಂದು ಅಜ್ಜಿಯ ಸಹಿ ಪಡೆದು ಹಣ ತರಲು ಹೋದ, ಬಹಳ ಉದ್ದದ ಸರತಿಯಲ್ಲಿ ನಿಂತು ಹಣ ಪಡೆದು ಬಂದಾಗ ಅಜ್ಜಿ ಸೋಫಾದ ಮೇಲೆ ಕುಳಿತು ನಿದ್ದೆಗೆ ಜಾರಿದ್ದಳು. ಅವಳನ್ನು ಎಚ್ಚರಗೊಳಿಸಿ. 'ಅಯ್ತು, ಮನೆಗೆ ಹೋಗೋಣ ನಡಿ' ಎಂದಾಗ ಅಜ್ಜಿ ಕೋಪಗೊಂಡು, 'ಚಕ್ಕಲಿ ತರ್ತೀನಿ ಅಂದ್ಯಲ್ಲೊ? ಎಲ್ಲಿ ಚಕ್ಕಲಿ? ಬರೀ ಕೈಯಲ್ಲಿ ಬಂದಿದ್ದೀಯ?' ಎಂದು ಕೂಗಾಡಿದಳು. ಮೊಮ್ಮಗ ಕಂಗಾಲಾದ.

-ವಿ.ನಾಗೇಂದ್ರ

***

ಕಲ್ಪನಾಶೀಲತೆ...

ಸಂದರ್ಶನದ ಮುಖಾಂತರ ಪತ್ರಿಕಾಲಯವೊಂದರಲ್ಲಿ ಕೆಲಸ ಪಡೆದಿದ್ದ ಗೋವಿಂದನನ್ನು ಒಂದೆರಡು ದಿನದಲ್ಲಿಯೇ ತಮ್ಮ ಕ್ಯಾಬಿನ್‌ಗೆ ಕರೆಸಿಕೊಂಡ ಸಂಪಾದಕರು, 'ಏನ್ರಿ ಗೋವಿಂದ? ಏಳು ವರ್ಷಗಳ ಅನುಭವ ಇದೆ ಅಂತ ಹೇಳಿಕೊಂಡು ಕೆಲಸ ಗಿಟ್ಟಿಸಿಕೊಂಡಿರಿ. ಆದರೆ ಇದೇ ನಿಮ್ಮ ಮೊದಲ ಕೆಲಸ ಅಂತ ಗೊತ್ತಾಯ್ತು. ಯಾಕೆ ಹೀಗೆ ಮಾಡಿದ್ರಿ?' ಎಂದರು. ಅದಕ್ಕೆ ಗೋವಿಂದ, 'ಹೌದು ಸರ್, ನೀವು ಜಾಹೀರಾತಿನಲ್ಲಿ ಕಲ್ಪನಾಶೀಲ ಬರಹಗಾರನಿಗೆ ಮೊದಲ ಆದ್ಯತೆ ಎಂದು ಹಾಕಿಸಿದ್ರಿ. ಅದಕ್ಕೇ ನಾನು ನನ್ನ ಕಲ್ಪನಾಶೀಲತೆಯನ್ನು ಪ್ರದರ್ಶಿಸಿದೆ' ಎಂದಾಗ ಸಂಪಾದಕರು ಸುಸ್ತು.

-ಶಂಕರೇಗೌಡ ತುಂಬಕೆರೆ

*** 

ಯುದ್ಧದ ಬಗ್ಗೆ ಪ್ರಬಂಧ

ಪ್ರಾಥಮಿಕ ಶಾಲೆಯಲ್ಲಿ ಟೀಚರ್ ವಿದ್ಯಾರ್ಥಿಗಳಿಗೆ ಹೇಳಿದರು, ‘ನೀವೀಗ ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿದ್ದೀರಿ ಎಂದು ಭಾವಿಸಿಕೊಂಡು ಯುದ್ಧದ ಬಗ್ಗೆ ಒಂದು ಪ್ರಬಂಧ ಬರೆಯಿರಿ’ ಎಂದು. ಎಲ್ಲಾ ವಿದ್ಯಾರ್ಥಿಗಳು ಬರೆಯುತ್ತಿದ್ದರು. ನಂಜ ಬರೆಯದೆ ಹಾಗೇ ಸುಮ್ಮನೆ ಕುಳಿತುಕೊಂಡಿದ್ದ. ಟೀಚರ್, ನಂಜ, ನೀನ್ಯಾಕೆ ಏನೂ ಬರೀದೆ ಹಾಗೇ ಕೂತಿದ್ದೀಯಾ? ಎಂದು ಪ್ರಶ್ನಿಸಿದರು. ಈಗ ನಂಜ. 'ಯುದ್ಧದ ಆರಂಭದಲ್ಲಿಯೇ ಶತ್ರುಗಳು ನನ್ನನ್ನು ಕೊಂದುಬಿಟ್ರಲ್ಲ ಸಾರ್, ಇನ್ನೇನು ಬರೆಯಾಕಾತದೆ?' ಎಂದ.

-ವಿ. ಹೇಮಂತ ಕುಮಾರ್

ಕಲೆ: ಗಣೇಶ ಆಚಾರ್ಯ

(ಸಂಗ್ರಹ : ಮಯೂರ ಫೆಬ್ರವರಿ ೨೦೨೪)