ಹಾನರೇಬಲ್ ಜಜಸ್
ನನ್ನ ತಂಗಿಯ ಪುತ್ರ ಶ್ರೀಹರಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನು ಶಾಲೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು. ಮನೆಯಲ್ಲಿ ಎಲ್ಲರೂ ಸೇರಿ ಅವನಿಗೆ ತರಬೇತಿ ಕೊಡುತ್ತಿದ್ದರು Honorable Judges ಎಂದು ಆರಂಭಿಸಬೇಕಿತ್ತು. ಎಲ್ಲರೂ ಅವನ ಮುಂದೆ ಪ್ರೇಕ್ಷಕರ ರೂಪ ಧರಿಸಿ ಗಂಭೀರವಾಗಿ ಕೂತಿದ್ದನ್ನು ಕಂಡ ಅವನು ಗಡಿಬಿಡಿಯಲ್ಲಿ 'ಹಾರಿಬಲ್' ಎಂದು ಆರಂಭಿಸಿದ ಎಲ್ಲರೂ ನಗೆಗಡಲಲ್ಲಿ ತೇಲಾಡಿದರು.
ಪಂಚಾಂಗಂ ಸುಧಾ
***
ಮುದ್ದೆ ಊಟ ಒಳ್ಳೇದು
ಪರಮೇಶಿಯ ಮಿತ್ರನೊಬ್ಬ ಪ್ರೀತಿಸಿದ ಹುಡುಗಿಯನ್ನು ಮದುವೆಯಾದ. ಆತನ ಆಹಾರ ಶೈಲಿ ಬೇರೆ, ಆಕೆಯದ್ದೇ ಬೇರೆ. ಊಟ, ತಿಂಡಿ ಸಾಧ್ಯವಾದಷ್ಟೂ ಅಪ್ಪ ಅಮ್ಮ ಏನು ಇಷ್ಟಪಡುತ್ತಾರೆ ಎನ್ನುವುದನ್ನು ಗಮನಿಸಿ ಅದನ್ನೇ ಮಾಡೆಂದು ಆತ ಮುಂಚಿತವಾಗಿಯೇ ಸೂಚಿಸಿದ್ದ. ಅಂದು ಊಟಕ್ಕೆ ಬಂದವನಿಗೆ ಮಡದಿ ಅನ್ನ ಸಾರು ಬಡಿಸಿದ್ದಳು. ಅನ್ನ ವಿಪರೀತ ಮುದ್ದೆ ಮುದ್ದೆಯಾಗಿತ್ತು. ಇದ್ಯಾಕೆ ಹೀಗಿದೆ ಎಂದು ಕೇಳಿದ. ಅದಕ್ಕವಳು, 'ಅತ್ತೆ ಮಾವ ಊಟಕ್ಕೆ ಮುದ್ದೆ ಆದ್ರೆನೇ ಸಮಾಧಾನ ಅಂತ ಮಾತಾಡ್ಕೊತಿದ್ರು... ಅನ್ನ ಮುದ್ದೆ ಮುದ್ದೆಯಿದ್ದರೆ ಅವರಿಗೂ ತಿನ್ನಲು ಸರಾಗ. ಅದಕ್ಕೇ ಮಾಡಿದೆ' ಎಂದಳು. ಅವರು ಹೇಳಿದ್ದು ರಾಗಿ ಮುದ್ದೆ ಅವಳು ಗ್ರಹಿಸಿದ್ದು ಮುದ್ದೆ ಅನ್ನ.
-ಸಂದೇಶ್ ಎಚ್ ನಾಯ್ಕ್
***
ಬೆಸುಗೆ... ಬೆಸುಗೆ...
ಆ ದಿನ ವಾಟ್ಸಾಪಿನ ಪರದೆಯಲ್ಲಿ ಗೆಳೆಯನೊಬ್ಬನ ವಿವಾಹ ವಾರ್ಷಿಕೋತ್ಸವಕ್ಕೆ ಇತರ ಗೆಳೆಯರೆಲ್ಲರೂ ಶುಭಾಶಯ ಕೋರುತ್ತಿದ್ದರು. ಅವುಗಳಲ್ಲಿ ನನ್ನ ಪಾನಪ್ರಿಯ ಗೆಳೆಯನೊಬ್ಬ ತನ್ನ ವಾಟ್ಸಾಪಿನ ಗೋಡೆಯಲ್ಲಿ 'ಹ್ಯಾಪಿ ವೆಲ್ಡಿಂಗ್ ಆನಿವರ್ಸರಿ ಎಂದು ಬರೆದುಕೊಂಡಿದ್ದ. ಪದದೋಷವನ್ನು ತಿದ್ದಲು ಅವನಿಗೆ ಕರೆಮಾಡಿದ ನಾನು 'ಲೇ ಅದು ವೆಡ್ಡಿಂಗ್ ಅನಿವರ್ಸರಿ, ವೆಲ್ಡಿಂಗ್ ಅನಿವರ್ಸರಿ ಅಲ್ಲ. ಸರಿಮಾಡು ಅದನ್ನ' ಎಂದೆ. ಅವನು, 'ಲೇ ಎರಡೂ ಒಂದಾ ಅಲ್ಲೇನಲೇ? ವೆಡ್ಡಿಂಗ್ ಅಂದ್ರೂ ಬೆಸುಗಿ, ವೆಲ್ಡಿಂಗ್ ಅಂದ್ರೂ ಬಿಸುಗಿ ಅಲ್ಲೇನ್?' ಎಂದಾಗ ಆ ಕ್ಷಣಕ್ಕೆ ಅವನಲ್ಲಿ ದಿವ್ಯಜ್ಞಾನಿಯೊಬ್ಬನ ದರ್ಶನವಾದಂತಾಯಿತು.
-ಮಹೇಶ್ವರ ಹುರುಕಡ್ಡಿ
***
ಪಲ್ಲಿ ಚಟ್ಟೆ... ಸ್ಪಾಂಜಿ ದೋಸ...
ಕಳೆದ ವಾರ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಹೋಗಿದ್ದೆವು. ಮುಳಬಾಗಿಲಿನಲ್ಲಿ ಹೊಟ್ಟೆ ಚುರು ಚುರು ಅನ್ನುತ್ತಿತ್ತು ಇರಲಿ ಎನ್ನುತ್ತಾ ಚಿತ್ತೂರಿನಲ್ಲಿ ಬಸ್ ಇಳಿದ ಕೂಡಲೆ ತಿಂಡಿ ಮಾಡಲು ಹೊಟೇಲಿಗೆ ಹೋಗಿ, ಮಸಾಲೆ ದೋಸೆ ಅರ್ಡರ್ ಮಾಡಿದೆವು ದೋಸೆ ಚಟ್ಟಿಯ ಘಮ ಪಂಚೇಂದ್ರಿಯಗಳನ್ನೆಲ್ಲ ಬಡಿದೆಬ್ಬಿಸಿತು. ಸುಮ್ಮನಿರಲಾರದೆ 'ಇದು ಏನು ಚಟ್ಟಿ ?' ಎಂದೆ. ಮಾಣಿಗೆ ಕನ್ನಡ ಅರ್ಥವಾಯಿತು ಆದರೆ ಉತ್ತರವನ್ನು ತೆಲುಗಿನಲ್ಲಿಯೇ 'ಇದಿ ಪಲ್ಲಿ ಚಿಟ್ನಿ’ ಎಂದ ತಮಿಳಿನ ಗೆಳತಿ ಮುಖ ಹುಳ್ಳಗೆ ಮಾಡಿದಳು. ‘ಹೇಗ್ ಮಾಡ್ತೀರಿ?' ಅಂದೆ. ಅದಕ್ಕವನು ‘ ಪಲ್ಲಿಲನು ಧಂಚಿ, ವೆಯಿಂಚೆ ಪುಡಿಛ್ಏಸಿ..”ಎನ್ನುತ್ತಿದ್ದಂತೆ ವಾಕರಿಕೆ ಬರಲು ಶುರುವಾಯಿತು. ತಮಿಳಿನಲ್ಲಿ 'ಪಲ್ಲಿ' ಅಂದರೆ 'ಹಲ್ಲಿ' ಗೂಗಲಮ್ಮನ ಸಹಾಯ ವಡೆದು ನೋಡಿದರೆ. ತೆಲುಗಲ್ಲಿ 'ಪಲ್ಲಿ' ಅಂದರೆ ಕನ್ನಡದಲ್ಲಿ 'ನೆಲಗಡಲೆ' ಅಂತಿತ್ತು. ಸದ್ಯ! ಬದುಕಿತು ಬಡ ಜೀವ ಅನ್ನುವ ಹಾಗಾಯಿತು. 'ಚೆನ್ನಾಗಿದೆ ಪಲ್ಲಿ ಚಿಟ್ಟಿ ಸ್ಟಾಂಜಿ ದೋಸೆ' ಎಂದೆ.
ಸುಮಾವೀಣಾ
ಕಲೆ: ಗಣೇಶ ಆಚಾರ್ಯ
(ಫೆಬ್ರವರಿ ೨೦೨೪ರ ಸಂಚಿಕೆಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!